ಸಿಂಧನೂರು : ಬೈಕ್ ಸವಾರರಿಗೆ ಲಾಠಿ – ಸಂಪೂರ್ಣ ಬಂದ್

ಸಿಂಧನೂರು.ಮೇ.24- ಇಂದು ರಾಜ್ಯಾದ್ಯಂತ ಕರ್ಫ್ಯೂ ಜಾರಿ ಮಾಡಿ, ಜನ ಮನೆಯಿಂದ ಹೊರಗೆ ಬಾರದಂತೆ ಸರ್ಕಾರ ಆದೇಶ ಮಾಡಿ, ಅಗತ್ಯ ಕೆಲಸಗಳಿಗೆ ಮಾತ್ರ ಅವಕಾಶ ನೀಡಿದೆ. ಅನವಶ್ಯಕವಾಗಿ ತಿರುಗಾಡುವರರ ವಿರುಧ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಕರ್ಫ್ಯೂ ಜಾರಿ ಇದ್ದರೂ ಸಹ ಅನವಶ್ಯಕವಾಗಿ ಬೈಕ್‌ಗಳ ಮೂಲಕ ಜನ ಓಡಾಡುತ್ತಿದ್ದು, ಅಂತಹ ಬೈಕ್‌ಗಳನ್ನು ತಡೆದು ಪೊಲೀಸರು ಬೈಕ್‌ಗಳನ್ನು ಠಾಣೆಗೆ ತೆಗೆದುಕೊಂಡು ಹೋಗಿ ಬೈಕ್ ಸವಾರರಿಗೆ ಖಾಕಿ ಚಾರ್ಜ್ ಮಾಡಿ, ಮನೆಗೆ ಕಳುಹಿಸುತ್ತಿದ್ದಾರೆ. ಅಗತ್ಯ ಸೇವೆ ಹೊರೆತು ಪಡಿಸಿ ಅನಗತ್ಯವಾಗಿ ಮನೆಯಿಂದ ಜನ ಹೊರಗೆ ಬರಬಾರದು ಹಾಗೂ ವ್ಯಾಪಾರ – ವಹಿವಾಟು ನಡೆಸದಂತೆ ಪೊಲೀಸರು ನಿನ್ನೆಯಿಂದ ನಗರದ ಪ್ರಮುಖ ಬೀದಿಗಳಲ್ಲಿ ವಾಹನಗಳ ಮೂಲಕ ಸಂಚರಿಸಿ ಧ್ವನಿ ವರ್ಧಕ ಮೂಲಕ ಜನರಿಗೆ ತಿಳುವಳಿಕೆ ನೀಡಿದ್ದಾರೆ.
ಇಂದು ಜನ ಬೈಕ್‌ಗಳ ಓಡಾಟವನ್ನು ಬಂದ್ ಮಾಡಿರುವುದರಿಂದ ನಗರ ಸಂಪೂರ್ಣ ಬಂದಾಗಿ ಬಿಕೋ ಎನ್ನುತ್ತಿದೆ.
ನಗರದ ಪಿಡಬ್ಲ್ಯೂಡಿ ಕ್ಯಾಂಪ್‌ನಲ್ಲಿ ಅನಗತ್ಯವಾಗಿ ಓಡಾಡುವ 50 ಬೈಕಗಳು ಹಾಗೂ ನಗರ ಠಾಣೆ ವತಿಯಿಂದ 45 ಬೈಕಗಳನ್ನು ಹಿಡಿದು ದಂಡ ಹಾಕಿ ಬೈಕ್ ಸವಾರಿಗೆ ತಿಳುವಳಿಕೆ ಹೇಳಿ ಎಚ್ಚರಿಕೆ ನೀಡಿ ಬಿಡಲಾಗುತ್ತಿದೆ ಎಂದು ನಗರ ಹಾಗೂ ಗ್ರಾಮೀಣ ಠಾಣೆ ಪಿ.ಎಸ್.ಐ ಗಳಾದ ವಿಜಯಕೃಷ್ಣ, ರಾಘವೇಂದ್ರ ಅವರು ತಿಳಿಸಿದ್ದಾರೆ.
ಜನರಿಗೆ ಕೊರೊನಾ ಬಗ್ಗೆ ಭಯ ಇಲ್ಲದಾಗಿದೆ. ನಮ್ಮ ಆರೋಗ್ಯದ ಬಗ್ಗೆ ಪೊಲೀಸರು ಹಗಲಿರುಳು ನಿದ್ದೆ ಗೆಟ್ಟು ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ಕೆಲಸಕ್ಕೆ ನಾವು ಸಹಕಾರ ನೀಡಿ ಮನೆಯಲ್ಲಿ ಇದ್ದು, ಕೊರೊನಾ ಹರಡದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲೆ ಇದೆ ಎಂಬ ಕನಿಷ್ಠ ತಿಳುವಳಿಕೆ ಜನರಿಗೆ ಇಲ್ಲದಾಗಿದೆ. ಎಲ್ಲದಕ್ಕೂ ಪೊಲೀಸರೆ ಬಂದು ಹೇಳಬೇಕು ಎನ್ನುವ ಮನೋಭಾವನೆ ಜನರಲ್ಲಿ ಬಂದಿದೆ. ಯಾವಾಗ ಜನರಿಗೆ ಬುದ್ಧಿ ಬರುತ್ತದೆಯೊ ತಿಳಿಯದಾಗಿದೆ.

Share

Leave a Comment