ಸಾಲ ಪಾವತಿಗೆ 3 ತಿಂಗಳು ವಿನಾಯ್ತಿ: ಆರ್‌ಬಿಐ ಕ್ರಮದಿಂದ ಸಾಲಗಾರರು ನಿಟ್ಟುಸಿರು ರೆಪೋ ದರ ಕೂಡ ಕಡಿಮೆ

ನವದೆಹಲಿ, ಮೇ ೨೨- ಲಾಕ್‌ಡೌನ್ ಜಾರಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಸಾಲಗಾರರ ನೆರವಿಗೆ ಧಾವಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ ವಿವಿಧ ಬ್ಯಾಂಕ್‌ಗಳಿಂದ ಗ್ರಾಹಕರು ಪಡೆದಿರುವ ಗೃಹ, ವಾಹನ ಮತ್ತು ವೈಯುಕ್ತಿಕ ಸಾಲಗಳ ಮಾಸಿಕ ಕಂತು ಪಾವತಿಸಲು (ಇಎಂಐ) ಮತ್ತೆ 3 ತಿಂಗಳ ವಿನಾಯ್ತಿಯನ್ನು ವಿಸ್ತರಿಸಿ ಘೋಷಣೆ ಮಾಡಿದೆ.
ಭಾರತೀಯ ರಿಸರ್ವ್ ಬ್ಯಾಂಕ್‌ನ ಗೌರ್ನರ್ ಶಕ್ತಿಕಾಂತ್ ದಾಸ್ ಪತ್ರಿಕಾಗೋಷ್ಠಿಯಲ್ಲಿಂದು ಈ ವಿಷಯವನ್ನು ಪ್ರಕಟಿಸಿದರು.

ಸಾಲಗಾರರ ಮೇಲಿನ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಆರ್‌ಬಿಐ ಈ ಕ್ರಮ ಕೈಗೊಂಡಿದೆ ಎಂದು ಅವರು ತಿಳಿಸಿದರು.
ಕೊರೊನಾ ತಡೆಗೆ ಜಾರಿ ಮಾಡಿರುವ ಲಾಕ್‌ಡೌನ್ ಸಂದರ್ಭದಲ್ಲಿ ಬ್ಯಾಂಕ್‌ಗಳಿಂದ ಸಾಲ ಪಡೆದವರು ಮರು ಪಾವತಿಗೆ ತೀವ್ರ ತೊಂದರೆಗೆ ಸಿಲುಕಿದ್ದನ್ನು ಗಮನಿಸಿದ್ದ ಆರ್‌ಬಿಐ, ಮಾರ್ಚ್ 1 ರಿಂದ 3 ತಿಂಗಳ ಕಾಲ ಇಎಂಐ ಪಾವತಿಗೆ ವಿನಾಯ್ತಿ ನೀಡಿತ್ತು. ಈಗ ಮತ್ತೆ 3 ತಿಂಗಳು ಇಎಂಐ ಪಾವತಿಸುವುದಕ್ಕೆ ವಿನಾಯ್ತಿಯನ್ನು ವಿಸ್ತರಿಸಿದ್ದು, ಸಾಲಗಾರರು ನಿಟ್ಟುಸಿರು ಬಿಡುವಂತಾಗಿದೆ.

ಜೂನ್ 1 ರಿಂದ ಆಗಸ್ಟ್ 31ರವರೆಗೆ ಸಾಲಗಾರರು ಇಎಂಐ ಪಾವತಿಸುವುದರಿಂದ ನಿಶ್ಚಿತೆಯಿಂದ ಇರಬಹುದು.
ಲಾಕ್‌ಡೌನ್‌ನಿಂದ ತೀವ್ರ ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿರುವ ದೇಶದ ಆರ್ಥಿಕತೆಗೆ ಹೊಸ ಚೈತನ್ಯ ನೀಡಲು ಮುಂದಾಗಿರುವ ಆರ್‌ಬಿಐ, ರೆಪೋದರವನ್ನು 40 ಮೂಲ ಅಂಶಗಳಷ್ಟು (ಬೇಸಿಸ್ ಪಾಯಿಂಟ್ಸ್) ಕಡಿಮೆ ಮಾಡಿದೆ.
ರೆಪೋದರ ಶೇ. 4.4 ರಷ್ಟು ಇದ್ದದ್ದನ್ನು ಶೇ. 4 ಕ್ಕೆ ಕಡಿತಗೊಳಿಸಿದೆ. ರಿವರ್ಸ್ ರೆಪೋ ದರವನ್ನು ಶೇ. 3.75 ರಿಂದ ಶೇ. 3.35 ಕ್ಕೆ ಇಳಿಸಲು ತೀರ್ಮಾನಿಸಿದೆ.

ಬ್ಯಾಂಕ್‌ಗಳಿಗೆ ನಗದು ಅರಿವಿನ ಪ್ರಮಾಣ ಹೆಚ್ಚಿಸಲು ಫೆಬ್ರವರಿ ತಿಂಗಳಲ್ಲಿ ಒಟ್ಟು ಜಿಡಿಪಿಯ ಶೇ. 3. 2ರಷ್ಟನ್ನು ಬ್ಯಾಂಕ್‌ಗಳಿಗೆ ಬಿಡುಗಡೆ ಮಾಡಿತ್ತು.  ರೆಪೋದರ ಇಳಿಕೆಯಿಂದ ಗೃಹ, ವಾಹನ ಹಾಗೂ ವೈಯುಕ್ತಿಕ ಸಾಲದ ಮೇಲಿನ ಬಡ್ಡಿ ದರವೂ ಕಡಿಮೆಯಾಗಲಿದೆ ಎಂದು ಶಕ್ತಿಕಾಂತ್ ದಾಸ್ ತಿಳಿಸಿದರು.

2021ರ ಆರ್ಥಿಕ ವರ್ಷದಲ್ಲಿ ಜಿಡಿಪಿ ಬೆಳವಣಿಗೆ ನಕಾರಾತ್ಮಕವಾಗಿರುತ್ತದೆ ಎಂದು ಅವರು ತಿಳಿಸಿದರು.
ಕೈಗಾರಿಕಾ ಉತ್ಪಾದನೆ, ಬೇಡಿಕೆ ಮತ್ತು ಪೂರೈಕೆಯಲ್ಲಿನ ಏರುಪೇರಿನಿಂದಾಗಿ ನಕಾರಾತ್ಮಕ ಬೆಳವಣಿಗೆ ಕಂಡು ಬರುವ ಸಾಧ್ಯತೆಗಳಿವೆ ಎಂದು ಅವರು ತಿಳಿಸಿದರು.

ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಲ್ಪಮಟ್ಟಿಗೆ ಏರಿಕೆ ಕಂಡು ಬಂದಿದೆ. ಮುಂಗಾರು ಹಂಗಾಮು ಈಗಾಗಲೇ ಪ್ರಾರಂಭವಾಗಿದ್ದು, ಎಲ್ಲೆಡೆ ಬಿತ್ತನೆ ಕಾರ್ಯ ಚುರುಕುಗೊಂಡಿದೆ ಎಂದು ಹೇಳಿದರು.
ಏಪ್ರಿಲ್ ತಿಂಗಳಲ್ಲಿ ಹಣದುಬ್ಬರ ಪ್ರಮಾಣ ಶೇ. 8.7 ಕ್ಕೆ ಇಳಿಕೆಯಾಗಿದೆ. ಮಾರುಕಟ್ಟೆ ಚೈತನ್ಯಕ್ಕಾಗಿ ಸಿಡ್ಬಿ (ಎಸ್ಐಡಿಬಿಐ) ಗೆ 3 ತಿಂಗಳಲ್ಲಿ 15 ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಅವರು ಅಂಕಿ ಅಂಶಗಳ ಸಮೇತ ವಿವರಿಸಿದರು.

ಲಾಕ್‌‌‌ಡೌನ್ ಜಾರಿಯಿಂದ ಕಳೆದ ಎರಡು ತಿಂಗಳ ಅವಧಿಯಲ್ಲಿ ಆರ್ಥಿಕತೆ ಮೇಲೆ ದುಷ್ಪರಿಣಾಮ ಉಂಟಾಗಿದ್ದು, ಚೇತರಿಕೆಗೆ ಮತ್ತಷ್ಟು ಕಾಲಾವಕಾಶ ಅಗತ್ಯವಿದೆ ಎಂದು ಅವರು ಹೇಳಿದರು.

 

Leave a Comment