ಸಿಂಧುವಿಗೆ ನಿರಾಸೆ,ಮತ್ತೊಮ್ಮೆ ಗೆದ್ದು ಬೀಗಿದ ಮರಿನ್

ಹೈದರಾಬಾದ್- ಚೆನ್ನೈ ಸ್ಮಾಶರ್ಸ್ ತಂಡದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು, ಮೂರನೇ ಆವೃತ್ತಿಯ ಪ್ರಿಮೀಯರ್ ಬ್ಯಾಡ್ಮಿಂಟನ್ ಲೀಗ್‌’ನ ಮೊದಲ ಪಂದ್ಯದಲ್ಲಿ ಹೈದರಾಬಾದ್ ಹಂಟರ್ಸ್‌ನ ಕರೋಲಿನಾ ಮರಿನ್ ಎದುರು ಪರಾಭವ ಹೊಂದಿದ್ದಾರೆ. ಇದರೊಂದಿಗೆ ಹೈದರಾಬಾದ್ ಹಂಟರ್ಸ್ 1-0 ಮುನ್ನಡೆ ಸಾಧಿಸಿದೆ.

ಇಲ್ಲಿನ ಗಚ್ಚಿಬೌಳಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮೊದಲ ದಿನದಾಟದ ಪಂದ್ಯದಲ್ಲಿ ಹೈದರಾಬಾದ್ ತಂಡದ ಕರೋಲಿನಾ ಮರಿನ್ 11-8, 12-14, 11-2 ಗೇಮ್‌’ಗಳಿಂದ ಚೆನ್ನೈ ತಂಡದ ಸಿಂಧು ಎದುರು ಗೆಲುವು ಸಾಧಿಸಿದರು.

ಪಂದ್ಯದ ಆರಂಭದಿಂದಲೂ ಪ್ರಭಾವಿ ಹೊಡೆತಗಳ ಮೂಲಕ ಗಮನಸೆಳೆದ ಮರಿನ್, ಸಿಂಧು ಅವರನ್ನು ಅಂಕಗಳಿಕೆಯಲ್ಲಿ ಹಿಂದಿಕ್ಕಿದರು. ಒಂದು ಹಂತದಲ್ಲಿ ಮರಿನ್ 2-4ರಿಂದ ಹಿಂದೆ ಬಿದ್ದಿದ್ದರು. ಆದರೆ ನಂತರದ ಆಟದಲ್ಲಿ ಎಚ್ಚೆತ್ತುಕೊಂಡ ಮರಿನ್ 6-4ರಿಂದ ಮುನ್ನಡೆದರು. ಮತ್ತಷ್ಟು ಪ್ರಭಾವಿ ಆಟಕ್ಕೆ ಮುಂದಾದ ಸಿಂಧು 6-6ರಿಂದ ಸಮಬಲ ಸಾಧಿಸಿದರು. ನಂತರ ಮರಿನ್ 8-6, 9-7 ಮತ್ತು 10-7ರ ಗೇಮ್‌’ಗಳಿಂದ ಮುನ್ನಡೆಯೊಂದಿಗೆ ಸೆಟ್ ಜಯಿಸಿದರು.

ಎರಡನೇ ಗೇಮ್‌’ನ ಆರಂಭದಲ್ಲಿ ಮರಿನ್ 3-0ಯ ಮುನ್ನಡೆ ಪಡೆದಿದ್ದರು. ನಂತರ ಪ್ರಭಾವಿ ಆಟಕ್ಕೆ ಮುಂದಾದ ಸಿಂಧು ನಿರಂತರವಾಗಿ ಅಂಕಗಳಿಸುತ್ತಾ ಸಾಗಿದರು. ಹಾಗೆ ಅಂತಿಮವಾಗಿ 2 ಪಾಯಿಂಟ್ಸ್‌ಗಳ ಅಂತರದಲ್ಲಿ ಮರಿನ್ ಅವರನ್ನು ಹಿಂದಿಕ್ಕುವ ಮೂಲಕ ತಿರುಗೇಟು ನೀಡಿದರು. ತಲಾ ಒಂದು ಗೇಮ್‌’ಗಳಲ್ಲಿ ಮುನ್ನಡೆ ಸಾಧಿಸಿದ ಆಟಗಾರ್ತಿಯರಿಗೆ ಮೂರನೇ ಸೆಟ್ ನಿರ್ಣಾಯಕ ಎನಿಸಿತ್ತು.

3ನೇ ಗೇಮ್‌’ನಲ್ಲಿ ಮರಿನ್ ಆರಂಭದಲ್ಲಿ 6-1ರಿಂದ ಮುನ್ನಡೆ ಕಾಯ್ದುಕೊಂಡರು. ಆನಂತರವೂ ಬಲಿಷ್ಟ ಹೊಡೆತಗಳ ಮೂಲಕ ಸಿಂಧುವನ್ನು ಕಂಗೆಡಿಸಿದ ರಿಯೊ ಒಲಿಂಪಿಕ್ಸ್ ಚಾಂಪಿಯನ್ ಅಂತಿಮವಾಗಿ ಗೆಲುವಿನ ನಗೆ ಬೀರಿದರು.

Leave a Comment