ಸಾಹಿತ್ಯ ಓದಿದಂತೆ ವೇದನೆ ಕಡಿಮೆಯಾಗುತ್ತದೆ: ಡಾ. ನಾಗರಾಜಯ್ಯ

ತುಮಕೂರು, ಅ. ೧೧- ಸೋಮೇಶ್ವರ ಶತಕದಲ್ಲಿ ಕವಿ ಹೇಳಿರುವಂತೆ ನಮ್ಮ ದುಃಖವನ್ನು ಸಮಾನ ಮನಸ್ಕರೊಂದಿಗೆ ಹಂಚಿಕೊಂಡರೆ ದುಃಖದ ತೀವ್ರತೆ ಕಡಿಮೆಯಾಗುತ್ತದೆ. ಆದರೆ ಸಂತೋಷವನ್ನು ಎಲ್ಲರಿಗೂ ಹಂಚಿದರೆ ಮಾತ್ರ ಇಮ್ಮಡಿಯಾಗುತ್ತದೆ. ಹಾಗೆಯೇ ಸಾಹಿತ್ಯ ಓದಿದಂತೆಲ್ಲಾ ನಮ್ಮ ವೇದನೆಗಳು ಕಡಿಮೆಯಾಗುತ್ತವೆ ಎಂದು ನಗರದ ನಿವೃತ್ತ ಪಶುವೈದ್ಯಾಧಿಕಾರಿಗಳಾದ ಡಾ.ವಿ. ನಾಗರಾಜಯ್ಯ ತಿಳಿಸಿದರು.

ನಗರದ ಬೆಳಗುಂಬ ರಸ್ತೆಯ ಶಿರಡಿ ಸಾಯಿಮಂದಿರದ ಸಭಾಂಗಣದಲ್ಲಿ ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಆದರ್ಶನಗರ ಶಾಖೆ ವತಿಯಿಂದ ಏರ್ಪಡಿಸಿದ್ದ 113ನೇ ಸಾಪ್ತಾಹಿಕ ಸತ್ಸಂಗ ಕಾರ್ಯಕ್ರಮದಲ್ಲಿ ಸಾಹಿತ್ಯದಲ್ಲಿ ನಿತ್ಯ ಜೀವನದ ಚಿಂತನೆಗಳು ಎಂಬ ವಿಷಯದ ಬಗ್ಗೆ ಅವರು ಮಾತನಾಡಿದರು.

ನಮ್ಮ ಭಾರತೀಯ ಸಂಸ್ಕತಿಯು ವಿಶಾಲವಾದದ್ದು. ನಮ್ಮ ಭಾರತೀಯರು ಕಲ್ಲಿನಲ್ಲಿ, ನೀರಿನಲ್ಲಿ, ಮಣ್ಣಿನಲ್ಲಿ, ಗಿಡಮರಗಳಲ್ಲಿ ಹಾಗೂ ಎಲ್ಲಿ ಭಾವಿಸುತ್ತೇವೋ ಅಲ್ಲಿ ದೇವರನ್ನು ಕಾಣುತ್ತಾರೆ. ಬರೀ ಜಪತಪಗಳಲ್ಲದೆ ಕರ್ತವ್ಯದಲ್ಲಿ ದೇವರನ್ನು ಕಾಣಬೇಕು. ಭಗವದ್ಗೀತೆಯಲ್ಲಿ ಕೃಷ್ಣ ನಿನ್ನ ಕೆಲಸ ನೀನು ಮಾಡು ಫಲಾಫಲಗಳನ್ನು ನನಗೆ ಬಿಡು, ಕರ್ತವ್ಯವೇ ದೇವರೆಂದು ಭಾವಿಸು. ನೀನೆಂದಿಗೂ ಕರ್ತವ್ಯದಿಂದ ವಿಮುಖನಾಗಬೇಡ’’ ಎಂದು ಕರ್ತವ್ಯಕ್ಕಾಗಿ ಅರ್ಜುನನನ್ನು ಜಾಗೃತಗೊಳಿಸುತ್ತಾನೆ. ನಾವು ನುಡಿದಂತೆ ನಡೆದರೆ ಕೈಲಾಸ ಸಿಗುತ್ತದೆ. ನಮ್ಮ ಮಕ್ಕಳಿಗೆ ಸಂಗೀತ ಮತ್ತು ಸಂಸ್ಕತವನ್ನು ಕಲಿಸಬೇಕು. ಇವನ್ನು ಕಲಿತ ಮಕ್ಕಳು ಸಂಸ್ಕಾರಗೊಂಡು ಒಳ್ಳೆಯ ದಾರಿಯಲ್ಲಿ ನಡೆಯುತ್ತವೆ ಎಂದರು.

ಹದಿನಾರು ವಯಸ್ಸಿನ ನಂತರದ ಮಕ್ಕಳನ್ನು ಸ್ನೇಹಿತರನ್ನಾಗಿ ಕಾಣಬೇಕು. ಚಿಕ್ಕ ವಯಸ್ಸಿನಲ್ಲೇ ಮಕ್ಕಳನ್ನು ಒಳ್ಳೆ ನಡೆನುಡಿಗಳತ್ತ ಬಗ್ಗಿಸಬೇಕು. 20 ರಿಂದ 25 ವರ್ಷ ವಯಸ್ಸಿನಲ್ಲಿ ಕಲಿತದ್ದು ಶಾಶ್ವತವಾಗಿ ಉಳಿಯುತ್ತದೆ. ಮನುಷ್ಯ ತನ್ನ ಮೆದುಳಿನ 10 ಭಾಗವನ್ನು ಮಾತ್ರ ಉಪಯೋಗಿಸುತ್ತಾನೆ. ಆದರೆ ಮನುಷ್ಯ ತನ್ನ ಮೆದುಳಿನ ಬಹುಭಾಗವನ್ನು ಒಳ್ಳೆಯದಕ್ಕೆ ಉಪಯೋಗಿಸಿದರೆ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದರು.

ನಮ್ಮ ನಡೆ-ನುಡಿ ಒಳ್ಳೆಯದಾಗಬೇಕಾದರೆ ನಮ್ಮ ಆಹಾರ ಸಾತ್ವಿಕವಾಗಿರಬೇಕು. ಸಾತ್ವಿಕ ವ್ಯಕ್ತಿಗೆ ಹಿಂಸಾ ಮನೋಭಾವ ಬರುವುದಿಲ್ಲ. ಸರ್ವಜ್ಞ ಹೇಳಿರುವ ಹಸಿಯದೆ ಉಣಬೇಡ, ತಂಗಳು ಉಣಬೇಡ, ಅತಿಬಿಸಿಯೂ ಬೇಡ ಎಂಬ ಪದ್ಯವನ್ನು ಮನನ ಮಾಡಿಕೊಂಡರೆ ಸಾಕು. ನಮ್ಮ ಆರೋಗ್ಯ ಹೆಚ್ಚುತ್ತದೆ. ಕಾಲಕಾಲಕ್ಕೆ ನಮ್ಮ ದೇಹದಿಂದ ಜಲ, ಮಲ ಹೊರ ಹೋಗಬೇಕು. ಹಾಗೆಯೇ ನಿದ್ರೆಯನ್ನು ಸರಿಯಾಗಿ ಮಾಡಬೇಕು. ಆಗ ಮಾತ್ರ ನಮ್ಮ ಆರೋಗ್ಯ ಸ್ಥಿರವಾಗಿರುತ್ತದೆ. ಆದರೆ ನಮ್ಮ ಜನರಲ್ಲಿ ತಿನ್ನುವ ಪ್ರವೃತ್ತಿ ಹೆಚ್ಚಾಗಿದ್ದು, ಕೆಲಸ ಮಾಡುವುದು ಕಡಿಮೆಯಾಗಿದೆ. ಕೊಬ್ಬಿನ ಅಂಶ ಹೆಚ್ಚಾಗಿ ಹೃದಯಾಘಾತವೂ ಚಿಕ್ಕವಯಸ್ಸಿನಲ್ಲಿ ಕಾಣಿಸಿಕೊಳ್ಳುತ್ತಿದೆ. ಆದ್ದರಿಂದ ಶ್ರಮ ಜೀವನದಿಂದ ಮಾತ್ರ ಆರೋಗ್ಯ ಸಾಧ್ಯ ಎಂದರು.

ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಆದರ್ಶನಗರ ಶಾಖೆಯ ಅಧ್ಯಕ್ಷರಾದ ಜಿ. ನಿರಂಜನ್‌ದಾಸ್ ರಾಜ್ಬಾನ್ ಮಾತನಾಡಿ, ಪ್ರಕೃತಿಯೊಡನೆ ಹೆಚ್ಚು ಒಡನಾಟ ಇಟ್ಟುಕೊಂಡವರೇ ದೊಡ್ಡ ಸಾಹಿತಿಗಳಾಗುತ್ತಾರೆ. ಕನಕದಾಸ, ಪುರಂದರದಾಸರಲ್ಲಿ ಆದ ಬದಲಾವಣೆಯೇ ಅವರ ಅಮೂಲ್ಯ ಸಾಹಿತ್ಯ ಉಗಮವಾಯಿತು. ನಮ್ಮ ದಿನನಿತ್ಯದಲ್ಲೇ ಸಾಹಿತ್ಯವಿದ್ದು, ಅದನ್ನು ಕಣ್ತೆರೆದು ನೋಡಬೇಕಾಗಿದೆ. ನಾವು ದಿನನಿತ್ಯ ಸಮೃದ್ಧಿಯಾಗಿ ಊಟ ಮಾಡುತ್ತೇವೆ. ಸಿಕ್ಕಿದ್ದನ್ನೆಲ್ಲಾ ಕುಡಿಯುತ್ತೇವೆ, ತಿನ್ನುತ್ತೇವೆ, ಆದರೆ ಆರೋಗ್ಯದ ಕಡೆ ಗಮನ ಹರಿಸುತ್ತಿಲ್ಲ. ಯಾರು ವೈದ್ಯರ ಬಳಿ ಹೋಗದಿರುವರೋ ಅವರೇ ಆರೋಗ್ಯವಂತರು. ಚಿಂತೆ ಮಾಡದೆ ಶಿಸ್ತುಬದ್ಧ ಜೀವನದಿಂದ ಆರೋಗ್ಯ ಹೆಚ್ಚುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಸಂಸ್ಥಾಪಕ ಶಾಂತಿಲಾಲ್ .ಪಿ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಉಪನ್ಯಾಸಕಿ ಹಾಗೂ ಗಾಯಕಿ ಅಕ್ಕಮ್ಮ ಪ್ರಾರ್ಥಿಸಿದರು. ಕಾರ್ಯದರ್ಶಿ ಹಾಗೂ ಗಾಯಕ ಸಿರಿವರ ಶಿವರಾಮಯ್ಯ ಸ್ವಾಗತಿಸಿದರು. ಸತ್ಸಂಗದ ವಿದ್ಯಾವಾಹಿನಿ ಕಾಲೇಜು ಶಾಖೆಯ ಕಾರ್ಯದರ್ಶಿ ಮಿಮಿಕ್ರಿ ಈಶ್ವರಯ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Leave a Comment