ಸಾರ್ವಜನಿಕರ ಕುಂದು – ಕೊರತೆ ಸಭೆ

ಅಸ್ವಚ್ಛತೆ: ಅಧಿಕಾರಿಗಳಿಗೆ ಚಾಟಿ ಬೀಸಿದ ಡಿಸಿ
ರಾಯಚೂರು.ಜ.11- ನಗರಸಭೆ ಕಛೇರಿಯನ್ನು ಸ್ವಚ್ಛತೆ ಕಾಪಾಡಿಕೊಳ್ಳದ ಸಿಬ್ಬಂದಿಯು ನಗರದಲ್ಲಿ ಸ್ವಚ್ಛತೆಗೆ ಗಮನ ಹರಿಸಲು ಹೇಗೆ ಸಾಧ್ಯವೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಬಿ.ಶರತ್ ಅವರು ಚಾಟಿ ಬೀಸಿದರು.
ಅವರಿಂದು ನಗರಸಭೆ ನೂತನ ಕಾರ್ಯಾಲಯದಲ್ಲಿ ಪ್ರಪ್ರಥಮ ಬಾರಿಗೆ ನಡೆದ ಸಾರ್ವಜನಿಕರ ಕುಂದು-ಕೊರತೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ನಗರಸಭೆ ಕಛೇರಿ ವೀಕ್ಷಿಸಿದಾಗ ಅಸ್ವಚ್ಛತೆ ಕಂಡು ಬಂದಿದೆ. ನಗರದ ವಿವಿಧ ಬಡಾವಣೆಗಳಲ್ಲಿ ಪೌರ ಕಾರ್ಮಿಕರು ಪ್ರತಿ ದಿನ ಬೆಳಗಿನ ಜಾವ ನಗರದಲ್ಲಿ ಸೌಂದರ್ಯೀಕರಣಕ್ಕೆ ಶ್ರಮಿಸುತ್ತಿರುವ ಚಿತ್ರಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಿಎಂಸಿ ಗ್ರೂಪ್‌ ಇರುವ ವ್ಯಾಟ್ಸಪ್‌ಗೆ ಹಾಕುವಂತೆ ಅಧಿಕಾರಿಗಳಿಗೆ ಕಟ್ಟು-ನಿಟ್ಟಿನ ಆದೇಶ ನೀಡಿದರು.
ನಗರದ ಸ್ವಚ್ಛತೆ ವಿಷಯದಲ್ಲಿ ಅಧಿಕಾರಿಗಳು ಹರಿಕಥೆ ಹೇಳದೇ ತಮ್ ಜವಾಬ್ದಾರಿ ಅರಿತುಕೊಂಡು ಕಾರ್ಯ ನಿರ್ವಹಿಸಬೇಕು, ಸಾರ್ವಜನಿಕರು ಸಹ ಸ್ವಚ್ಛತೆಗೆ ನಗರಸಭೆಯೊಂದಿಗೆ ಸಹಕರಿಸಬೇಕು, ವಿನಾಕಾರಣ ಅಧಿಕಾರಿಗಳ ಮೇಲೆ ಬೊಟ್ಟು ಮಾಡದೇ ತಮ್ಮ ಮನೆ ಮುಂಭಾಗದಲ್ಲಿರುವ ಕಸ-ಕಡ್ಡಿಯನ್ನು ನಗರಸಭೆಯ ತಳ್ಳುಬಂಡಿಗೆ ಹಾಕುವಂತೆ ಸೂಚಿಸಿದರು. ಎಲ್ಲವೂ ಸರಕಾರವೇ ಮಾಡಲು ಸಾಧ್ಯವಿಲ್ಲ. ಕೆಲವೊಂದು ಸಮಸ್ಯೆಗಳನ್ನು ಸಾರ್ವಜನಿಕರೇ ಸ್ವತಃ ಮುಂದಾಗಿ ನಿಭಾಯಿಸಿಕೊಳ್ಳಬೇಕೆಂದು ತಿಳಿಸಿದರು.
ನಗರದ ಕೆಲ ಬಡಾವಣೆಗಳಲ್ಲಿ ಶೌಚಾಲಯ ನಿರ್ಮಿಸಿದರೂ, ಮಹಿಳೆಯರು ಬಳಸದೇ ಬಹಿರ್ದೆಸೆಗೆ ತೆರಳುತ್ತಿದ್ದಾರೆ. ಈ ನಿಟ್ಟಿನಲ್ಲಿ ನಗರಸಭೆ ಸದಸ್ಯರಿಗೆ ಬಿ.ಎಸ್‌ಡಬ್ಲ್ಯೂ ಮೂಲಕ ನೋಟೀಸ್ ನೀಡಿ ಜನರಲ್ಲಿ ಶೌಚಾಲಯ ಬಳಕೆ ಬಗ್ಗೆ ಜಾಗೃತಿ ಮೂಡಿಸಿದಾಗ ಮಾತ್ರ ನಗರವು ಬಯಲು ಬಹಿರ್ದೆಸೆ ಮುಕ್ತವಾಗಲಿದೆಂದು ತಿಳಿಸಿದರು. ನಗರಸಭೆ ಸದಸ್ಯರು ಆಯಾ ವಾರ್ಡ್‌ಗಳಲ್ಲಿ ನಿರ್ಮಿಸಲ್ಪಟ್ಟಿರುವ ಶೌಚಾಲಯ ಬಳಸುವಂತೆ ಜನರನ್ನು ಪ್ರೇರೇಪಿಸುವ ಕೆಲಸ ಮಾಡಬೇಕೆಂದು ಸೂಚಿಸಿದರು.
ನಗರವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಅಭಿವೃದ್ಧಿಯಿಂದ ವಂಚಿತಗೊಂಡಿದೆ. ನಗರದಲ್ಲಿ ಪ್ರಮುಖವಾಗಿ ಕುಡಿವ ನೀರು, ರಸ್ತೆ ದುರಸ್ತಿ, ಒಳಚರಂಡಿ, ಕಾಲುವೆ ಹಾಗೂ ಶೌಚಾಲಯ ಸೇರಿದಂತೆ ಇನ್ನಿತರ ಅಗತ್ಯ ಮೂಲಭೂತ ಸೌಕರ್ಯಗಳ ಕೊರತೆಯಿಂದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಸಾರ್ವಜನಿಕರು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ, ಶೀಘ್ರ ಪರಿಹರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ರಮೇಶ ನಾಯಕ, ಜಿಲ್ಲಾ ಯೋಜನಾಧಿಕಾರಿ ಈರಣ್ಣ ಬಿರಾದಾರ್ ಸೇರಿದಂತೆ ನಗರಸಭೆಗೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Comment