ಸಾವಿರಾರು ಭಕ್ತರೊಂದಿಗೆ ದಿಂಗಾಲೇಶ್ವರ ಶ್ರೀಗಳ ಮೆರವಣೆಗೆ

ಹುಬ್ಬಳ್ಳಿ, ಫೆ 23: ವೀರಶೈವ ಸಮುದಾಯದ ಪ್ರತಿಷ್ಠಿತ ಮೂರುಸಾವಿರ ಮಠದ ಉತ್ತರಾಧಿಕಾರಿ ವಿವಾದದ ಹಿನ್ನೆಲೆಯಲ್ಲಿ ಇಂದು ಸತ್ಯದರ್ಶನ ಸಭೆಯನ್ನು ಬಾಲೇಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮಿಗಳು ಶ್ರೀಮಠದಲ್ಲಿ ನಿಶ್ಚಿತವಾಗಿ ಮಾಡುವುದಾಗಿ ತಿಳಿಸಿದ್ದು, ಸಭೆಗೆ ಮುನ್ನ ನಗರದ ಪ್ರಮುಖ ಸ್ಥಳಗಳಲ್ಲಿ ದಿಂಗಾಲೇಶ್ವರ ಶ್ರೀಗಳು ಸಾವಿರಾರು ಭಕ್ತರೊಂದಿಗೆ ಮೆರವಣಿಗೆಯನ್ನು ಹಮ್ಮಿಕೊಂಡರು.

ನಗರದ ಮಧ್ಯಭಾಗದ ನೆಹರೂ ಮೈದಾನದಿಂದ ಪ್ರಾರಂಭವಾದ ಈ ಮೆರವಣಿಗೆಯು ಸರ್. ಸಿದ್ದಪ್ಪ ಕಂಬಳಿ, ಬಸವ ವನದ ಬಸವೇಶ್ವರ ಪ್ರತಿಮೆ, ಸಂಗೊಳ್ಳಿ ರಾಯಣ್ಣ ಪ್ರತಿಮೆ, ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಡಾ. ಅಂಬೇಡ್ಕರ್ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಯು ಸಾಗಿ ಶ್ರೀಮಠಕ್ಕೆ ಬಂದು ತಲುಪಿತು.

ಉತ್ತರಾಧಿಕಾರದ ಮಹತ್ವದ ಸಭೆಯಾಗಿರುವ ಸತ್ಯದರ್ಶನ ಸಭೆಗೆ ಸುತ್ತಲಿನ ಜಿಲ್ಲೆಗಳಾದ ಹಾವೇರಿ, ಗದಗ, ಬಾಗಲಕೋಟ, ಬೆಳಗಾವಿ ಜಿಲ್ಲೆಗಳಿಂದ ಸಾವಿರಾರು ಭಕ್ತರು ವಿವಿಧ ಖಾಸಗಿ ವಾಹನಗಳ ಮೂಲಕ ಆಗಮಿಸಿದ್ದು, ದಿಂಗಾಲೇಶ್ರರ ಶ್ರೀಗಳ ಪರವಾಗಿ ಘೋಷಣೆಗಳನ್ನು ಕೂಗಿದರು. ಇಂದು ನಡೆಯುವ ಸತ್ಯದರ್ಶನ ಸಭೆಯಲ್ಲಿ ಏನಾಗಬಹುದು ಎಂಬ ಕುತೂಹಲ ಸರ್ವರಲ್ಲೂ ಮನೆಮಾಡಿದೆ.

ಪೂರ್ವ ನಿಯೋಜಿತವಾಗಿ ಸತ್ಯದರ್ಶನ ಸಭೆ ಮಾಡುವುದಾಗಿ ತಿಳಿಸಲಾಗಿದ್ದರ ಹಿನ್ನೆಲೆಯಲ್ಲಿ ಮಠದ ಆವರಣದಲ್ಲಿ ಸಾವಿರಾರು ಭಕ್ತರು ಸೇರಿದ್ದಾರೆ. ಸಭೆಯ ನಿಮಿತ್ತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೂರಾರು ಸಂಖ್ಯೆಯಲ್ಲಿ ಪೊಲೀಸ್ ಸರ್ಪಗಾವಲನ್ನು ಹಾಕಲಾಗಿದ್ದು, ಕೆ.ಎಸ್.ಆರ್.ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.

ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ. ಕೃಷ್ಣಕಾಂತ ಮಠದ ಸುತ್ತಲೂ ಪರಿಶೀಲನೆ ನಡೆಸಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿ ಮುಂದಿನ ಪರಿಸ್ಥಿತಿಗೆ ಅನುಗುಣವಾಗಿ ಬಂದೋಬಸ್ತ ಒದಗಿಸಲಾಗುವುದು. ಎಷ್ಟು ಜನರು ಸಭೆಗೆ ಬರುತ್ತಾರೆ ಎನ್ನುವುದರ ಪೂರ್ಣ ಮಾಹಿತಿ ಸದ್ಯಕ್ಕಿಲ್ಲ. ಈಗಿರುವ ಮಾಹಿತಿ ಪ್ರಕಾರ ಸೂಕ್ತ ಬಂದೋಬಸ್ತ್ ಒದಗಿಸಲಾಗಿದೆ ಎಂದರು.

ಮಠದ ಆವರಣದ ಸುತ್ತಲೂ ಬ್ಯಾರಿಕೇಡ್‍ಗಳನ್ನು ಹಾಕಲಾಗಿದ್ದು, ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಡೆಯುವ ಸಭೆಗೆ ಈಗಾಗಲೇ ಎಲ್ಲ ರೀತಿಯ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದ್ದು, ಯಾವುದೇ ಅಚಾತುರ್ಯ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಕೋಟ್ಯಂತರ ಭಕ್ತರ ಮತ್ತು ಸಮುದಾಯದ ಚಿತ್ತ ಈಗ ಮಠದ ವಿದ್ಯಮಾನದತ್ತ ಕೇಂದ್ರೀಕೃತವಾಗಿದ್ದು, ಇಂದು ನಡೆಯುವ ಸಭೆಗೆ ಪ್ರಮುಖ ಗಣ್ಯರನ್ನು ದಿಂಗಾಲೇಶ್ವರ ಶ್ರೀಗಳು ಆಹ್ವಾನಿಸಿದ್ದಾರೆ. ಸಭೆಯಲ್ಲಿ ಯಾವ ವಿಷಯಗಳ ಕುರಿತು ಅವರು ಸಾರ್ವಜನಿಕವಾಗಿ ಮಾಹಿತಿಯನ್ನು ನೀಡಲಿದ್ದಾರೆ ಎನ್ನುವುದು ಎಲ್ಲರಿಗೂ ಅಪಾರ ಕುತೂಹಲವನ್ನುಂಟು ಮಾಡಿದೆ.

Leave a Comment