ಸಾರಿಗೆ ಕಾರ್ಯಚಾರಣೆ: ಪ್ರಯಾಣಿಕರು ನಿಯಮ ಪಾಲನೆ ಕಡ್ಡಾಯ

ತುಮಕೂರು, ಮೇ ೨೩- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತುಮಕೂರು ವಿಭಾಗದ ವತಿಯಿಂದ ಸಾರಿಗೆ ಸೇವೆ ಕಲ್ಪಿಸಿದ್ದು, ಪ್ರಯಾಣಿಕರು ಕಡ್ಡಾಯವಾಗಿ ನಿಯಮ ಪಾಲಿಸಬೇಕು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರಕುಮಾರ್ ತಿಳಿಸಿದ್ದಾರೆ.
ತುಮಕೂರು ವಿಭಾಗದ ವ್ಯಾಪ್ತಿಯಲ್ಲಿ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಈಗಾಗಲೇ ಬಸ್ ನಿಲ್ದಾಣದ ಒಳಗೆ ಬರುವ ಪ್ರಯಾಣಿಕರನ್ನು ಒಂದೇ ದ್ವಾರದಲ್ಲಿ ಪ್ರವೇಶ ಮತ್ತು ನಿರ್ಗಮನಕ್ಕೆ ಬ್ಯಾರಿಕೇಡಿಂಗ್ ಮಾಡಿಕೊಳ್ಳಲಾಗಿದೆ.
ಒಳಬರುವ ಪ್ರಯಾಣಿಕರನ್ನು ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಲಾಗುವುದು ಹಾಗೂ ಪ್ರಯಾಣಿಕರ ವಿವರಗಳನ್ನು ಪ್ರವೇಶ ದ್ವಾರದಲ್ಲೇ ದಾಖಲಿಸಿಕೊಳ್ಳಲಾಗುತ್ತಿದೆ. ಯಾವುದೇ ಪ್ರಯಾಣಿಕರಲ್ಲಿ ಅಸಾಮಾನ್ಯ ತಾಪಮಾನ, ಶೀತ, ಕೆಮ್ಮು,ಇತ್ಯಾದಿ ರೋಗ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಸಂಪೂರ್ಣ ವಿವರಗಳೊಂದಿಗೆ ಸ್ಥಳೀಯ ಆರೋಗ್ಯಾಧಿಕಾರಿಗಳ ಗಮನಕ್ಕೆ ತರಲಾಗುವುದು.
ಬಸ್ಸುಗಳನ್ನು ಹತ್ತುವಾಗ ಪ್ರಯಾಣಿಕರು ಕಡ್ಡಾಯವಾಗಿ ಮುಖಗವಸು ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಮುಂಜಾಗ್ರತಾ ಕ್ರಮವಾಗಿ ಬಸ್‍ಗಳಲ್ಲಿ ಕರ್ತವ್ಯ ನಿರ್ವಹಿಸುವ ಚಾಲಕ ಮತ್ತು ನಿರ್ವಾಹಕರಿಗೆ ಮುಖಗವಸು, ಕೈ ಗವಸು ಮತ್ತು ಸ್ಯಾನಿಟೈಸರ್‍ಗಳನ್ನು ನೀಡಲಾಗಿದೆ. ವಾಹನವು ಬಸ್ ನಿಲ್ದಾಣದಲ್ಲಿ ಪ್ರತಿ ಸುತುವಳಿ ಮುಗಿಸಿ ಬಸ್ ನಿಲ್ದಾಣಕ್ಕೆ ಆಗಮಿಸಿದಾಗ ವಾಹನವನ್ನು  Disinfection ಗೆ ಒಳಪಡಿಸಲಾಗುವುದು. ಕಡ್ಡಾಯವಾಗಿ ಬಸ್ ನಿಲ್ದಾಣದಲ್ಲಿರುವ ಸ್ಯಾನಿಟೈಸರ್ ಬಳಸಲು ಸೂಚಿಸಲಾಗಿದೆ.
ಬಸ್ ನಿಲ್ದಾಣವನ್ನು ಸಹ ಪ್ರತಿ 2 ರಿಂದ 3 ಗಂಟೆಗಳಿಗೊಮ್ಮೆ ಶುಚಿಗೊಳಿಸಲಾಗುತ್ತಿದೆ. ಬಸ್‍ಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಆಸನಗಳ ಸಾಮರ್ಥ್ಯವನ್ನು ಶೇ.50 ಕ್ಕೆ ಇಳಿಸಲಾಗಿದ್ದು, ಪ್ರಯಾಣಿಕರು ಕಡ್ಡಾಯವಾಗಿ ಸದರಿ ನಿಯಮ ಪಾಲಿಸಬೇಕು. ಹಾಗೂ ಶೇ. 50 ಆಸನಗಳು ಭರ್ತಿಯಾದ ನಂತರ ಮುಂದಿನ ಬಸ್ಸಿಗಾಗಿ ಯಾವುದೇ ಆಡಚಣೆ ಮಾಡದೇ ಶಾಂತಿಯಿಂದ ಕಾಯಬೇಕು.
ಬಸ್ ನಿಲ್ದಾಣಕ್ಕೆ ಆಗಮಿಸುವ ಮೊದಲೇ ಕಡ್ಡಾಯವಾಗಿ ಮುಖಗವಸು ಧರಿಸಬೇಕು. ಪ್ರಯಾಣದ ಅವಧಿಯಲ್ಲಿ ಮುಖಗವಸು ಕಡ್ಡಾಯವಾಗಿರುತ್ತದೆ. ಮಾಸ್ಕ್ ಧರಿಸಿದವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶವಿರುತ್ತದೆ. ಬಸ್ ನಿಲ್ದಾಣಕ್ಕೆ ಪ್ರವೇಶ ಪಡೆಯುವಾಗಲೇ ಪ್ರವೇಶ ದ್ವಾರದಲ್ಲಿ ಕಡ್ಡಾಯವಾಗಿ ಆರೋಗ್ಯ ತಪಾಸಣೆಗೆ ಒಳಗಾಗಬೇಕು ಮತ್ತು ವಿವರಗಳನ್ನು ನೀಡಬೇಕು. ಪ್ರಯಾಣದ ಅವಧಿಯಲ್ಲಿ ನಿರ್ವಾಹಕರಿಗೂ ಸಹ ಪ್ರಯಾಣದ ವಿವರಗಳನ್ನು ನೀಡಬೇಕು.
ಬಸ್ ನಿಲ್ದಾಣದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ವರ್ತಿಸಬೇಕು. ವಾಹನವನ್ನು ಹತ್ತುವಾಗ ಸಹ ಸಾಮಾಜಿಕ ಅಂತರದ ಬಗ್ಗೆ ಪಾಲನೆ ಮಾಡಬೇಕು. ವೈಯಕ್ತಿಕ ನೈರ್ಮಲ್ಯ ಮತ್ತು ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಬೇಕು. ಬಸ್ ನಿಲ್ದಾಣದ ಒಳಗೆ ಪಾನ್ ಬೀಡಾ ಹಾಗೂ ಗುಟ್ಕಾ ತಿನ್ನುವುದು ಮತ್ತು ಎಲ್ಲೆಂದರಲ್ಲಿ ಉಗುಳುವುದನ್ನು ನಿಷೇಧಿಸಿರುತ್ತದೆ. ಟಿಕೆಟ್ ವಿತರಣೆ ಮಾಡುವ ನಿರ್ವಾಹಕರೊಂದಿಗೆ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಬೇಕು.
ಪ್ರಯಾಣಿಕರು ತಮ್ಮ ಸ್ವಹಿತಾಸಕ್ತಿಗಾಗಿ ತಮ್ಮದೇ ಆಹಾರ ಮತ್ತು ನೀರನ್ನು ತರಬೇಕು. ಪ್ರಯಾಣಿಕರು ಪ್ರಯಾಣದ ವೇಳೆಯಲ್ಲಿ ಸಾಕು ಪ್ರಾಣಿ, ಪಕ್ಷಿಗಳು ಇತ್ಯಾದಿಗಳನ್ನು ತಮ್ಮ ಜತೆಯಲ್ಲಿ ಕೊಂಡೊಯ್ಯಲು ನಿಷೇಧಿಸಲಾಗಿದೆ. ಯಾವುದೇ ಬಸ್ಸುಗಳಲ್ಲಿ ನಿಂತು ಪ್ರಯಾಣಿಸಲು ಅವಕಾಶವಿರುವುದಿಲ್ಲ. ಸೀನುವಾಗ ಮತ್ತು ಕೆಮ್ಮುವಾಗ ಮೂಗು ಮತ್ತು ಬಾಯಿಯನ್ನು ಟಿಷ್ಯೂ ಪೇಪರ್, ಕರವಸ್ತ್ರ ಅಥವಾ ಮೊಣಕೈನಿಂದ ಮುಚ್ಚಿಕೊಳ್ಳಬೇಕು. ಹಿರಿಯ ನಾಗರಿಕರು ಅಥವಾ ಮಧುಮೇಹ, ಅಸ್ತಮಾ ಹಾಗೂ ಇತರೆ ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರು ಪ್ರಯಾಣದಿಂದ ದೂರವಿರುವುದು ಒಳಿತು.
ತುಮಕೂರು ಬಸ್ ನಿಲ್ದಾಣ-0816-22784111/9741495772, ಗುಬ್ಬಿ ಬಸ್ ನಿಲ್ದಾಣ-9741496840, ಚಿ.ನಾ.ಹಳ್ಳಿ. ಬಸ್ ನಿಲ್ದಾಣ-9606483563, ತಿಪಟೂರು ಬಸ್ ನಿಲ್ದಾಣ-7760990953,  ತುರುವೇಕೆರೆ ಬಸ್ ನಿಲ್ದಾಣ- 9741495773, ಕುಣಿಗಲ್ ಬಸ್ ನಿಲ್ದಾಣ-9741497033, ಡಾಬಸ್‌ಪೇಟೆ ಬಸ್ ನಿಲ್ದಾಣ-9741496839, ಕೊರಟಗೆರೆ ಬಸ್ ನಿಲ್ದಾಣ-9741497032, ಸಿರಾ ಬಸ್ ನಿಲ್ದಾಣ-9741496880, ಮಧುಗಿರಿ ಬಸ್ ನಿಲ್ದಾಣ-9741496881, ಪಾವಗಡ ಬಸ್ ನಿಲ್ದಾಣ-9741498481 ಅನ್ನು ಸಂಪರ್ಕಿಸಬಹುದು.
ಸಾರಿಗೆ ಸೌಲಭ್ಯ
ಪ್ರಸ್ತುತ ಪ್ರಥಮ ಹಂತದಲ್ಲಿ ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಎಲ್ಲ ತಾಲ್ಲೂಕು ಕೇಂದ್ರಗಳಿಂದ ಜಿಲ್ಲಾ ಕೇಂದ್ರಕ್ಕೆ ಪ್ರಯಾಣಿಕರ ಬೇಡಿಕೆಯಂತೆ ಸಾರಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ. ತುಮಕೂರು ಜಿಲ್ಲಾ ಕೇಂದ್ರದಿಂದ ಬೆಂಗಳೂರು, ಚಿತ್ರದುರ್ಗ, ಶಿವಮೊಗ್ಗ, ಹಾಸನ, ಮೈಸೂರು, ಹೊಸದುರ್ಗ ಸೇರಿದಂತೆ ಇತರೆ ಸ್ಥಳಗಳ ಕಡೆಗೆ ಪ್ರಯಾಣಿಕರ ಬೇಡಿಕೆಯಂತೆ ಸಾರಿಗೆಗಳ ಕಾರ್ಯಚರಣೆ ಮಾಡಲಾಗುತ್ತಿದೆ.
ಸಂಸ್ಥೆಯ ಕೇಂದ್ರ ಕಛೇರಿಯ ನಿರ್ದೇಶನದಂತೆ ಪಾಯಿಂಟ್ ಟು ಪಾಯಿಂಟ್ (ಬಸ್ ನಿಲ್ಧಾಣದಿಂದ ಬಸ್ ನಿಲ್ಧಾಣಗಳಿಗೆ) ಕಾರ್ಯಚರಣೆ ಮಾಡುತ್ತಿದ್ದು, ಸಾರ್ವಜನಿಕ ಪ್ರಯಾಣಿಕರ ಅನೂಕೂಲಕ್ಕಾಗಿ ಸಂಸ್ಥೆಯ ಬಸ್ ನಿಲ್ದಾಣಗಳು ಇಲ್ಲದ ಹೋಬಳಿ ಕೇಂದ್ರಗಳು ಹಾಗೂ ಜಂಕ್ಷನ್ ಪಾಯಿಂಟ್‍ಗಳಾದ ಹುಳಿಯಾರ್, ಮಾಯಸಂದ್ರ, ಕೆ.ಬಿ.ಕ್ರಾಸ್, ಕ್ಯಾತಸಂದ್ರ, ದೊಡ್ಡಾಲದಮರ, ಬಡವನಹಳ್ಳಿ, ಹಾಗೂ ಇತರೆ ಕೇಂದ್ರಗಳಲ್ಲಿ ಸಂಸ್ಥೆಯ ವತಿಯಿಂದ ಸಿಬ್ಬಂದಿಗಳೊಂದಿಗೆ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು, ಪ್ರಯಾಣಿಸಲು ಅನೂಕೂಲ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Leave a Comment