`ಸಿಂಹ-ಕಾಡು ನಾಯಿ’ ಭಾಗವತ್ ಹೇಳಿಕೆ ಬಗ್ಗೆ ಪ್ರತಿಪಕ್ಷಗಳ ಆಕ್ರೋಶ

ಚಿಕಾಗೋ, ಸೆ. ೯- ರಾಷ್ಟ್ರೀಯ ಸ್ವಯಂ ಸೇವಕ್ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ `ಸಿಂಹ-ಕಾಡು ನಾಯಿ’ಗಳ ಹೇಳಿಕೆ ವಿರೋಧ ಪಕ್ಷಗಳು ಆಕ್ರೋಶಗೊಳ್ಳುವಂತ ಮಾಡಿದೆ.

ಹಿಂದೂಗಳು ಒಟ್ಟಾಗಬೇಕು. ಏಕಾಂಗಿಯಾದರೆ ಉಳಿಗಾಲವಿಲ್ಲ ಎಂಬ ಅರ್ಥದಲ್ಲಿ ಅವರು `ಸಿಂಹ ತನ್ನ ಸ್ವಂತ ಕಾಡಲ್ಲೇ ಒಂಟಿಯಾದರೆ ಬೇಟೆನಾಯಿಗಳು ಅದನ್ನು ಬೇಟೆಯಾಡಿ ಬಿಡುತ್ತವೆ’ ಎಂದು ನಿನ್ನೆ ಚಿಕಾಗೋದ 2ನೇ ವಿಶ್ವ ಹಿಂದೂ ಸಮ್ಮೇಳನದಲ್ಲಿ ಹೇಳಿದ್ದರು.

ಈ ಹೇಳಿಕೆಯನ್ನೇ ವಿರೋಧ ಪಕ್ಷಗಳು ಈಗ ಬಿಜೆಪಿ-ಆರ್‌ಎಸ್‌ಎಸ್ ವಿರುದ್ಧ ವಿರೋಧ ಪಕ್ಷಗಳನ್ನು ಒಟ್ಟುಗೂಡಿಸುವ ಅಸ್ತ್ರವನ್ನಾಗಿಸಿಕೊಳ್ಳುತ್ತಿವೆ. ಮೋಹನ್ ಭಾಗವತ್ ಅವರು ಬೇಟೆನಾಯಿಗಳು ಎಂದಿರುವುದು ವಿರೋಧ ಪಕ್ಷಗಳನ್ನು ಎಂದು ವಿರೋಧ ಪಕ್ಷಗಳು ವ್ಯಾಖ್ಯಾನಿಸುತ್ತಿವೆ.

ಹಿಂದೂಕಾರ್ಡ್

2019 ಲೋಕಸಭೆ ಚುನಾವಣೆ ಆಡಳಿತ ಮತ್ತು ವಿರೋಧ ಪಕ್ಷಗಳು ಎರಡಕ್ಕೂ ನಿರ್ಣಾಯಕ ತಿರುವು ನೀಡುವಂತಹ ಕಣವಾಗಿದೆ. ಹೀಗಾಗಿ, ಅದನ್ನು ಗೆಲ್ಲಲು ಹಿಂದೂಕಾರ್ಡ್ ಬಳಕೆಗೆ ಬಿಜೆಪಿ ಮುಂದಾಗುತ್ತಿದೆ ಎಂದು ವಿರೋಧ ಪಕ್ಷಗಳು ಒಂದೇ ಸಮನೆ ಬಿಜೆಪಿಯನ್ನು ಟೀಕಿಸುತ್ತಿರುವಾಗಲೇ ಬಿಜೆಪಿಯ ಮಾತೃಸಂಸ್ಥೆ ಆರ್‌ಎಸ್‌ಎಸ್ ಹಿಂದೂಗಳ ಒಗ್ಗಟ್ಟಿನ ಮಂತ್ರ ಪಠಿಸಿರುವುದು ವಿರೋಧ ಪಕ್ಷಗಳು ಬಿಜೆಪಿಯನ್ನು ಟೀಕಿಸಲು ಮತ್ತಷ್ಟು ಒತ್ತುಕೊಟ್ಟಂತಾಗಿದೆ.

1983ರಲ್ಲಿಯ ವಿಶ್ವ ಹಿಂದೂ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದ ಅವರ ಐತಿಹಾಸಿಕ ಧಾರ್ಮಿಕ ಭಾಷಣದ 125ನೇ ವರ್ಷಾಚರಣೆ ಸ್ಮರಣಾರ್ಥ ಚಿಕಾಗೋದಲ್ಲಿ 2ನೇ ವಿಶ್ವಹಿಂದೂ ಸಮ್ಮೇಳನ ಆಯೋಜಿಸಲಾಗಿದೆ. ನಿನ್ನೆ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಮೋಹನ್ ಭಾಗವತ್, ಹಿಂದೂಗಳು ಒಂದು ಸಮಾಜವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಹಿಂದೂ ಸಮಾಜ ಸಮೃದ್ಧಗೊಳ್ಳುತ್ತದೆ. ಹಿಂದೂಗಳೆಲ್ಲ ಒಂದಾಗುವುದೇ ಕಷ್ಟದ ಕೆಲಸ. ಒಂದಾಗದೆ ಒಂಟಿ ಒಂಟಿಯಾದರೆ ಕಾಡಿನ ಬೇಟೆನಾಯಿಗಳಿಗೆ ಸಿಕ್ಕಿ ಒಂಟಿ ಸಿಂಹದಂತಾಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದ್ದರು.

Leave a Comment