ಸಾಸ್ತಾನ ಬಂದ್

ಸ್ಥಳೀಯ ವಾಹನಗಳಿಗೆ ಟೋಲ್ ವಿರೋಧಿಸಿ ಪ್ರತಿಭಟನೆ

ಕುಂದಾಪುರ, ಡಿ.೭- ರಾಷ್ಟ್ರೀಯ ಹೆದ್ದಾರಿ ೬೬ರ ಸಾಸ್ತಾನದಲ್ಲಿ ಸ್ಥಳೀಯ ವಾಹನಗಳಿಗೆ ಟೋಲ್ ಸಂಗ್ರಹ ವಿರೋಧಿಸಿ ಇಂದು ಸಾಸ್ತಾನ ಟೋಲ್ ಗೇಟ್ ವ್ಯಾಪ್ತಿಯ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತಿದೆ. ಟೋಲ್ ಗೇಟ್ ವ್ಯಾಪ್ತಿಯ ೨೦ ಕಿ.ಮೀ. ಮಾಬುಕಳದಿಂದ ಕೋಟ ಮಣೂರು ತನಕ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ. ಸಾಸ್ತಾನ ಗುಂಡ್ಮಿಯಲ್ಲಿರುವ ನವಯುಗ ಕಂಪೆನಿ ಟೋಲ್ ಗೇಟ್‌ನಲ್ಲಿ ಸ್ಥಳೀಯ ವಾಹನಗಳಿಂದ ಟೋಲ್ ಸಂಗ್ರಹವನ್ನು ವಿರೋಧಿಸಿ ಹಲವು ಸಂಘಟನೆಗಳು ಈಗಾಗಲೇ ಹಲವು ಬಾರಿ ಪ್ರತಿಭಟನೆ ನಡೆಸಿದ್ದರೂ ಫಲಪ್ರದವಾಗಿಲ್ಲ.

ಕಳೆದ ೨ ವರ್ಷಗಳಿಂದ ಇಲ್ಲಿ ಸ್ಥಳೀಯ ವಾಹನಗಳಿಗೆ ಟೋಲ್ ಸಂಗ್ರಹ ನಿಲ್ಲಿಸಲಾಗಿತ್ತು. ಆದರೆ ಇತ್ತೀಚೆಗೆ ನವಯುಗ ಕಂಪೆನಿ ಸ್ಥಳೀಯರು ಟೋಲ್ ಸಂಗ್ರಹಿಸಲು ಬಿಡುತ್ತಿಲ್ಲ ಎಂದು ನ್ಯಾಯಾಲಯದ ಮೊರೆಹೋಗಿದ್ದರು. ನ್ಯಾಯಾಲಯ ಟೋಲ್ ವಸೂಲಾತಿಗೆ ಆದೇಶ ನೀಡಿತ್ತು. ಈ ಹಿನ್ನಲೆಯಲ್ಲಿ ಪೊಲೀಸ್ ಬಂದೋಬಸ್ತ್‌ನಲ್ಲಿ ಟೋಲ್ ಸಂಗ್ರಹ ಮಾಡಲಾಗಿತ್ತು. ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಈಗ ಮತ್ತೊಮ್ಮೆ ಹೋರಾಟಕ್ಕೆ ಸ್ಥಳೀಯರು ಮುಂದಾಗಿದ್ದು ಇಂದು ಬಂದ್ ಆಚರಿಸುವ ಮೂಲಕ ಪ್ರತಿಭಟನೆ ತಿರುವು ಪಡೆದುಕೊಂಡಿದೆ.

Leave a Comment