ಸಿಂಧನೂರು: ಹಕ್ಕುಪತ್ರಕ್ಕೆ ಒತ್ತಾಯಿಸಿ ಮುತ್ತಿಗೆ

ರಾಯಚೂರು.ಜ.17- ಸಿಂಧನೂರು ನಗರದ ಗುಡಿಸಲು ನಿವಾಸಿಗಳಿಗೆ ಹಕ್ಕುಪತ್ರ ವಿತರಣೆಗೆ ಒತ್ತಾಯಿಸಿ ಜ. 24 ರಂದು ಮಿನಿ ವಿಧಾನಸೌಧ ಮುತ್ತಿಗೆ ಪ್ರತಿಭಟನೆ ನಡೆಸಲಾಗುತ್ತದೆಂದು ಸಿಪಿಐಎಂಎಲ್ ರೆಡ್ ಸ್ಟಾರ್‌ನ ಜಿಲ್ಲಾ ಕಾರ್ಯದರ್ಶಿ ಕೆ.ನಾಗಲಿಂಗಯ್ಯ ಸ್ವಾಮಿ ಹೇಳಿದ್ದಾರೆ.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸರ್ವೆ ನಂ. 768/1 4.29 ಎಕರೆ ಜಮೀನನಲ್ಲಿ ಕಳೆದ 35-45 ವರ್ಷಗಳಿಂದ ಟಿನ್‌ಶೆಡ್‌ಗಳನ್ನು ಹಾಕಿಕೊಂಡು 60 ಬಡ ಕುಟುಂಬಗಳು ಜೀವನ ನಡೆಸಿದ್ದಾರೆ. ಕಳೆದ 54 ದಿನಗಳಿಂದ ಹಕ್ಕುಪತ್ರಕ್ಕಾಗಿ ಪ್ರತಿಭಟನೆ ನಡೆಸಲಾಗುತ್ತಿದೆ. ತಹಶೀಲ್ದಾರಾರರು ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ಹಕ್ಕುಪತ್ರ ನೀಡುವ ಭರವಸೆ ನೀಡಿ ತಿಂಗಳು ಕಳೆದೂ ಇನ್ನಾದರೂ ಈ ಬಗ್ಗೆ ಕ್ರಮಕೈಗೊಂಡಿಲ್ಲ. ಮತ್ತೊಂದೆಡೆ ಇದೇ ಜಮೀನಿನಲ್ಲಿ ಕೆಲವರು ಸುಸಜ್ಜಿತ ಕಟ್ಟಡ ನಿರ್ಮಿಸಿಕೊಂಡು ಅಕ್ರಮವಾಗಿ ನೆಲೆಸುತ್ತಿದ್ದಾರೆ.
ಈ ಅಕ್ರಮಕಾರರಿಗೆ ಜಮಾಬಂಧಿ ಹೆಸರಿನಲ್ಲಿ ದಂಡ ಕಟ್ಟಿಸಿಕೊಂಡು ಸಕ್ರಮಗೊಳಿಸುವ ಪ್ರಯತ್ನ ನಡೆದಿದ್ದರೆ, ಬಡವರಿಗೆ ಮಾತ್ರ ಹಕ್ಕುಪತ್ರ ನೀಡುತ್ತಿಲ್ಲ. ಸಿಂಧನೂರಿನ ತಹಶೀಲ್ದಾರ್, ಸಹಾಯಕ ಆಯುಕ್ತರು, ಜಿಲ್ಲಾಧಿಕಾರಿಗಳು ಗುಡಿಸಲು ನಿವಾಸಿಗಳಿಗೆ ಹಕ್ಕಪತ್ರ ನೀಡದೆ ನೆಲೆಗಳ್ಳರ ಪರವಾಗಿ ಮೌನ ವಹಿಸಿದ್ದಾರೆಂದು ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಬಡವರಿಗೆ ಹಕ್ಕಪತ್ರ ನೀಡುವಂತೆ ಆಗ್ರಹಿಸಿ ದಿ. 24 ರಂದು ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಒತ್ತಾಯಿಸಲಾಗುತ್ತದೆ. ಈಗಾಗಲೇ ರಸ್ತೆ ತಡೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಬಡವರಿಗೆ ಹಕ್ಕುಪತ್ರ ನೀಡಲು ಭರವಸೆ ನೀಡಲಾಗಿತ್ತು. ಯಾವುದೋ ಪ್ರಕರಣದ ನೆಪವೊಡ್ಡಿ ಈಗ ಹಕ್ಕುಪತ್ರ ನೀಡುತ್ತಿಲ್ಲ. ಈ ಪ್ರಕರಣಕ್ಕೂ ಸರ್ವೆ ನಂ. 768/1 ರ ಭೂಮಿಗೂ ಸಂಬಂಧವಿಲ್ಲದಿದ್ದರೂ ಈ ಪ್ರಕರಣವನ್ನು ತಳುಕು ಹಾಕಿ ಹಕ್ಕುಪತ್ರ ವಿಳಂಬ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ 24 ರಂದು ಗುತ್ತಿಗೆ ಕಾರ್ಯಕ್ರಮ ನಡೆಸಲಾಗುತ್ತಿದ್ದು ಜಿಲ್ಲಾಧಿಕಾರಿ ಮತ್ತು ಸಹಾಯಕ ಆಯುಕ್ತರು ಪ್ರತಿಭಟನಾ ಸ್ಥಳಕ್ಕೆ ಬಂದು ಹಕ್ಕುಪತ್ರ ನೀಡುವ ದಿನಾಂಕದ ಬಗ್ಗೆ ಬಹಿರಂಗವಾಗಿ ಹೇಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅಮರೇಶ ಹುಲಿಗೆಪ್ಪ, ಆಂಜಿನೇಯ ಉಪಸ್ಥಿತರಿದ್ದರು.

Leave a Comment