ಸಾಲಭಾದೆ; ಕಿಡ್ನಿ ಮಾರಾಟಕ್ಕೆ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡಿದ ರೈತ

ಲಖನೌ, ಆ 24 – ಬಡ್ಡಿ ದರದಲ್ಲಿ ಪಡೆದಿದ್ದ ಸಾಲ ತೀರಿಸುವ ಸಲುವಾಗಿ ತನ್ನ ಕಿಡ್ನಿ ಮಾರಾಟ ಮಾಡುವುದಾಗಿ ರೈತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡಿದ್ದಾರೆ.
ಸಹರಾನ್ ಪುರ ಜಿಲ್ಲೆಯ ರೈತ ರಾಮ್ ಕುಮಾರ್ ಎಂಬುವರು ನೀಡಿದ ಈ ಜಾಹೀರಾತಿನ ಸಂಬಂಧ ಜಿಲ್ಲಾಡಳಿತ ತನಿಖೆ ಕೈಗೊಂಡಿದೆ. ರಾಮ್ ಕುಮಾರ್ ಅವರ ಡೈರಿ ವ್ಯವಹಾರವನ್ನು ಆಧಾರವಾಗಿರಿಸಿಕೊಂಡು ಸಾಲ ನೀಡಲು ಬ್ಯಾಂಕ್ ನಿರಾಕರಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಈ ಕಿಡ್ನಿ ದಾನ ಜಾಹೀರಾತಿಗೆ ಸಿಂಗಾಪುರ ಹಾಗೂ ದುಬೈನಲ್ಲಿ ಬೇಡಿಕೆ ಬಂದಿದ್ದು, ಕೆಲವರು ಒಂದು ಕೋಟಿ ರೂ. ನೀಡಲು ಸಿದ್ಧರಿರುವುದಾಗಿ ತಿಳಿಸಿದ್ದಾರಂತೆ.
ಮಾಧ್ಯಮಗಳ ವರದಿ ಅನುಸಾರ, 30 ವರ್ಷದ ರಾಮ್ ಕುಮಾರ್ ಅವರಿಗೆ ಸ್ವಂತ ಹಾಲಿನ ಡೈರಿ ತೆರೆಯುವ ಬಯಕೆಯಿತ್ತು. ಆದರೆ, ಬ್ಯಾಂಕ್ ನವರು ಸಾಲ ನೀಡಲು ನಿರಾಕರಿಸಿದ್ದರಿಂದ ಅವರು ಸ್ಥಳೀಯ ಸಾಹುಕಾರರಿಂದ 10 ಲಕ್ಷ ರೂ. ಸಾಲ ಪಡೆದಿದ್ದರು. ನಂತರ, ಅವರು ಡೈರಿ ವ್ಯವಹಾರ ಆರಂಭಿಸಿದರಾದರೂ, ಅದು ನಿರೀಕ್ಷೆಯಂತೆ ಯಶಸ್ವಿಯಾಗಲಿಲ್ಲ. ಆದ್ದರಿಂದ ಸಾಲ ತೀರಿಸಲಾಗದೆ ಕಿಡ್ನಿ ಮಾರಲು ಮುಂದಾಗಿದ್ದಾರೆ ಎನ್ನಲಾಗಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರಾಮ್ ಕುಮಾರ್, ‘ನಾನು ನನ್ನ ಕುಟುಂಬದ ಆರು ಜನರ ಜವಾಬ್ದಾರಿ ನಿಭಾಯಿಸಬೇಕು. ಅದಕ್ಕಾಗಿಯೇ ಹೊಸ ವ್ಯವಹಾರ ಆರಂಭಿಸಿದ್ದೆನು. ಹಲವು ಬಾರಿ ಬ್ಯಾಂಕ್ ಗೆ ಸಾಲ ಕೋರಿ ಅರ್ಜಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಇದಕ್ಕಾಗಿ ಬಡ್ಡಿ ವ್ಯವಹಾರ ಮಾಡುವವರಿಂದ 10 ಲಕ್ಷ ರೂ. ಸಾಲ ಪಡೆದಿದ್ದೆನು. ಆದರೆ, ವ್ಯವಹಾರ ನಿರೀಕ್ಷೆಯಂತೆ ನಡೆಯದ್ದರಿಂದ ಸಾಲ ತೀರಿಸಲಾಗಲಿಲ್ಲ. ಈಗ ಒಂದು ಕಿಡ್ನಿ ಮಾರಾಟ ಮಾಡಿದರೆ ಅದರಿಂದ ಬರುವ ಹಣದಿಂದ ಮತ್ತೊಮ್ಮೆ ಡೈರಿ ವ್ಯವಹಾರದಲ್ಲಿ ಹೂಡಿಕೆ ಮಾಡಬಹುದು’ ಎಂದು ಆಶಯ ವ್ಯಕ್ತಪಡಿಸಿದರು.
ಬ್ಯಾಂಕ್ ಅಧಿಕಾರಿಗಳು, ರಾಮ್ ಕುಮಾರ್ ಗೆ ಸಾಲ ಪಡೆಯುವ ಮುನ್ನ ಪ್ರಧಾನ ಮಂತ್ರಿಗಳ ಕೌಶಲ್ ವಿಕಾಸ್ ಯೋಜನೆಯಡಿ ತರಬೇತಿ ಪಡೆಯುವಂತೆ ಸಲಹೆ ನೀಡಿದ್ದರು. ಅದರಂತೆ, ಅವರು ಮೂರು ಬಾರಿ ತರಬೇತಿ ಪಡೆದಿದ್ದರೂ ಸಾಲ ಮಂಜೂರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಿಡ್ನಿ ಮಾರಲು ಮುಂದಾದ ರಾಮ್ ಕುಮಾರ್ ಜಿಲ್ಲಾಡಳಿತ, ನಗರ ನಿಗಮ, ಆದಾಯ ತೆರಿಗೆ ಇಲಾಖೆ ಎದುರು ಜಾಹೀರಾತು ಪೋಸ್ಟರ್ ಅನ್ನು ಲಗತ್ತಿಸಿದ್ದರು.
ಪ್ರಕರಣದ ತನಿಖೆ ಕೈಗೊಂಡಿರುವ ಜಿಲ್ಲಾಧಿಕಾರಿ ಸಂಜಯ್ ಕುಮಾರ್, ಬ್ಯಾಂಕುಗಳು ಸಾಲ ಮಂಜೂರು ಮಾಡಲು ನಿರಾಕರಿಸಲು ಕಾರಣವೇನು ಎಂಬುದನ್ನು ಪತ್ತೆ ಹಚ್ಚುತ್ತೇವೆ ಎಂದಿದ್ದಾರೆ.

Leave a Comment