ಸಾಲಬಾಧೆಯಿಂದ ರೈತರು ಪಾರು  ಹೊಸಕಾನೂನು ಸಿಎಂ ಭರವಸೆ

ಮಂಡ್ಯ, ಜೂ. ೧೮- ರೈತರನ್ನು ಖಾಸಗಿ ಲೇವಾದೇವಿಗಾರರ ಕಪಿಮುಷ್ಠಿಯಿಂದ ಪಾರು ಮಾಡಿ ಖಾಸಗಿ ಸಾಲ ಪಡೆದಿರುವ ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಕೇರಳ ಮಾದರಿಯಲ್ಲಿ ಕಾನೂನು ಜಾರಿ ಮಾಡುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ರೈತರ ಖಾಸಗಿ ಸಾಲಗಳಿಗ ಸಂಬಂಧಿಸಿದಂತೆ ಕೇರಳದಲ್ಲಿ ಕಾನೂನನ್ನು ಜಾರಿ ಮಾಡಲಾಗಿದೆ. ಈ ಕಾನೂನಿನ ಪ್ರಕಾರ ಖಾಸಗಿ ಸಾಲ ಪಡೆದಿರುವ ರೈತರು ಸಾಲ ತೀರಿಸಲು ಸಾಧ್ಯವಾಗದಿದ್ದರೆ ಸಾಲ ಆಯೋಗದ ಮುಂದೆ ಅರ್ಜಿ ಹಾಕಿಕೊಂಡು ಅಹವಾಲನ್ನು ಸಲ್ಲಿಸಲು ಅವಕಾಶವಿದೆ. ಇದರಿಂದ ರೈತರನ್ನು ಕಿರುಕುಳದಿಂದ ಪಾರು ಮಾಡಬಹುದು. ರಾಜ್ಯದಲ್ಲೂ ಈ ಕಾನೂನು ತರುವ ಬಗ್ಗೆ ಚಿಂತನೆ ನಡೆಸಿದ್ದೇನೆ. ಮುಂದಿನ ವಿಧಾನಸಭೆಯ ಅಧಿವೇಶನದಲ್ಲಿ ಈ ಕಾನೂನು ಮಂಡಿಸಿ ಚರ್ಚೆ ನಡೆಸುವುದಾಗಿ ಅವರು ಹೇಳಿದರು.
ಸಾಲಬಾಧೆ ತಾಳದೆ ಆತ್ಮಹತ್ಯೆ ಮಾಡಿಕೊಂಡಿರುವ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲ್ಲೂಕಿನ ಸಂತೆಬಾಚಳ್ಳಿ ಹೋಬಳಿಯ ಅಘಲೆಯ ಗ್ರಾಮದ ರೈತ ಸುರೇಶ್ ರವರ ಮನೆಗೆ ಭೇಟಿ ನೀಡಿ ಅವರ ಕುಟುಂಬದವರಿಗೆ ಸಾಂತ್ವಾನ ಹೇಳಿ 5 ಲಕ್ಷ ರೂ. ಪರಿಹಾರ ಧನದ ಚೆಕ್ ವಿತರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಆತ್ಮಹತ್ಯೆ ಪರಿಹಾರವಲ್ಲ. ಯಾವುದೇ ರೈತರು ಆತ್ಮಹತ್ಯೆಗೆ ಶರಣಾಗಬಾರದು. ಪದೇ ಪದೇ ನಾನು ರೈತರಿಗೆ ಈ ಮಾತು ಹೇಳುತ್ತಿದ್ದೇನೆ. ರೈತರು ಆತುರಪಡಬೇಡಿ ಎಂದು ಮನವಿ ಮಾಡಿದರು.
ಗ್ರಾಮ ವಾಸ್ತವ್ಯದಿಂದ ಅನುಕೂಲ
ಹಳ್ಳಿಯ ಜನರಿಗೆ ಧೈರ್ಯ ತುಂಬಲು ರೈತರ ಕಷ್ಟಗಳನ್ನು ಆಲಿಸಿ ರೈತರಿಗೆ ಶಕ್ತಿ ತುಂಬಲು ಹಾಗೂ ತಿಳುವಳಿಕೆ ಮೂಡಿಸಲು ಗ್ರಾಮ ವಾಸ್ತವ್ಯವನ್ನು ಮುಂದಿನ ವಾರದಿಂದ ಆರಂಭಿಸುತ್ತಿದ್ದೇನೆ ಎಂದು ಅವರು ಹೇಳಿದರು.
ಗ್ರಾಮ ವಾಸ್ತವ್ಯದಿಂದ ಅನುಕೂಲವಾಗಿಲ್ಲ ಎಂಬ ಟೀಕೆ ಸರಿಯಲ್ಲ. ಯಡಿಯೂರಪ್ಪನವರು ಗ್ರಾಮ ವಾಸ್ತವ್ಯದ ಬದಲು ಬರ ವೀಕ್ಷಣೆ ಮಾಡಬೇಕು ಎಂದು ಹೇಳಿದ್ದಾರೆ. ಅವರು ಬರ ವೀಕ್ಷಣೆಗೆ ಹೋದಾಗ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿಗಳ ಜತೆ ಚರ್ಚೆ ನಡೆಸುವ ಸಂದರ್ಭದಲ್ಲಿ ಸರ್ಕಾರದ ಬಗ್ಗೆ ಮೆಚ್ಚುಗೆ ಮಾತನಾಡುವ ಬಿಎಸ್‌ವೈ ಬಹಿರಂಗವಾಗಿ ಟೀಕಿಸುವ ನಾಟಕವಾಡ್ತಾರೆ. ಈ ರೀತಿ ನಾಟಕ ಏಕೆ ನಾವಂತೂ ನಾಟಕ ಕಲಿತಿಲ್ಲ. ಬಿಜೆಪಿಯವರು ನಾಟಕವಾಡುತ್ತಿದ್ದಾರೆ ಎಂದು ಯಡಿಯೂರಪ್ಪನವರ ಮೇಲೆ ಹರಿಹಾಯ್ದರು.
ಮಾಧ್ಯಮಗಳಲ್ಲೂ ಗ್ರಾಮ ವಾಸ್ತ್ಯವದ ಬಗ್ಗೆ ಟೀಕೆಗಳು ಬಂದಿವೆ. ಹಳ್ಳಿಗಳ ಪರಿಸ್ಥಿತಿ ಸರಿಯಿಲ್ಲ ಎಂಬ ವರದಿಯನ್ನು ಗಮನಿಸಿದ್ದೇನೆ. ಇದಕ್ಕೆ ನಾವಂತೂ ಕಾರಣವಲ್ಲ. ದೇವೇಗೌಡರು ಮತ್ತು ಅವರ ಕುಟುಂಬದವರು ಅಧಿಕಾರದಲ್ಲಿದದ್ದೇ ಕಡಿಮೆ. ಹಳ್ಳಿಗಳ ಇಂದಿನ ಪರಿಸ್ಥಿತಿಗೆ ಇಷ್ಟು ವರ್ಷ ದೇಶ ಆಳಿದವರೇ ಕಾರಣ ಎಂದು ಕುಮಾರಸ್ವಾಮಿ ದೂರಿದರು.
ರೈತರನ್ನು ಆತ್ಮಹತ್ಯೆಯಿಂದ ಪಾರು ಮಾಡಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ನೀರಿನ ಕೊರತೆ ನೀಗಿಸಲು ಕೆರೆ ತುಂಬುವ ಯೋಜನೆಗಳನ್ನು ಆರಂಭಿಸಿದ್ದೇವೆ. ಮಂಡ್ಯದ ಕೆಆರ್ ಪೇಟೆ ತಾಲ್ಲೂಕಿನಲ್ಲಿ 213 ಕೋಟಿ ರೂ. ವೆಚ್ಚದಲ್ಲಿ 40-50 ಕೆರೆ ತುಂಬುವ ಯೋಜನೆ ಸದ್ಯದಲ್ಲೇ ಆರಂಭವಾಗಲಿದೆ. ರೈತರು ಆತುರಕ್ಕೆ ಒಳಪಟ್ಟು ಆತ್ಮಹತ್ಯೆಗೆ ಒಳಗಾಗಬೇಡಿ. ರಾಜ್ಯದ ಎಲ್ಲೆಡೇ ಕೆರೆ ತುಂಬುವ ಯೋಜನೆಯನ್ನು ಜಾರಿಗೊಳಿಸುತ್ತಿದ್ದೇವೆ ಎಂದರು.
ದೇಶದಲ್ಲಿ ಕರ್ನಾಟಕದ ಪರಿಸ್ಥಿತಿ ಬೇರೆ ರಾಜ್ಯಗಳಿಂದ ಭಿನ್ನ. ಜಲಾಶಗಳಿದ್ದರೂ ನಮ್ಮ ನೀರು ಹಂಚಿಕೆಗೆ ಅಧಿಕಾರವಿಲ್ಲ. ಕಾವೇರಿ ಇರಬಹುದು ಯಾವುದೇ ಇರಬಹುದು ಪ್ರಾಧಿಕಾರ ರಚಿಸಲಾಗಿದೆ. ನಮ್ಮ ನೀರನ್ನು ನಾವು ಬಳಸದಂತಹ ಪರಿಸ್ಥಿತಿಗಳು ಇದೆ ಎಂದು ವಿಷಾದಿಸಿದರು.
ಮಹಾರಾಷ್ಟ್ರದ ಒಂದು ಹಳ್ಳಿಯಲ್ಲಿ ರೈತರೇ ಒಂದಾಗಿ ಮಳೆ ನೀರನ್ನು ಸಂಗ್ರಹಿಸಿ ವರ್ಷಕ್ಕೆ 60-70 ಕೋಟಿ ರೂ. ದುಡಿಯುತ್ತಿರುವ ಸುದ್ದಿಯನ್ನು ಮಾಧ್ಯಮಗಳಲ್ಲಿ ಗಮಿಸಿ ನಮ್ಮ ಅಧಿಕಾರಿಗಳನ್ನು ಅಲ್ಲಿಗೆ ಕಳುಹಿಸಿ ಅದನ್ನು ವಿಡಿಯೋ ಮಾಡಿದ್ದೇನೆ. ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಮಹಾರಾಷ್ಟ್ರ ಹಳ್ಳಿಗರ ಸಾಧನೆಯ ವಿಡಿಯೋವನ್ನು ನಮ್ಮ ರೈತಾಪಿ ಜನರಿಗೆ ತೋರಿಸಿ ತಿಳುವಳಿಕೆ ಮೂಡಿಸುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

Leave a Comment