ಸಾರ್ವಜನಿಕರ ಸಹಭಾಗಿತ್ವದಿಂದ ಬಾಲಕಾರ್ಮಿಕ ಪಿಡುಗು ನಿವಾರಣೆ ಸಾಧ್ಯ

ದಾವಣಗೆರೆ, ಜೂ.12; ಕಾರ್ಮಿಕರು ದೇಶದ ಬೆನ್ನೆಲುಬಾದರೆ, ಬಾಲಕಾರ್ಮಿಕತೆ ದೇಶದ ಪಿಡುಗು. ಈ ಪಿಡುಗನ್ನು ಪ್ರಬುದ್ದ ಸಾರ್ವಜನಿಕರ ಸಹಭಾಗಿತ್ವದಿಂದ ಮಾತ್ರ ತೊಡೆದು ಹಾಕಲು ಸಾಧ್ಯವಾಗಿದ್ದು, ಈ ನಿಟ್ಟಿನಲ್ಲಿ ನಾವೆಲ್ಲಾ ಪ್ರಬುದ್ಧರಾಗಿ ಎಲ್ಲ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ದೇಶದ ಅಭಿವೃದ್ಧಿಗೆ ಸಹಕರಿಸಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರಭು ಎನ್.ಬಡಿಗೇರ್ ಕರೆ ನೀಡಿದರು.
ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಸ್ಥೆ, ಜಿಲ್ಲಾ ವಕೀಲರ ಸಂಘ ಹಾಗೂ ಕಟ್ಟಡ ಕಾರ್ಮಿಕರ ಸಂಘ ದಾವಣಗೆರೆ ಜಿಲ್ಲೆ, ದಾವಣಗೆರೆ ಇವರುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಯಾವುದೇ ಕೆಲಸಕ್ಕೆ ಹಾಗೂ 14 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಅಪಾಯಕಾರಿ ಉದ್ಯೋಗದಲ್ಲಿ ನೇಮಕ ಮಾಡುವುದು ಕಾನೂನು ಬಾಹಿರ. ಆದರೆ ಇಂದು ಆರ್ಥಿಕ, ಸಾಮಾಜಿಕ ಸೇರಿದಂತೆ ಅನೇಕ ಕಾರಣಗಳಿಂದ ಮಕ್ಕಳು ಕಾರ್ಖಾನೆಗಳಲ್ಲಿ, ಮಂಡಕ್ಕಿ ಭಟ್ಟಿ, ಇಟ್ಟಿಗೆ ಭಟ್ಟಿ, ಹೋಟೆಲ್, ಗ್ಯಾರೆಜ್ ಮುಂತಾದೆಡೆ ದುಡಿಯುತ್ತಿರುವುದನ್ನು ಕಾಣುತ್ತಿದ್ದೇವೆ. ಹೀಗೆ ಬಾಲಕಾರ್ಮಿಕತೆ ಕಂಡು ಬಂದಾಗ ಅವರನ್ನು ಬಾಲಕಾರ್ಮಿಕತೆಯಿಂದ ಮುಕ್ತಗೊಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಕೇವಲ ಅಧಿಕಾರಿಗಳಿಂದ ಮಾತ್ರ ಈ ಪಿಡುಗನ್ನು ತೊಡೆಯಲು ಸಾಧ್ಯವಿಲ್ಲ. ಬದಲಾಗಿ ಎಲ್ಲ ಸಾರ್ವಜನಿಕರು ಎಚ್ಚೆತ್ತುಕೊಂಡು ಈ ಕೆಲಸಕ್ಕೆ ಕೈಜೋಡಿಸಿದಾಗ ಮಾತ್ರ ಇದರ ನಿರ್ಮೂಲನೆ ಸಾಧ್ಯವಾಗುತ್ತದೆ. ಹಾಗೂ ಬಾಲಕಾರ್ಮಿಕತೆ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರವೂ ದೊಡ್ಡದಿದೆ ಎಂದರು. ನಾವೆಲ್ಲಾ ಪ್ರಬುಧ್ದತೆಯಿಂದ ವರ್ತಿಸಬೇಕು. ಎಲ್ಲ ಮಕ್ಕಳಿಗೆ ಶಿಕ್ಷಣ ನೀಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಹೇಳಿದರು.
ರಾಜ್ಯ ಕಾನೂನು ಸೇವೆಗಳ ಸದಸ್ಯರಾದ ವಕೀಲ ಎಲ್.ಹೆಚ್.ಅರುಣ್ ಕುಮಾರ್ ಬಾಲ ಕಾರ್ಮಿಕ ಪದ್ದತಿ ವಿರುದ್ಧದ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ, ಇಂದಿಗೂ ನಾವು ಭಿಕ್ಷೆ ಬೇಡುವ ಮಕ್ಕಳನ್ನು ಕಾಣುತ್ತಿರುವುದು ಶೋಚನೀಯ. ಉತ್ಪಾದನಾ ವೆಚ್ಚ ಕಡಿತಗೊಳಿಸಲು ಮಕ್ಕಳನ್ನು ಉದ್ಯಮದಲ್ಲಿ ದುಡಿಯಲು ಬಳಸಿಕೊಳ್ಳಲಾಗುತ್ತಿದ್ದು, ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸಲು ನಾವೆಲ್ಲಾ ಶ್ರಮಿಸಬೇಕಿದೆ. 2019 ರ ‘ಮಕ್ಕಳ ದುಡಿಮೆ ಕನಸುಗಳ ಮೇಲೆ… ಆದರೆ ಕೆಲಸದಲ್ಲಿ ಅಲ್ಲ’ ಎಂಬುದನ್ನು ಸಾಕಾರಗೊಳಿಸುವಲ್ಲಿ ನಮ್ಮೆಲ್ಲರ ಪಾತ್ರವಿದೆ ಎಂದರು. ಎಆರ್‍ಜಿ ಕಾಲೇಜಿನ ಪ್ರೊ.ಮಲ್ಲಿಕಾರ್ಜುನ ಹಲಸಂಗಿ,
ಸಹಾಯಕ ಕಾರ್ಮಿಕ ಆಯುಕ್ತರಾದ ಮೊಹಮ್ಮದ್ ಜಹೀರ್, ಎನ್.ಟಿ.ಮಂಜುನಾಥ್, ಭಾರತಿ ಬಣಕಾರ್, ಡಿಹೆಚ್‍ಓ ಡಾ.ತ್ರಿಪುಲಾಂಭ ಇತರರಿದ್ದರು.

Leave a Comment