ಸಾಲಮನ್ನಾ ನಂತರವೂ ಮಹಾರಾಷ್ಟ್ರದ 7 ರೈತರ ಆತ್ಮಹತ್ಯೆ

ಮುಂಬೈ, ಜು. ೧೨- ಮಹಾರಾಷ್ಟ್ರದಲ್ಲಿ ಕಳೆದ 6 ತಿಂಗಳಿಂದ ಸರಾಸರಿ ದಿನಕ್ಕೆ 7 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಿದ್ದರೂ ಈ ವರ್ಷದಲ್ಲಿ ಜೂನ್ ಅಂತ್ಯದ ವೇಳೆಗೆ 1,307 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಳೆದ ವರ್ಷ ಜನವರಿಯಿಂದ ಜೂನ್‌ವರೆವಿಗೆ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 1,398. ಮರಾಠವಾಡ ಮತ್ತು ವಿದರ್ಭ ಭಾಗಗಳಲ್ಲಿ ಹೆಚ್ಚು ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕಳೆದ 6 ತಿಂಗಳಲ್ಲಿ ಮರಾಠವಾಡ ಭಾಗದಲ್ಲಿ ಮೃತಪಟ್ಟ ರೈತರ ಸಂಖ್ಯೆ 477. ಕಳೆದ ವರ್ಷ ಇದೇ ಅವಧಿಯಲ್ಲಿ 454 ಮಂದಿ ಮೃತಪಟ್ಟಿದ್ದರು. ಹಾಗೆಯೇ, ವಿದರ್ಭದಲ್ಲಿ ಇದೇ ವರ್ಷ ಜೂನ್ ವೇಳೆಗೆ 598 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಇದೇ ಭಾಗಕ್ಕೆ ಸೇರಿದವರು.

ಮಹಾರಾಷ್ಟ್ರ ಕಳೆದ ರೈತರ ಸಾಲಮನ್ನಾ ಘೋಷಿಸಿದ್ದು, 38 ಲಕ್ಷ ರೈತರು ಇದರ ಫಲಾನುಭವಿಗಳಾಗಿದ್ದಾರೆ. ಫಲಾನುಭವಿ ರೈತರ 77.3 ಲಕ್ಷ ಖಾತೆಗಳಿಗೆ ಸಾಲಮನ್ನಾ ಹಣ ಜಮಾ ಆಗಿದ್ದು, ಇದೇ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ 1426 ಕೋಟಿ ರೂ. ಮೊತ್ತದ ಸಾಲಮನ್ನಾವನ್ನು ಮಹಾರಾಷ್ಟ್ರ ಸರ್ಕಾರ ಮಾಡಿದೆ.

ಇಷ್ಟಾದರೂ ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಸಂಖ್ಯೆ ಇಳಿಮುಖವಾಗಿಲ್ಲ ಎನ್ನುವುದೇ ಆತಂಕದ ವಿಷಯವಾಗಿದೆ.

Leave a Comment