ಸಾಲ, ಬಡ್ಡಿ ವಸೂಲು ಮಾಡುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ

ಚಾಮರಾಜನಗರ, ಮೇ 23- ಕೋವಿಡ್-19 ಕಾರಣದಿಂದ ಲಾಕ್‍ಡೌನ್ ಇರುವ ಹಿನ್ನಲೆಯಲ್ಲಿ ಮೈಕ್ರೋಫೈನಾನ್ಸ್ ಕಂಪನಿಗಳು, ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಗ್ರಾಹಕರಿಂದ ಬಲವಂತವಾಗಿ ಯಾವುದೇ ಸಾಲ, ಬಡ್ಡಿ ವಸೂಲಾತಿ ಮಾಡುವ ಪ್ರಕ್ರಿಯೆ ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಎಚ್ಚರಿಕೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಮೈಕ್ರೋಫೈನಾನ್ಸ್, ಬ್ಯಾಂಕುಗಳು ಹಾಗೂ ಸಹಕಾರಿ ಬ್ಯಾಂಕುಗಳ ಅಧಿಕಾರಿಗಳು ಮತ್ತು ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸ್ತುತ ಲಾಕ್‍ಡೌನ್ ಇರುವ ಹಿನ್ನಲೆಯಲ್ಲಿ ಜನರಿಗೆ ಹಲವು ತೊಂದರೆಗಳಿವೆ. ಆದಾಯ, ಉದ್ಯೋಗ ಏರುಪೇರಿನಿಂದಾಗಿ ಸದ್ಯದಲ್ಲಿ ಕೆಲವರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸಾಲ, ಬಡ್ಡಿ ನೀಡುವಂತೆ ಗ್ರಾಹಕರನ್ನು ಒತ್ತಾಯ ಮಾಡುವಂತಿಲ್ಲ. ಜೂನ್ 31ರವರೆಗೂ ಯಾವುದೇ ಕಾರಣಕ್ಕೂ ಗ್ರಾಹಕರಿಂದ ಸಾಲ ಹಾಗೂ ಬಡ್ಡಿ ಹಣವನ್ನು ಪಡೆಯಬಾರದು ಎಂದು ಜಿಲ್ಲಾಧಿಕಾರಿಗಳು ತಾಕೀತು ಮಾಡಿದರು.
ಮೈಕ್ರೋಫೈನಾನ್ಸ್‍ಗಳು ಪ್ರಸಕ್ತ ಸನ್ನಿವೇಶದಲ್ಲಿ ಗ್ರಾಹಕರಿಗೆ ಸದಸ್ಯರಿಗೆ ಹೇಗೆ ನೆರವಾಗಬೇಕೆಂಬ ಉದ್ದೇಶದಿಂದ ಸರ್ಕಾರ ಸಾಕಷ್ಟು ನಿರ್ದೇಶನ, ಮಾರ್ಗಸೂಚಿಗಳನ್ನು ಹೊರಡಿಸಿದೆ. ಇದರ ಅನುಸಾರ ನಡೆದುಕೊಳ್ಳಬೇಕು. ಆದರೆ ಗ್ರಾಹಕರಿಗೆ ಒತ್ತಾಯಪೂರ್ವಕವಾಗಿ ಸಾಲ, ಬಡ್ಡಿ ಇನ್ನಿತರ ಹಣವನ್ನು ಪಾವತಿ ಮಾಡುವಂತೆ ಒತ್ತಾಯಿಸಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಇಂತಹ ಸಮಸ್ಯೆಗಳು ಮತ್ತೆ ಕೇಳಿಬಂದರೆ ಸಹಿಸಲಾಗುವುದಿಲ್ಲ. ಜಿಲ್ಲಾಡಳಿತ ಗಂಭೀರ ಕ್ರಮ ತೆಗೆದುಕೊಳ್ಳಲು ಮುಂದಾಗಬೇಕಾಗುತ್ತದೆ ಎಂದು ಅವರು ತಿಳಿಸಿದರು.
ಸ್ವಸಹಾಯ ಸಂಘಗಳು, ಇತರೆ ಹಣಕಾಸು ಸಂಸ್ಥೆಗಳು ಬ್ಯಾಂಕುಗಳು ಸಾಲ ನೀಡುವಂತೆ ಗ್ರಾಹಕರಿಗೆ ನೋಟಿಸ್ ನೀಡಬಾರದು. ಸಹಕಾರಿ ಬ್ಯಾಂಕುಗಳು ಸಹ ಯಾವುದೇ ಕಾರಣಕ್ಕೂ ನೋಟಿಸ್ ಕೊಡಬಾರದು. ಇನ್ನುಮುಂದೆ ನೋಟಿಸ್ ನೀಡುವುದು ಗಮನಕ್ಕೆ ಬಂದರೇ ತಕ್ಷಣವೇ ಸಂಬಂಧಪಟ್ಟ ಬ್ಯಾಂಕು, ಹಣಕಾಸು ಸಂಸ್ಥೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ. ಗ್ರಾಹಕರನ್ನು ಶೋಷಿಸುವುದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದರು.
ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಲಾಕ್‍ಡೌನ್ ಅವಧಿಯಲ್ಲಿ ಜನರ ಕಷ್ಟವನ್ನು ಅರ್ಥ ಮಾಡಿಕೊಳ್ಳಬೇಕಿದೆ. ಮಾನವೀಯ ನೆಲೆಯಲ್ಲಿ ನೋಡಬೇಕಿದೆ. ಉತ್ಪಾದನೆ, ಆದಾಯ ಪರಿಸ್ಥಿತಿಯನ್ನು ಗಮನಿಸಿ ಕಾಲಾವಕಾಶ ನೀಡಬೇಕಿದೆ. ಸಾಲ ಬಡ್ಡಿಯನ್ನು ವಸೂಲು ಮಾಡುವ ಪ್ರಕ್ರಿಯೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಎಂಬ ಮಾಹಿತಿಯನ್ನು ಸಂಸ್ಥೆಗಳೇ ಗ್ರಾಹಕರಿಗೆ ವಿವಿಧ ಮಾಧ್ಯಮಗಳ ಮೂಲಕ ತಿಳಿಸಬೇಕು. ವೈಯಕ್ತಿಕವಾಗಿಯೂ ಗ್ರಾಹಕರಿಗೆ ತಿಳಿವಳಿಕೆ ನೀಡಬೇಕೆಂದು ಜಿಲ್ಲಾಧಿಕಾರಿಯವರು ಸೂಚಿಸಿದರು.
ಜಿಲ್ಲೆಯಲ್ಲಿ ಪ್ರಸ್ತುತ ಸಂದರ್ಭದಲ್ಲಿ ಬ್ಯಾಂಕುಗಳು, ಮೈಕ್ರೋಫೈನಾನ್ಸ್ ಸಂಸ್ಥೆಗಳು ಗ್ರಾಹಕರೊಂದಿಗೆ ಹೇಗೆ ವ್ಯವಹರಿಸುತ್ತಿವೆ? ಗ್ರಾಹಕಸ್ನೇಹಿಯಾಗಿ ಸೇವೆ ನೀಡುತ್ತಿವೆಯೇ? ಒತ್ತಾಯಪೂರ್ವಕವಾಗಿ ಸಾಲ ಬಡ್ಡಿ ವಸೂಲಾತಿಗೆ ಮುಂದಾಗಿ ಗ್ರಾಹಕರಿಗೆ ತೊಂದರೆ ನೀಡುತ್ತಿವೆಯೇ? ಎಂಬ ಬಗ್ಗೆ ಪೂರ್ಣವಾಗಿ ಪರಿಶೀಲಿಸಿ ಲೀಡ್‍ಬ್ಯಾಂಕ್ ವ್ಯವಸ್ಥಾಪಕರು ವರದಿ ನೀಡಬೇಕು. ಹಾಗೇಯೇ ಸಹಕಾರ ಸಂಘಗಳ ಇಲಾಖೆಯ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಸಂಘ ಸಂಸ್ಥೆಗಳ ಕಾರ್ಯವನ್ನು ಪರಿಶೀಲಿಸಿ ಸದಸ್ಯರಿಗೆ ಯಾವುದೇ ಸಮಸ್ಯೆಯಾಗದಿರುವ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು. ಒಟ್ಟಾರೆ ಜನರ ಹಿತ ಕಾಯಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಲೀಡ್‍ಬ್ಯಾಂಕ್ ವ್ಯವಸ್ಥಾಪಕರಾದ ಸುನಂದ, ಸಹಕಾರ ಸಂಘಗಳ ಉಪನಿಬಂಧಕರಾದ ಜೆ. ವಿಕ್ರಮರಾಜೇ ಅರಸ್, ಸಹಾಯಕ ನಿಬಂಧಕರಾದ ರಮೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಬಿ. ಬಸವರಾಜು, ವಿವಿಧ ಹಣಕಾಸು, ಬ್ಯಾಂಕುಗಳ, ಮೈಕ್ರೋಫೈನಾನ್ಸ್ ಸಂಸ್ಥೆಗಳ ವ್ಯವಸ್ಥಾಪಕರು ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.

Leave a Comment