ಸಾವಿನಲ್ಲಿ ಅಂತ್ಯ ಕಂಡ ತೀರ್ಥಯಾತ್ರೆ

ಕಾರ್-ಲಾರಿ ಡಿಕ್ಕಿ ೯ ಮಂದಿ ದುರ್ಮರಣ
ಮಂಗಳೂರು, ಸೆ.೧೩- ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತೀರ್ಥಕ್ಷೇತ್ರಗಳ ದರ್ಶನಕ್ಕೆಂದು ಬಂದು ವಾಪಸ್ ತೆರಳುತ್ತಿದ್ದ ವೇಳೆ ಝೈಲೋ ಕಾರ್ ಹಾಗೂ ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒಂದೇ ಕುಟುಂಬಕ್ಕೆ ಸೇರಿದ ೯ ಮಂದಿ ದಾರುಣ ಮೃತಪಟ್ಟು ಓರ್ವ ಗಂಭೀರ ಗಾಯಗೊಂಡ ಘಟನೆ ಇಂದು ಬೆಳಗ್ಗೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಸಮೀಪದ ಅರಬೈಲುಘಟ್ಟ ಎಂಬಲ್ಲಿ ನಡೆದಿದೆ. ಮೃತರಲ್ಲಿ ಮೂವರು ಪುರುಷರು, ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದ್ದು, ಗಂಭೀರ ಗಾಯಗೊಂಡಾತನನ್ನು ಯಲ್ಲಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ವೈಷ್ಣವಿ(೫), ಅಭಿನವ್(೩), ವರದ್‌ರಾಜ್(೧.೩), ಸಚಿನ್ ಮಧುಕರ್ ಜಂದೇನವರ್(೨೮), ವಿವೇಕ್ ವಸಂತ್ ಘಾಟ್ಗೆ(೩೪), ರೇಣುಕಾ(೩೦), ಗೌರವ್ ವಸಂತ ಮೇಟ್ರಿ(೫೮), ಮೇನಕಾ(೨೮), ಮುಜ್ಜು ಯಾನೆ ಮುಜಾಹಿದ್(೨೮) ಎಂದು ಗುರುತಿಸಲಾಗಿದೆ. ಇವರಲ್ಲಿ ವಿವೇಕ್ ಘಾಟ್ಗೆ ಕುಡುಚಿ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ಶ್ಯಾಂ ಘಾಟ್ಗೆ ಅವರ ಸಂಬಂದಿಯೆಂದು ಹೇಳಲಾಗಿದೆ. ಅಪಘಾತದಲ್ಲಿ ಉದ್ಯಮಿ ವಿವೇಕ್ ಘಾಟ್ಗ್, ಪತ್ನಿ ಮೇನಕಾ, ಮಕ್ಕಳಾದ ವೈಷ್ಣವಿ ಮತ್ತು ವರದ್‌ರಾಜ್ ಜೊತೆಯಲ್ಲೇ ಸಾವನ್ನಪ್ಪುವುದರೊಂದಿಗೆ ಇಡೀ ಕುಟುಂಬವೇ ಬಲಿಯಾದಂತಾಗಿದೆ.
ಘಟನೆಯ ವಿವರ:
ಚಾಲಕ ಮುಜಾಹಿದ್ ಸೇರಿದಂತೆ ಒಟ್ಟು ೧೦ ಮಂದಿ ಸಂಚರಿಸುತ್ತಿದ್ದ ಕಾರ್ ರಾ.ಹೆ. ೬೩ರ ಅರಬೈಲುಘಟ್ಟ ಎಂಬಲ್ಲಿ ಮುಂಬದಿಯಿಂದ ಬರುತ್ತಿದ್ದ ಲಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರ್ ಸಂಪೂರ್ಣ ನಜ್ಜುಗುಜ್ಜಾಗಿದ್ದು ಲಾರಿಯಡಿಗೆ ತೂರಿಕೊಂಡಿದೆ. ಕಾರಿನಲ್ಲಿದ್ದವರ ಪೈಕಿ ೯ ಮಂದಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದು ಒಬ್ಬ ಗಾಯಗೊಂಡಿದ್ದಾನೆ. ಘಟನೆ ನಡೆದ ತಕ್ಷಣ ಸ್ಥಳೀಯರು ಒಟ್ಟುಸೇರಿದ್ದು ಕಾರಿನಲ್ಲಿದ್ದವರನ್ನು ರಕ್ಷಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಎರಡೂ ವಾಹನಗಳು ಅತೀವೇಗವಾಗಿ ಸಂಚರಿಸುತ್ತಿದ್ದ ಕಾರಣ ಗಾಯಾಳುಗಳು ಕೆಲವೇ ಕ್ಷಣಗಳಲ್ಲಿ ಇಹಲೋಕ ತ್ಯಜಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗಂಭೀರ ಗಾಯಗೊಂಡಿದ್ದ ಒಬ್ಬನನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದು ಆತನ ಸ್ಥಿತಿಯೂ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಮೊನ್ನೆ ಕುಕ್ಕೆ ಸುಬ್ರಹ್ಮಣ್ಯ ಮತ್ತಿತರ ಧಾರ್ಮಿಕ ಕ್ಷೇತ್ರಗಳ ದರ್ಶನಕ್ಕೆಂದು ಬಂದಿದ್ದ ಒಂದೇ ಕುಟುಂಬಕ್ಕೆ ಸೇರಿದ ೧೦ ಮಂದಿ ನಿನ್ನೆ ಸಂಜೆ ದೇವರ ದರ್ಶನ ಮುಗಿಸಿಕೊಂಡು ವಾಪಸ್ ಆಗುತ್ತಿದ್ದು, ಹುಬ್ಬಳ್ಳಿಯಿಂದ ಆಂಕೋಲ ಮಾರ್ಗವಾಗಿ ರಾಯಬಾಗಕ್ಕೆ ತೆರಳುವ ವೇಳೆ ದುರ್ಘಟನೆ ಸಂಭವಿಸಿದೆ. ಘಟನೆಯಿಂದಾಗಿ ರಸ್ತೆ ಸಂಚಾರ ಗಂಟೆಗೂ ಹೆಚ್ಚು ಕಾಲ ಅಸ್ತವ್ಯಸ್ತಗೊಂಡಿತ್ತು. ಸ್ಥಳಕ್ಕೆ ಕಾರವಾರ ಠಾಣಾ ಪೊಲೀಸರು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

Leave a Comment