ಸಾಲ ಮರುಪಾವತಿಗೆ ಕಿರುಕುಳ ತಡೆಗೆ ಮನವಿ

ರಾಯಚೂರು.ಫೆ.17- ಜಿಲ್ಲೆಯ ರೈತರಿಗೆ ರಾಷ್ಟ್ರೀಯ ಮತ್ತು ಖಾಸಗಿ ಬ್ಯಾಂಕ್‌ಗಳು ನೀಡಿರುವ ಸಾಲ ಮರು ಪಾವತಿಸುವಂತೆ ಮಾಲೀಕರು ಕಿರುಕುಳ ನೀಡುವುದನ್ನು ತಡೆಗಟ್ಟಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ರೈತರಿಗೆ ಖಾಸಗಿ ಬ್ಯಾಂಕ್ ಮಾಲೀಕರು ಟ್ರ್ಯಾಕ್ಟರ್ ಸಾಲ ವಿತರಿಸಿ ಮರು ಪಾವತಿಸುವಂತೆ ಪ್ರತಿ ನಿತ್ಯ ಕಿರುಕುಳ ನೀಡುತ್ತಿದ್ದಾರೆ ಮತ್ತೊಂದೆಡೆ ರೈತರಿಗೆ ಸಂಬಂಧಪಟ್ಟ ಅಗತ್ಯ ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದಾರೆ. ಜಿಲ್ಲೆಯಾದ್ಯಂತ ಕಳೆದ 3 ವರ್ಷಗಳಿಂದ ಭೀಕರ ಬರ ಆವರಿಸಿರುವ ಹಿನ್ನೆಲೆ ರೈತರು ಸಮರ್ಪಕವಾಗಿ ಬೆಳೆ ಬೆಳೆಯುವಲ್ಲಿ ವಿಫಲರಾಗಿರುವ ಸಂದರ್ಭದಲ್ಲಿ ಖಾಸಗಿ ಬ್ಯಾಂಕ್ ಮಾಲೀಕರು ಸಾಲ ಮರುಪಾವತಿಸುವಂತೆ ಕಿರುಕುಳ ನೀಡುತ್ತಿರುವುದು ಖಂಡನೀಯ.

ಮಾನ್ವಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಕೃಷಿ ಬೆಳೆಗೆ ಖರ್ಚು ಮಾಡಿದ ಆದಾಯ ಲಭ್ಯವಾಗುತ್ತಿಲ್ಲ. ಅಲ್ಲದೇ ಜೆಸ್ಕಾಂ ಇಲಾಖೆಯ ಅಧಿಕಾರಿಗಳು ಮತ್ತು ಜಾಗೃತ ದಳದವರು ಮಾನ್ವಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಏಕಾಏಕಿ ಮನೆಗಳಿಗೆ ನುಗ್ಗಿ ಬಿಲ್ ಪಾವತಿಸದಿರುವ ಸಾರ್ವಜನಿಕರಿಗೆ ದಂಡ ವಿಧಿಸುತ್ತಿರುವುದನ್ನು ತಡೆಗಟ್ಟಬೇಕೆಂದು ಆಗ್ರಹಿಸಿದರು.  ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸೂಗರಯ್ಯ ಆರ್.ಎಸ್.ಮಠ, ವೀರೇಶ ಹೊಸಮನಿ, ಹನುಮಂತಪ್ಪ ಪೂಜಾರಿ ಉಪಸ್ಥಿತರಿದ್ದರು.

Leave a Comment