ಸಾರಿಗೆ ನೌಕರರ ಬೆಂಗಳೂರು ಚಲೋ 27 ರಂದು

 

ಕಲಬುರಗಿ ಜೂ 13: ಸಾರಿಗೆ ನೌಕರರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಿರಂತರ ಚಳುವಳಿ ಆರಂಭಿಸಿದ್ದು,ಜೂನ್ 27 ರಂದು ಬೆಂಗಳೂರು ಚಲೋ ಹಮ್ಮಿಕೊಂಡಿದ್ದಾರೆ. ರಾಜ್ಯದಿಂದ ಸುಮಾರು 10ರಿಂದ 15 ಸಾವಿರ , ಕಲಬುರಗಿಯಿಂದ ಸುಮಾರು 500 ಜನನೌಕರರು ಬೆಂಗಳೂರು ಚಲೋದಲ್ಲಿ  ಭಾಗವಹಿಸುವರು ಎಂದು ಕೆಎಸ್‍ಆರ್‍ಟಿಸಿ ಸ್ಟಾಫ್ ಅಂಡ್ ವರ್ಕರ್ಸ ಫೆಡರೇಷನ್  ಅಧ್ಯಕ್ಷ ಎಚ್.ವಿ ಅನಂತ ಸುಬ್ಬರಾವ್ ಅವರು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಾರಿಗೆಸಂಸ್ಥೆಯು 4 ನಿಗಮಗಳಾಗಿ ವಿಭಜನೆಯಾದ ನಂತರ ನಷ್ಟದ ಮತ್ತು ಭ್ರಷ್ಟಾಚಾರದ ಪ್ರಮಾಣ ಜಾಸ್ತಿಯಾಗುತ್ತಿದೆ.ಆದ್ದರಿಂದ ಎಲ್ಲ ನಿಗಮಗಳನ್ನು ಒಂದುಗೂಡಿಸಬೇಕು.ಡಿಸೇಲ್ ಮೇಲಿನ ಸುಂಕ,ಹೆದ್ದಾರಿ ಟೋಲ್ ರದ್ದು ಮಾಡಬೇಕು.ಮೋಟಾರ್ ವೆಹಿಕಲ್ ತೆರಿಗೆ ರಿಯಾಯತಿ ಕೊಡಬೇಕು. ವಿದ್ಯಾರ್ಥಿ ಮತ್ತು ಹಿರಿಯ ನಾಗರಿಕ ರಿಯಾಯತಿ ಪಾಸ್ ಸೇರಿದಂತೆ ಇತರ ಸಾಮಾಜಿಕ ಹೊಣೆಗಾರಿಕೆ ಬಾಬ್ತು ಮತ್ತು ಸಾರಿಗೆ ನೌಕರರ ವೇತನವನ್ನು ಸರ್ಕಾರವೇ ಭರಿಸಬೇಕು.

ನಾಲ್ಕು  ನಿಗಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 1.20 ಲಕ್ಷಕ್ಕೂ ಹೆಚ್ಚು ಕಾರ್ಮಿಕರಿಗೆ ಸಮರ್ಪಕ ವೈದ್ಯಕೀಯ ಸೌಲಭ್ಯ       ಕಲ್ಪಿಸಬೇಕು.ಕೈಗಾರಿಕಾ ಬಾಂಧವ್ಯ ಸರಿಪಡಿಸುವ ದಿಕ್ಕಿನಲ್ಲಿ ಆಡಳಿತ ವರ್ಗ ಸಕಾರಾತ್ಮಕ ಕ್ರಮಕ್ಕೆ ಮುಂದಾಗಬೇಕು. ರಜೆ ನೀಡುವ ವಿಚಾರ ಸೇರಿದಂತೆ ಇತರ ವಿಷಯದಲ್ಲಿ ಮೇಲಾಧಿಕಾರಿಗಳ ಕಿರುಕುಳ ತಪ್ಪಬೇಕು.ಆತ್ಮಹತ್ಯೆಗೆ ಬಲಿಯಾದ ನೌಕರರ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಬೇಕು. ಆತ್ಮಹತ್ಯೆಗೆ ಪ್ರಯತ್ನಿಸಿ ಬದುಕುಳಿದ ನೌಕರನ ವಿರುದ್ಧ ಯಾವುದೇ ಶಿಸ್ತು ಕ್ರಮ ಕೈಗೊಳ್ಳಬಾರದು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಎಚ್.ಎಸ್ ಪದಕಿ,  ಸಿದ್ದಪ್ಪ ಪಾಲ್ಕಿ, ಸಿದ್ದಣ್ಣ ಕಣ್ಣೂರ ಸೇರಿದಂತೆ ಹಲವರಿದ್ದರು..

Leave a Comment