ಸಾಹಿತ್ಯ ಸಮ್ಮೇಳನ ಸಿದ್ಧತೆ ಬಹುತೇಕ ಪೂರ್ಣ ಜಿಲ್ಲಾಧಿಕಾರಿ

ಧಾರವಾಡ,ಜ.1- ಧಾರವಾಡ ನಗರದಲ್ಲಿ ಜನವರಿ 4 ರಿಂದ ಆರಂಭಗೊಳ್ಳಲಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಕೈಗೊಂಡಿರುವ ಎಲ್ಲ ಕಾರ್ಯಗಳು ಬಹುಪಾಲು ಪೂರ್ಣಗೊಂಡಿದ್ದು, ಕೊನೆಯ ಹಂತದ ಸಿದ್ಧತೆಗಳು ಆರಂಭಗೊಂಡಿವೆ ಎಂದರು ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಹೇಳಿದರು.
ಅವರು ಇಂದು ಮಧ್ಯಾಹ್ನ ಕೃಷಿ ವಿಶ್ವವಿದ್ಯಾಲಯ ಕ್ರೀಡಾಂಗಣದಲ್ಲಿ ನಿರ್ಮಾಣಗೊಂಡಿರುವ ಸಮ್ಮೇಳನದ ಮುಖ್ಯ ವೇದಿಕೆ ಪರಿಶೀಲನೆ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದರು.
ಸಮ್ಮೇಳನ ಬಹಳ ವರ್ಷಗಳ ನಂತರ ಧಾರವಾಡದಲ್ಲಿ ನಡೆಯುತ್ತಿದ್ದು. ಬರುವ ಅತಿಥಿಗಳೀಗೆ, ಸ್ಥಳೀಯರಿಗೆ ಯಾವುದೇ ಅನಾನುಕೂಲವಾಗದಂತೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಸಮ್ಮೇಳನದಲ್ಲಿ ಲಕ್ಷಾಂತರ ಜನ ಭಾಗವಹಿಸುವುದರಿಂದ ಊಟ, ವಸತಿ, ಸಾರಿಗೆ, ಕುಡಿಯುವ ನೀರು, ಶೌಚಾಲಯಗಳ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.  ಜಿಲ್ಲೆಯ ವಿವಿಧ ಇಲಾಖೆ ಅಧಿಕಾರಿಗಳ ಶ್ರಮ ಮತ್ತು ಜಿಲ್ಲೆಯ ಜನಪ್ರತಿನಿಧಿಗಳ ಸಲಹೆ, ಸಹಕಾರದೊಂದಿಗೆ ಉತ್ತಮ ರೀತಿಯಿಂದ ಸಮ್ಮೇಳನ ತಯಾರಿ ಮಾಡಿಕೊಳ್ಳಲಾಗಿದೆ. ಇದರಿಂದಾಗಿ ಕಳೆದ ಎರಡು ದಿನಗಳಿಂದ ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿದೆ.
ವಿವಿಧ ಸಂಘ, ಸಂಸ್ಥೆ, ಬ್ಯಾಂಕ್ ಹಾಗೂ ಇತರರು ಸಮ್ಮೇಳನಕ್ಕೆ ದೇಣಿಗೆ ನೀಡಿದ್ದು, ಅವರೆಲ್ಲರ ಸಹಕಾರದಿಂದ ಮೆರವಣಿಗೆ ರಸ್ತೆ ಸೇರಿದಂತೆ ನಗರದ ವಿವಿಧೆಡೆ ಅಲಂಕಾರ, ಗೋಡೆಚಿತ್ರ, ದೀಪಾಲಂಕಾರ ಮಾಡಲಾಗಿದೆ.
ಸರ್ಕಾರ ನೀಡಿರುವ ಅನುದಾನ ಬಳಸಿಕೊಂಡು ಯಾವುದೇ ಕೊರತೆ ಉಂಟಾಗದಂತೆ ಸೌಕರ್ಯಗಳನ್ನು ಮಾಡಲಾಗಿದೆ. ಹೆಚ್ಚುವರಿ ಅನುದಾನಕ್ಕಾಗಿ ಸರ್ಕಾರೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ನಾಳೆ ಜಿಲ್ಲಾ ಉಸ್ತುವಾರಿ ಸಚಿವರು ಸಮ್ಮೇಳನ ಜರುಗುವ ಸ್ಥಳಕ್ಕೆ ಆಗಮಿಸಿ, ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ. ಆ ಸಂದರ್ಭದಲ್ಲಿ ಸಮ್ಮೇಳನಕ್ಕೆ ಆಗಮಿಸುವ ಸಾರ್ವಜನಿಕರಿಗೆ ಅನುಕೂಲವಾಗಲು ಉಚಿತ ಸಹಾಯವಾಣಿ ಮತ್ತು ಸೋಶಿಯಲ್ ಮೀಡಿಯಾ ಪ್ರಸಾರಕ್ಕಗಿ ವಿಡಿಯ ಓ ಬಿಡುಗಡೆ ಜರುಗಲಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಡಾ.ಬಿ.ಸಿ. ಸತೀಶ್, ಅಪರ ಜಿಲ್ಲಾಧಿಕಾರಿ ಇಬ್ರಾಹಿಂದ ಮೈಗೂರ, ಉಪವಿಭಾಗಾಧಿಕಾರಿ ಮಹ್ಮದ್  ಜುಬೇರ, ಉಪಪೊಲೀಸ್ ಆಯುಕ್ತ  ಬಿ.ಎಸ್. ನೇಮಗೌಡ, ಆಹಾರ ಇಲಾಖೆ ಉಪನಿರ್ದೇಶಕ ಸದಾಶಿವ ಮರ್ಜಿ, ಲೋಕೋಪಯೋಗಿ ಇಲಾಖೆ ಅಧೀಕ್ಷ ಅಭಿಯಂತರ ಶಿವಯೋಗಿ ಹಿರೇಮಠ, ಕಾರ್ಯಪಾಲಕ ಅಭಿಯಂತರ ವೀರೂಪಾಕ್ಷ ಯಮಕನಮರಡಿ, ಜಿಲ್ಲಾ ಸರ್ಜನ್ ಡಾ.ಗಿರಿಧರ ಕೂಕನೂರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ನಂತರ ಜಿಲ್ಲಾಧಿಕಾರಿಗಳು ಮಾಧ್ಯಮ ಕೇಂದ್ರ, ಪ್ರತಿನಿಧಿಗಳು ನೋಂದಣಿ ಕೇಂದ್ರ, ವಾಣಿಜ್ಯ ಮಳಿಗೆ, ಪುಸ್ತಕ ಮಳಿಗೆ, ಭೋಜನಾಂಗ, ವಾಹನ ಪಾರ್ಕಿಂಗ್ ಸ್ಥಳ, ಸಮಾನಂತರ ವೇದಿಕೆ ಇರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

Leave a Comment