ಸಾಹಿತ್ಯ ಸಮ್ಮೇಳನ ಪ್ರಧಾನ ವೇದಿಕೆ ನಿರ್ಮಾಣಕ್ಕೆ 16 ರಂದು ಚಾಲನೆ:ಡಿಸಿ

 

ಕಲಬುರಗಿ,ಜ.14-ಗುಲಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿ ಫೆಬ್ರುವರಿ 5, 6 ಮತ್ತು 7 ನಡೆಯುವ 85ನೇ ಅಖಿಲ ಭಾರತದ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆ ನಿರ್ಮಾಣಕ್ಕೆ ಜ.16 ರಂದು ಬೆಳಿಗ್ಗೆ 11.30ಕ್ಕೆ ಚಾಲನೆ ನೀಡಲಾಗುವುದು ಎಂದು ಸಾಹಿತ್ಯ ಸಮ್ಮೇಳನದ ಕೋಶಾಧ್ಯಕ್ಷರು ಆದ ಜಿಲ್ಲಾಧಿಕಾರಿ ಬಿ.ಶರತ್ ತಿಳಿಸಿದರು.

ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ವಾರ್ತಾ ಭವನದಲ್ಲಿಂದು ಮಾಧ್ಯಮವರಿಗಾಗಿ ಏರ್ಪಡಿಸಿದ್ದ ಚಹಾಕೂಟದಲ್ಲಿ ಮಾತನಾಡುತ್ತ ಅವರು ಈ ವಿಷಯ ತಿಳಿಸಿದರು.

ಸಮ್ಮೇಳನದ ಪ್ರಧಾನ ವೇದಿಕೆ ನಿರ್ಮಾಣಕ್ಕೆ ಬೇಕಾದ ಸಲಕರಣೆಗಳನ್ನು ತರಿಸಲಾಗಿದ್ದು, 16 ರಂದು ಸಮ್ಮೇಳನದ ಪ್ರಧಾನ ವೇದಿಕೆಯ ನಿರ್ಮಾಣಕಾರ್ಯ ಆರಂಭವಾಗಲಿದೆ ಎಂದು ತಿಳಿಸಿದರು.

ಸಮ್ಮೇಳನದ ಪ್ರಧಾನ ವೇದಿಕೆಯಲ್ಲದೆ ವಿಶ್ವವಿದ್ಯಾಲಯದ ಮಹಾತ್ಮಾಗಾಂಧಿ ಸಭಾಂಗಣ, ಡಾ.ಬಿ.ಆರ್.ಅಂಬೇಡ್ಕರ್ ಭವನಗಳಲ್ಲಿ ಸಮಾನಾಂತರ ವೇದಿಕೆ ಇರಲಿದ್ದು, ಸಮಾನಾಂತರ ವೇದಿಕೆಗಳಲ್ಲಿ ವಿವಿಧ ಗೋಷ್ಠಿಗಳು ನಡೆಯಲಿವೆ ಎಂದು ತಿಳಿಸಿದರು.

ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ ಸುಮಾರು ಮೂರುವರೆ ಕಿ.ಮೀ.ಯವರೆಗೆ ನಡೆಯಲಿದೆ ಎಂದು ತಿಳಿಸಿದರು.

ಸಾಹಿತ್ಯ ಸಮ್ಮೇಳನಕ್ಕಾಗಿ 14 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇನ್ನೂ ಹಣ ಬಿಡುಗಡೆಯಾಗಿಲ್ಲ. ಸಮ್ಮೇಳನಕ್ಕಾಗಿ ದಾನಿಗಳಿಂದ ಹಣ ಸಂಗ್ರಹಿಸಲಾಗುವುದು ಎಂದು ತಿಳಿಸಿದರು.

ಕನ್ನಡಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮ್ಮೇಳನ ಯಶಸ್ಸಿಗೆ ಶ್ರಮಿಸುವಂತೆ ಸಮ್ಮೇಳನಕ್ಕಾಗಿ ರಚಿಸಲಾಗಿರುವ ವಿವಿಧ ಸಮಿತಿಗಳಿಗೆ ಸೂಚಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಸಮ್ಮೇಳನವನ್ನು ಯಶಸ್ವಿಯಾಗಿ ನಡೆಯಲು ಎಲ್ಲರ ಸಹಕಾರ ಅಗತ್ಯವಿದೆ ಎಂದ ಅವರು ಸಮ್ಮೇಳನ ಯಶಸ್ಸಿಗೆ ಎಲ್ಲರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

Leave a Comment