ಸಾಹಿತ್ಯ ಕೃತಿ ಸಂಗ್ರಹಣೆ ಎಲ್ಲರ ಜವಾಬ್ದಾರಿ

ತುಮಕೂರು, ಸೆ. ೧೧- ಸಾಹಿತ್ಯ ಮತ್ತು ಸಾಹಿತಿಗಳು ಎಂದಾಕ್ಷಣ ಕೆಲವರಿಗೆ ಅಷ್ಟಕ್ಕಷ್ಟೆ. ಆದರೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಕನ್ನಡ ಕೃತಿಗಳ ಬಗ್ಗೆ ಕವಿಗಳ ಬಗ್ಗೆ ಅನೇಕ ಹಸ್ತ ಪ್ರತಿಗಳು ಸಿಕ್ಕಿವೆ. ಸಿಕ್ಕ ಹಸ್ತಪ್ರತಿಗಳನ್ನು ಸಂಗ್ರಹಿಸಬೇಕು. ಪ್ರತಿಯೊಬ್ಬರು ಸಾಹಿತ್ಯ ಕೃತಿಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಂಶೋಧಕ ಡಾ. ನಂಜುಂಡಸ್ವಾಮಿ ಹೇಳಿದರು.

ಹಸ್ತಪ್ರತಿಗಳ ಜತೆಗೆ ಹಳಗನ್ನಡ ಕಾವ್ಯಕೃತಿಗಳನ್ನು ಸಂಗ್ರಹಿಸುವುದು ಎಲ್ಲರ ಜವಾಬ್ದಾರಿಯಾಗಬೇಕು. ಇದರಿಂದ ಮುಂದಿನ ಜನಾಂಗಕ್ಕೆ ತುಂಬಾ ಉಪಯೋಗವಾಗುತ್ತದೆ ಎಂದರು.

ಇಲ್ಲಿನ ಕೃಷ್ಣಾನಗರದಲ್ಲಿರುವ ವಿದ್ಯಾವಾಹಿನಿ ಕಾಲೇಜಿನಲ್ಲಿ ನಡೆದ ಜ್ಞಾನಬುತ್ತಿ ಸತ್ಸಂಗ ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಒಂದು ಪಕ್ಷಿನೋಟ ಎಂಬ ವಿಷಯ ಕುರಿತು ಅವರು ಮಾತನಾಡಿದರು.

ಗುಬ್ಬಿಯ ಮಲ್ಲಣ್ಣ ಕವಿ ಸಂಸ್ಕೃತ ಮತ್ತು ಕನ್ನಡ ಉಭಯ ಭಾಷಾ ಪಂಡಿತನಾಗಿದ್ದು, ಉಭಯ ಭಾಷೆಗಳಲ್ಲಿ ಗ್ರಂಥಗಳನ್ನು ರಚಿಸಿದ್ದಾನೆ. ಅದರಲ್ಲಿ ಮುಖ್ಯವಾದ ಗಣಭಾಷ್ಯ ರತ್ನಮಾಲೆ ಮತ್ತು ವಾತುಲ ತಂತ್ರ ಟೀಕೆ. ವೀರಶೈವ ಕವಿಗಳಲ್ಲಿ ಗುಬ್ಬಿಯ ಮಲ್ಲಣ್ಣನು ಪ್ರಮುಖನಾದವನು. ಈತನ ಗಣಭಾಷ್ಯ ರತ್ನ ಮಾಲೆಯು 101 ಸ್ಥಲಗಳನ್ನು ನಿರೂಪಿಸಿರುವ ಸಂಕಲನ ಗ್ರಂಥ. ಸುಮಾರು 120 ವರ್ಷ ಬದುಕಿದ್ದರೆಂದು ಊಹಿಸಲಾಗಿದೆ. ಇವರನ್ನು ಮುದಿಯಯ್ಯಾ ಎಂದು ಸಹ ಕರೆಯುತ್ತಿದ್ದರು ಎಂದರು.

ಗುಬ್ಬಿಯ ಮಲ್ಲಣ್ಣನ ಮಗನೆ ಗುಬ್ಬಿ ಮಲ್ಲಣಾರ್ಯ. 15ನೇ ಶತಮಾನದಲ್ಲಿದ್ದ ಕವಿ. ಇವರ ಮಹತ್ವದ ಕೃತಿಗಳೆಂದರೆ ಭಾವ ಚಿಂತಾರತ್ನ ಮತ್ತು ವೀರಶೈವಾಮೃತ ಪುರಾಣ. ಈ ಕೃತಿಗಳು ವಾರ್ಧಕ ಷಟ್ಪದಿಯಲ್ಲಿವೆ. ಅತ್ಯಂತ ಸೂಕ್ಷ್ಮವಾದ ಕವಿ. ವೀರಶೈವಾಮೃತ ಪುರಾಣ 136 ಸಂಧಿಗಳಲ್ಲಿ 7 ಸಾವಿರಕ್ಕೂ ಹೆಚ್ಚು ಪದ್ಯಗಳಲ್ಲಿದ್ದು ಲಕ್ಕಣ್ಣ ಕವಿಯ ಶಿವತತ್ವ ಚಿಂತಾಮಣಿಗಿಂತಲೂ ದೊಡ್ಡದಾಗಿದೆ. ಇದರಲ್ಲಿ ಶಿವನ 25 ಲೀಲೆಗಳು ಪುರಾತನ ನೂತನ ಶರಣರ ಕಥೆಗಳು, ವೇದಾಗಮಾದಿ ವಾಕ್ಯಗಳು ಮುಂತಾದ ಅನೇಕ ವಿಷಯಗಳಿವೆ. ಈ ಗ್ರಂಥ ಬಹು ವಿಷಯ ಗರ್ಭಿತ ವೀರಶೈವ ಕೋಶವಾಗಿದೆ. ಈ ಕೃತಿಯಲ್ಲಿ ಕವಿತಾಸಕ್ತಿ, ಪದ್ಯ ರಚನಾಶಕ್ತಿ, ಭಾಷಾ ಶೈಲಿಗಳು ಸತ್ಕವಿಗೆ ಶೋಭಿಸುವಷ್ಟು ಅತ್ಯಂತ ಸೊಗಸಾಗಿದೆ ಎಂದರು.

ಅಮರ ಗುಂಡದ ಮಲ್ಲಿಕಾರ್ಜುನ ತಂದೆಳ ವಚನ ಲಭ್ಯವಿರುವ ವಚನ ಕೇವಲ ಎರಡು ಮಾತ್ರ. ತುಮಕೂರು ಜಿಲ್ಲೆಯ ಪ್ರಥಮ ವಚನಕಾರರೆಂದೇ ಗುರುತಿಸಲಾಗಿದೆ. ಮತ್ತೊಬ್ಬ ವಚನಕಾರ ಪುರದ ನಾಗಣ್ಣ ಈ ಪುರ ಎಂಬುದು ನಿಟ್ಟೂರಿನ ಹತ್ತಿರವಿದೆ. ಈತ ಅಮರ ಗುಂಡದ ಮಲ್ಲಿಕಾರ್ಜುನ ಎಂಬ ಅಂಕಿತದಲ್ಲಿ ವಚನ ರಚನೆ ಮಾಡಿದ್ದಾನೆ. ಒಟ್ಟು 10 ವಚನಗಳು ಲಭ್ಯವಿದೆ. ಗುರು ಪಾದೋದಕದಿಂದ ಪರಮ ಪದ ಸಾಧ್ಯ ಎಂಬುದು ವ್ಯಕ್ತವಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜ್ಞಾನಬುತ್ತಿ ಸತ್ಸಂಗದ ಅಧ್ಯಕ್ಷೆ ಎಂ.ಸಿ.ಲಲಿತ ಮಾತನಾಡಿ, ಡಾ.ನಂಜುಂಡಸ್ವಾಮಿ ದೊಡ್ಡ ವಿದ್ವಾಂಸರು. ಸಂಶೋಧನೆಯಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಸದಾ ಸಂಶೋಧಕ ಮನೋಭಾವದಲ್ಲಿ ಇಡೀ ಕರ್ನಾಟವನ್ನು ಸುತ್ತಿ ಬಂದಿದ್ದಾರೆ. ಜಿಲ್ಲೆಯ ಸಾಹಿತ್ಯದ ಬಗ್ಗೆ ಸೊಗಸಾಗಿ ವಿಷಯ ಮಂಡಿಸಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಉಪನ್ಯಾಸ ನೀಡಿದ ಡಾ.ನಂಜುಂಡಸ್ವಾಮಿ ಅವರನ್ನು ಜ್ಞಾನಬುತ್ತಿ ಸಂಸ್ಥಾಪಕ ಪಿ.ಶಾಂತಿಲಾಲ್ ಮತ್ತು ಗೌರವಾಧ್ಯಕ್ಷ ಟಿ.ಮುರಳೀಕೃಷ್ಣಪ್ಪ ಸನ್ಮಾನಿಸಿದರು.

ಸುಮನ ಮತ್ತು ಇಂದಿರಮ್ಮ ಪ್ರಾರ್ಥಿಸಿದರು. ಕಾರ್ಯದರ್ಶಿ ಮಿಮಿಕ್ರಿ ಈಶ್ವರಯ್ಯ ಸ್ವಾಗತಿಸಿದರು. ಸಿದ್ದಗಂಗಮ್ಮ ಕಾರ್ಯಕ್ರಮ ನಿರೂಪಿಸಿದರು.

Leave a Comment