ಸಿಂಧನೂರು 20, ಮಾನ್ವಿ ನಾಲ್ವರ ಪತ್ತೆ – ಆತಂಕ

ದೆಹಲಿ ನಿಜಾಮುದ್ದೀನ್ ಧಾರ್ಮಿಕ ಸಭೆ : ಪಾಲ್ಗೊಂಡವರ ಸಂಖ್ಯೆ ಹೆಚ್ಚಳ
ಸಿಂಧನೂರು/ಮಾನ್ವಿ.ಏ.03- ದೆಹಲಿಯ ನಿಜಾಮುದ್ದೀನ್ ಪ್ರದೇಶದ ಅಲಾಮಿ ಮಾರ್ಕಜ್ ಬಂಗ್ಲೇವಾಲೆ ಮಸ್ಜೀದಿನಲ್ಲಿ ಮಾ.13-15ರ ವರೆಗೆ ನಡೆದ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡವರ ಪಟ್ಟಿ ಜಿಲ್ಲೆಯಲ್ಲಿ ಒಟ್ಟು ಸಂಖ್ಯೆ 26ಕ್ಕೇರಿರುವುದು ಆತಂಕಕ್ಕೆ ದಾರಿ ಮಾ‌ಡಿದೆ.
ರಾಯಚೂರು ಜಿಲ್ಲೆಯಿಂದ ಈ ಧಾರ್ಮಿಕ ಸಮಾವೇಶಕ್ಕೆ ಯಾರು ಪಾಲ್ಗೊಂ‌ಡಿಲ್ಲ ಎನ್ನುವ ನಿರಾಳದ ಮಧ್ಯೆ ನಿನ್ನೆ ಮಸ್ಕಿ ತಾಲೂಕಿನ ಇಬ್ಬರು ಈ ಸಮಾವೇಶಕ್ಕೆ ಪಾಲ್ಗೊಂಡಿರುವ ಸಂಗತಿ ಬೆಳಕಿಗೆ ಬಂದ ಬೆನ್ನಹಿಂದೆಯೇ ಮಾನ್ವಿಯಲ್ಲಿ ನಾಲ್ವರು ಮತ್ತು ಸಿಂಧನೂರಿನಲ್ಲಿ ಒಟ್ಟು 20 ಜನ ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ ಎನ್ನುವ ಸಂಗತಿ ಭಾರೀ ತಳಮಳಕ್ಕೆ ದಾರಿ ಮಾಡಿದೆ.
ಪೊಲೀಸ್ ನೆರವಿನೊಂದಿಗೆ ಆರೋಗ್ಯ ಇಲಾಖೆ ಮತ್ತು ಆಯಾ ಭಾಗದ ದಂಡಾಧಿಕಾರಿಗಳು ಸಮಾವೇಶದಲ್ಲಿ ಪಾಲ್ಗೊಂಡವರ ಮನೆಗಳಿಗೆ ತೆರಳಿ ಅವರನ್ನು ತಪಾಸಣೆ ನಡೆಸಿ, ಆರೋಗ್ಯ ದಿಗ್ಬಂಧನಾ ನಿಗಾವಹಿಸಲಾಗಿದೆ. ದೆಹಲಿ ನಿಜಾಮುದ್ದಿನ್ ಮಾರ್ಕಜ್ ಜಮಾತೆ ಧರ್ಮಸಭೆಗೆ ಹೋಗಿ ಬಂದವರಲ್ಲಿ ಕೊರೊನಾ ಸೋಂಕು ಕಂಡು ಬಂದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ದೆಹಲಿಗೆ ಹೋಗಿ ಬಂದವರ ಬಗ್ಗೆ ಮಾಹಿತಿ ಸಂಗ್ರಹ ಮಾಡುತ್ತಿದ್ದು, ಕೆಲವರು ಮಾಹಿತಿ ಕೊಟ್ಟರೆ ಇನ್ನೂ ಕೆಲವರು ಮಾಹಿತಿ ಕೊಡದೆ ತಪ್ಪಿಸಿ ಕೊಳ್ಳುತ್ತಿದಾರೆ.
ದೆಹಲಿ ಧರ್ಮಸಭೆಗೆ ಹೋಗಿ ಬಂದವರೆಲ್ಲರ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳಿಗೆ ತೊಂದರೆಯಾಗಿದೆ. ದೆಹಲಿಗೆ ಹೋಗಿ ಬಂದವರು ತಾವೆ ಸ್ವಯಂ ಪ್ರೇರಿತವಾಗಿ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಪರೀಕ್ಷೆ ಮಾಡಿ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆಂದು ಸರ್ಕಾರ ಪ್ರಕಟಿಸಿದ್ದರೂ, ಯಾರು ಸಮಗ್ರ ಮಾಹಿತಿ ನೀಡದಿರುವುದರಿಂದ ಅಧಿಕಾರಿಗಳಿಗೆ ತಲೆನೋವಾಗಿ ಮಾರ್ಪಟ್ಟಿದೆ.
ಸಿಂಧನೂರು ತಾಲೂಕಿನ ತುರ್ವಿಹಾಳ 1, ಕಲ್ಮಂಗಿ 2, ಗುಂಜಳ್ಳಿ ಗ್ರಾಮದಿಂದ 7 ಜನ, ಸಿಂಧನೂರು ನಗರದಿಂದ 20 ಜನ ದೆಹಲಿ ಧರ್ಮ ಸಭೆಗೆ ಹೋಗಿ ಬಂದಿದ್ದಾರೆಂದು ತಿಳಿದು ಬಂದಿದೆ. ಸಿಂಧನೂರು ನಗರದ ಜಮಾತೆ ಮುಖಂಡ ತಾಲೂಕಿನ 20 ಕ್ಕೂ ಮೇಲ್ಪಟ್ಟ ಜನರನ್ನು ದೆಹಲಿಯ ಧರ್ಮಸಭೆಗೆ ಈತನೆ ಕರೆದು ಕೊಂಡು ಹೋಗಿ ಬಂದಿದಾರೆನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ಇಂದು ತುರ್ವಿಹಾಳ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹಾಜಿ ಬಾಬು, ಪಿಎಸ್ಐ ಎರೆಯಪ್ಪ, ಡಾ.ಮಂಜುನಾಥ ಹಾಗೂ ಇತರೆ ಸಿಬ್ಬಂದಿಗಳ ತಂಡ ತುರ್ವಿಹಾಳ ಗ್ರಾಮದಲ್ಲಿ ಇರುವ ಸಲಿಂ ತಂದೆ ಚಾಂದ್ ಸಾಬ್ ಮಂಡಳ್ ಬಟ್ಟಿ ಎನ್ನುವ ಉದ್ಯೋಗಿ ಎಗ್‌ರೈಸ್ ವ್ಯಾಪಾರಿ ಇತನ ಮನಗೆ ಹೋಗಿ ವಿಚಾರಣೆ ನಡೆಸಿದಾಗ ದೆಹಲಿ ಧರ್ಮ ಸಭೆಗೆ ಹೋಗಿ ಬಂದಿರುವುದಾಗಿ ಒಪ್ಪಿಕೊಂಡಿದ್ದಾನೆ.
ಅಧಿಕಾರಿಗಳ ತಂಡ ಇತನನ್ನು ಪರೀಕ್ಷೆ ಮಾಡಿ ಮನೆಯಿಂದ ಹೊರಗೆ ಹೋಗದಂತೆ ಗೃಹ ಬಂಧನಕ್ಕೆ ಒಳಪಡಿಸಲಾಗಿದೆ.
ತುರ್ವಿಹಾಳ ಪಟ್ಟಣದ ಸಲಿಂ ತಂದೆ ಚಾಂದ್ ಸಾಬ್ ಮಂಡಳ್ ಬಟ್ಟಿ ಇತನು ದೆಹಲಿ ಧರ್ಮ ಸಭೆಗೆ ಹೋಗಿ ಬಂದಿರುವ ಬಗ್ಗೆ ಖಚಿತವಾಗಿದ್ದು, ಇತನನ್ನು ಪರೀಕ್ಷೆ ಮಾಡಿ, ಗೃಹ ಬಂಧನದಲ್ಲಿರಿಸಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಇನ್ನು ಇತನ ಜೊತೆ ಹೋದವರ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ ಎಂದು ತುರ್ವಿಹಾಳ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹಾಜಿ ಬಾಬು ಅವರು ಸ್ಪಷ್ಟನೆ ನೀಡಿದರು.
ಸಿಂಧನೂರಿನ 25 ಕ್ಕೂ ಮೇಲ್ಪಟ್ಟ ಜನರ ಬಗ್ಗೆ ಅನುಮಾನ ಬಂದ ಹಿನ್ನೆಲೆಯಲ್ಲಿ ಯಾದಗಿರಿಯ ಅಧಿಕಾರಿಗಳು ವಿಚಾರಣೆ ನಡೆಸಿದಾಗ ನಾವು ದೆಹಲಿ ಧರ್ಮ ಸಭೆಗೆ ಹೋಗಿಲ್ಲ. ಗುಜರಾತ್‌ನಲ್ಲಿ ನಡೆದ ಜಮಾತೆ ಸಭೆಗೆ ಹೋಗಿ ಬಂದಿರುವುದಾಗಿ ತಿಳಿಸಿದಾಗ ಅನುಮಾನ ಗೊಂಡ ಯಾದಗಿರಿ ಜಿಲ್ಲಾಡಳಿತ ಸಿಂಧನೂರಿನ ಜನರನ್ನು ಯಾದಗಿರಿಯಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ಡಿವೈಎಸ್ ವಿಶ್ವನಾಥ್ ರಾವ್ ಕುಲಕರ್ಣಿ, ನಗರಸಭೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಕೊಪ್ಪಳ ಸಂಸದ ಸಂಗಣ್ಣ ಕರಡಿ ಯವರ ಗಮನಕ್ಕೆ ತಂದರೂ ಇದರಲ್ಲಿ ಸಿಂಧನೂರು ನಗರಸಭೆಯ ಸದಸ್ಯರ ಮಕ್ಕಳು ಇದ್ದಾರೆನ್ನಲಾಗಿದೆ.
ಸಿಂಧನೂರು ತಾಲೂಕಿನಿಂದ ಜನರು ದೆಹಲಿ ತಬ್ಲಿಘಿ ಜಮಾತೆ ಧರ್ಮಸಭೆಗೆ ಹೋಗಿ ಬಂದ ಸುದ್ಧಿ ಕೇಳಿ ತಾಲೂಕಿನ ಜನತೆ ಭಯ ಭೀತರಾಗಿದ್ದು, ದೆಹಲಿ ತಬ್ಲಿಘಿ ಜಾಲ ಸಿಂಧನೂರುನಲ್ಲಿ ಹರಡದಂತೆ ತಾಲೂಕಿನ ಜನತೆ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಕೊರೊನಾ ಸೋಂಕಿನಿಂದ ಗುಲ್ಬರ್ಗಾದಲ್ಲಿ ಮೃತ ಪಟ್ಟ ವೃದ್ಧನ ಅಂತ್ಯ ಸಂಸ್ಕಾರಕ್ಕೆ ಸಿಂಧನೂರಿನಿಂದ ಕೆಲವು ಜನ ಹೋಗಿ ಬಂದಿರುವ ಸುದ್ಧಿ ಸಹ ಹರಡಿದೆ.

Leave a Comment