ಸಾರಿಗೆ ಸೆಸ್‌ಗೆ ಬಿಬಿಎಂಪಿ ಸದಸ್ಯರ ತೀವ್ರ ವಿರೋಧ

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಜು. ೧೨- ಹದಗೆಟ್ಟ ರಸ್ತೆಗಳಿಂದ ಬಿಎಂಟಿಸಿ ಬಸ್‌ಗಳು ಹಾಳಾಗುತ್ತಿವೆ ಎಂಬ ನೆಪವೊಡ್ಡಿ ಹೊಸದಾಗಿ ಬಿಬಿಎಂಪಿ ಮೂಲಕ ಸಾರಿಗೆ ಸೆಸ್ ಹಾಕಲು ಮುಂದಾಗಿರುವ ಸಾರಿಗೆ ಇಲಾಖೆ ಸಚಿವ ಡಿ.ಸಿ. ತಮ್ಮಣ್ಣ ಅವರ ಪ್ರಸ್ತಾಪಕ್ಕೆ ಬಿಬಿಎಂಪಿ ಸದಸ್ಯರು ಗರಂ ಆಗಿದ್ದಾರೆ.
ಬೆಂಗಳೂರು ನಗರದ ನಾಗರಿಕರು ಈಗಾಗಲೇ ಹಲವಾರು ಸೆಸ್‌ಗಳನ್ನು ಕಟ್ಟುತ್ತಿದ್ದಾರೆ. ಈ ಮಧ್ಯೆ ಹೊಸದಾಗಿ ಹಾಗೂ ಅನಗತ್ಯವಾಗಿ ಸಾರಿಗೆ ಸೆಸ್‌ನ್ನು ಹಾಕುವ ಪ್ರಸ್ತಾವನೆ ವಿರುದ್ಧ ಹರಿಹಾಯ್ದಿದ್ದಾರೆ.
ಬಿಎಂಟಿಸಿ ಬಸ್‌ಗಳು ಈಗಾಗಲೇ ಬಸ್‌ನ ತುಂಬೆಲ್ಲ ಜಾಹೀರಾತು ಪ್ರಕಟಿಸಿ, ಲಾಭ ಮಾಡುತ್ತಿವೆ. ಹಾಗಾಗಿ. ಬಿಎಂಟಿಸಿ ಸಂಸ್ಥೆಯೇ ಬಿಬಿಎಂಪಿಗೆ ತೆರಿಗೆ ಕಟ್ಟಲಿ ಎಂದು ಆಗ್ರಹಪಡಿಸಿದ್ದಾರೆ.
ಬಿಎಂಟಿಸಿ ಬಸ್‌ಗಳಿಂದಲೇ ನಗರದ ರಸ್ತೆಗಳು ಹಾಳಾಗುತ್ತಿವೆ. ಇದಕ್ಕೆ ಬಿಬಿಎಂಪಿಯನ್ನು ಹೊಣೆಗಾರಿಕೆ ಮಾಡುವುದು ಸರಿಯಲ್ಲ. ಇಂತಹ ಪ್ರಸ್ತಾವ ಸಾರಿಗೆ ಇಲಾಖೆಯಿಂದ ಬಂದಲ್ಲಿ ಅದನ್ನು ತಿರಸ್ಕರಿಸಬೇಕೆಂದು ಮೇಯರ್ ಅವರನ್ನು ಒತ್ತಾಯಿಸಿದ್ದಾರೆ.
ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಮೇಯರ್ ಸಂಪತ್ ರಾಜ್ ಅವರು ಸಾರಿಗೆ ಇಲಾಖೆಯಿಂದ ಇಂತಹ ಯಾವುದೇ ಪ್ರಸ್ತಾವ ಬಿಬಿಎಂಪಿಗೆ ಬಂದಿಲ್ಲ ಎಂದು ಹೇಳಿದ್ದಾರೆ.
ಬಿಎಂಟಿಸಿ ಬಸ್‌ಗಳ ಓಡಾಟದಿಂದ ರಸ್ತೆಗಳು ಹಾಳಾಗುತ್ತಿವೆ ಎನ್ನುವ ವಿಚಾರ ಈಗಾಗಲೇ ಪಾಲಿಕೆ ಸಭೆಗಳಲ್ಲಿ ಚರ್ಚೆಯಾಗಿವೆ. ಜನರ ಮೇಲೆ ಇಂತಹ ಸೆಸ್ ವಿಧಿಸುವುದು ಸರಿಯಲ್ಲ. ಅಷ್ಟು ಸುಲಭದ ಕೆಲವೂ ಅಲ್ಲ, ಸರ್ಕಾರ ಮತ್ತು ಕೌನ್ಸಿಲ್‌ನಲ್ಲಿ ಚರ್ಚೆಯಾಗಬೇಕು. ಒಂದು ವೇಳೆ ಪ್ರಸ್ತಾವ ಬಂದಲ್ಲಿ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.
ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿಯವರು ಸಾರ್ವಜನಿಕರು ಈಗಾಗಲೇ ಆಸ್ತಿ ತೆರಿಗೆ ಪಾವತಿಸುತ್ತಿದ್ದಾರೆ. ಅದೇ ತೆರಿಗೆಯಲ್ಲಿ ಸರ್ಕಾರ ರಸ್ತೆ ಮತ್ತು ಸಾರ್ವಜನಿಕ ಮೂಲಭೂತ ಸೌಕರ್ಯಗಳ ವ್ಯವಸ್ಥೆಯನ್ನು ನಿರ್ವಹಿಸಬೇಕು ಎಂದು ಹೇಳಿದ್ದಾರೆ.
ರಸ್ತೆಗಳಲ್ಲಿ ಓಡಾಡುವುದಕ್ಕೂ ಸೆಸ್ ಕಟ್ಟಿ ಎಂದರೆ ಹೇಗೆ? ಎಂದು ಪ್ರಶ್ನಿಸಿರುವ ಅವರು, ರಸ್ತೆ ವಿಚಾರದಲ್ಲಿ ಪ್ರತಿಯೊಂದು ವಾಹನ ಖರೀದಿಸಿದಾಗ ಸಾರಿಗೆ ಇಲಾಖೆ ಸರ್ಕಾರಕ್ಕೆ ತೆರಿಗೆ ಪಾವತಿಸುತ್ತಿದೆ ಎಂದು ಹೇಳಿದರು.

Leave a Comment