ಸಾರ್ವಜನಿಕ ಸ್ಥಳ ಅತಿಕ್ರಮಣ : ಧಾರ್ಮಿಕ ಕಟ್ಟಡ ತೆರವಿಗೆ ಸಮಿತಿ ರಚನೆ

* ಡಿಸಿ ಅಧ್ಯಕ್ಷತೆಯಲ್ಲಿ 12 ಅಧಿಕಾರಿಗಳ ಸಮಿತಿ : ಪ್ರತಿಯೊಂದು ಪ್ರಕರಣ ಪರಿಶೀಲನೆಗೆ ಆದೇಶ
ರಾಯಚೂರು.ಜ.28- ಸುಪ್ರೀಂ ಕೋರ್ಟ್ ಆದೇಶದಂತೆ ಸಾರ್ವಜನಿಕ ಉದ್ಯಾನವನ, ರಸ್ತೆ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಅಕ್ರಮವಾಗಿ ನಿರ್ಮಿಸಿದ ದೇವಸ್ಥಾನ ಮತ್ತಿತರ ಕಟ್ಟಡ ತೆರವುಗೊಳಿಸಲು ಜಿಲ್ಲಾಡಳಿತ 12 ಸದಸ್ಯರ ಸಮಿತಿ ರಚಿಸಿ, ಪ್ರತ್ಯೇಕ ಒಂದೊಂದು ಪ್ರಕರಣ ಪರಿಶೀಲಿಸಿ ತೆರವು ಕಾರ್ಯಾಚರಣೆ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಸಾರ್ವಜನಿಕ ಸ್ಥಳಗಳ ಅಕ್ರಮ ದೇವಸ್ಥಾನ ಮತ್ತಿತರ ಕಟ್ಟಡಗಳ ತೆರವಿಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪೊಲೀಸ್ ಅಧಿಕಾರಿ, ಲೋಕೋಪಯೋಗಿ ಇಲಾಖೆ ಮತ್ತು ಜಿ.ಪಂ.ಇಂಜಿನಿಯರ್ ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರರು, ಏಳು ತಾಲೂಕಿನ ತಹಶೀಲ್ದಾರರು ಮತ್ತು ತಾಲೂಕು ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿಗಳು, ನಗರಾಭಿವೃದ್ಧಿ ಇಲಾಖೆ ಆಯುಕ್ತರು ಮತ್ತು ನಗರಸಭೆ ಪೌರಾಯುಕ್ತರು, ಪುರಸಭೆ ಮುಖ್ಯಾಧಿಕಾರಿಗಳು ಹಾಗೂ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳಲ್ಲದೇ, ಅಪರ ಜಿಲ್ಲಾಧಿಕಾರಿಗಳು ಈ ಸಮಿತಿಯ ಸದಸ್ಯರಾಗಿರುತ್ತಾರೆ.
ಜಿಲ್ಲೆಯಲ್ಲಿ ಧಾರ್ಮಿಕ ಕಟ್ಟಡ ಹಾಗೂ ಇನ್ನಿತರ ಕಟ್ಟಡಗಳನ್ನು ಸಾರ್ವಜನಿಕ ಉದ್ದೇಶಕ್ಕೆ ಬಿಡಲಾದ ಸ್ಥಳಗಳಲ್ಲಿ ನಿರ್ಮಿಸಲಾಗಿದೆ. ಉದ್ಯಾನವನ, ಕ್ರೀಡಾಂಗಣ ಹಾಗೂ ನಾಗರೀಕ ಮೂಲಭೂತ ಸೌಕರ್ಯಗಳಿಗೆ ಮೀಸಲಿಟ್ಟ ಸ್ಥಳಗಳನ್ನು ಅತಿಕ್ರಮಿಸಲಾಗಿದೆ. ಜಿಲ್ಲಾಧಿಕಾರಿಗಳ ಮೂಗಿನ ಅಡಿಯಲ್ಲಿ ಎನ್ನುವಂತೆ ಸಾರ್ವಜನಿಕರ ಉದ್ಯಾನವನದಲ್ಲಿ ರಾಜಾರೋಷವಾಗಿ ದೇವಸ್ಥಾನ ನಿರ್ಮಿಸಲಾಗಿದೆ.
ಕೋಟ್ಯಾಂತರ ಬೆಲೆ ಬಾಳುವ ನಗರಸಭೆ ಈ ಆಸ್ತಿಯನ್ನು ಅತಿಕ್ರಮಿಸಿ ದೇವಸ್ಥಾನ ನಿರ್ಮಿಸಲಾಗಿದೆ. ಐಡಿಎಸ್ಎಂಟಿ ಲೇಔಟ್‌ನಲ್ಲಿ 2 ಎಕರೆ ಕ್ರೀಡಾಂಗಣ ಸ್ಥಳದಲ್ಲಿ ಶಾಲೆ ನಿರ್ಮಿಸಲಾಗಿದೆ. 35 ವಾರ್ಡ್‌ಗಳಲ್ಲಿ ಬಹುತೇಕ ಧಾರ್ಮಿಕ ಕಟ್ಟಡಗಳು ಸಾರ್ವಜನಿಕ ರಸ್ತೆ ಮತ್ತು ಉದ್ಯಾನವನ ಅತಿಕ್ರಮಿಸಿ ನೂರಾರು ಧಾರ್ಮಿಕ ಕಟ್ಟಡ ತಲೆಯೆತ್ತಿವೆ. ಜಿಲ್ಲೆಯಾದ್ಯಂತ ಇದೇ ಪರಿಸ್ಥಿತಿ ಕಾಣಬಹುದಾಗಿದೆ.
ಸುಪ್ರೀಂ ಕೋರ್ಟ್ 2019 ರಲ್ಲಿ ಸಾರ್ವಜನಿಕ ಸ್ಥಳ ಅತಿಕ್ರಮಿಸಿ, ಧಾರ್ಮಿಕ ಕಟ್ಟಡ ನಿರ್ಮಿಸಿರುವುದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಆದೇಶಿಸಿತ್ತು. 2010 ಫೆಬ್ರವರಿ ತಿಂಗಳಲ್ಲಿಯೇ ಈ ಕುರಿತು ಮಾರ್ಗಸೂಚಿ ನೀಡಲಾಗಿತ್ತು. ಆದರೆ, ರಾಜ್ಯ ಸರ್ಕಾರ ಇದನ್ನು ಅನುಷ್ಠಾನಗೊಳಿಸದಿರುವುದಕ್ಕೆ ನ್ಯಾಯಾಲಯ ತೀವ್ರ ಅಸಮಾಧಾನಗೊಂಡು ಯಾವುದೇ ವಿಳಂಬ ಮಾಡದಂತೆ ಆದೇಶವನ್ನು ಅನುಷ್ಠಾನಗೊಳಿಸಲು ಸೂಚಿಸಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಜ.3 ರಂದು ಈ ಕುರಿತು ಆದೇಶಿಸಿ, ತೆರವಿಗೆ ಪ್ರತ್ಯೇಕ ಸಮಿತಿಯನ್ನೇ ರಚಿಸಿ, ಪ್ರತಿಯೊಂದು ಪ್ರಕರಣವನ್ನು ಗಮನಿಸಿ, ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿದೆ. ಅತಿಕ್ರಮಿತ ದೇವಾಲಯ, ಮಸ್ಜೀದಿ, ಚರ್ಚ್, ಗುರುದ್ವಾರ ಮತ್ತು ಧಾರ್ಮಿಕ ಕಟ್ಟಡಗಳ ತೆರವಿಗೆ ಆದೇಶಿಸಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಎಷ್ಟು ಧಾರ್ಮಿಕ ಕಟ್ಟಡಗಳು ಅಕ್ರಮವಾಗಿ ತಲೆಯೆತ್ತಿವೆ ಎನ್ನುವ ಸಂಪೂರ್ಣ ಮಾಹಿತಿ ಸಂಬಂಧಪಟ್ಟ ಇಲಾಖೆಗಳಲ್ಲಿವೆ.
ಸರ್ವೋಚ್ಛ ನ್ಯಾಯಾಲಯದ ದಶಕದ ತೀರ್ಪು ಅನುಷ್ಠಾನಕ್ಕೆ ಈಗ ಜಿಲ್ಲಾಡಳಿತ ಸಜ್ಜುಗೊಳ್ಳಬೇಕಾಗಿದೆ. ರಾಜ್ಯದಲ್ಲಿ ಅಕ್ರಮ ಧಾರ್ಮಿಕ ಕಟ್ಟಡ ತೆರವುಗೊಳಿಸಿ, ನ್ಯಾಯಾಲಯಕ್ಕೆ ವರದಿ ನೀಡುವಂತೆ ಸೂಚಿಸಿದ್ದರಿಂದ ಜಿಲ್ಲಾಡಳಿತ ಈ ಕಾರ್ಯಾಚರಣೆಗೆ ಮುಂದಾಗಬೇಕಾಗಿದೆ. ಜಿಲ್ಲಾ ಕೇಂದ್ರವಾದ ನಗರದಲ್ಲಿ ಐತಿಹಾಸಿಕ ಕೋಟೆ ಪ್ರದೇಶ ಮತ್ತು ಅನೇಕ ಸಾರ್ವಜನಿಕ ಉದ್ಯಾನವನ ಹಾಗೂ ಇನ್ನಿತರ ರಸ್ತೆ ಅತಿಕ್ರಮಣ ಸಾಮಾನ್ಯವಾಗಿದ್ದು, ಈಗ ಎಲ್ಲಾ ಅಕ್ರಮ ಕಟ್ಟಡಗಳಿಗೆ ಸಂಚುಕಾರ ಬಂದೋದಗಿದೆ.
ಸುಪ್ರೀಂ ಕೋರ್ಟ್ ಈ ಆದೇಶ ಕಟ್ಟುನಿಟ್ಟಿನ ಜಾರಿಯ ಸೂಚನೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಕಟ್ಟಡ ನಿರ್ಮಿಸಿದವರಿಗೆ ಈಗ ಆತಂಕ ತೀವ್ರಗೊಂಡಿದೆ. ಜಿಲ್ಲಾಡಳಿತ ಸುಪ್ರೀಂ ಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದೇ ಕೇವಲ ಕಡತಕ್ಕೆ ಮಾತ್ರ ಸೀಮಿತಗೊಳಿಸಿ ಪರಿಶೀಲನೆಯಲ್ಲಿ ಕಾಲ ಕಳೆಯುವುದೇ ಎಂದು ಕಾದು ನೋಡಬೇಕಾಗಿದೆ.

Leave a Comment