ಸಾಯಿ ಮಂದಿರಗಳಲ್ಲಿ ಗುರುಪೂರ್ಣಿಮೆ ಸಂಭ್ರಮ

ತುಮಕೂರು, ಜು. ೧೬- ನಗರದ ವಿವಿಧ ಶ್ರೀ ಸಾಯಿಬಾಬಾ ದೇವಾಲಯಗಳಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಗುರುಪೂರ್ಣಿಮೆಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ವೈಭವೋಪೇತವಾಗಿ ಆಚರಿಸಲಾಯಿತು.

ಗುರುಪೂರ್ಣಿಮೆ ಅಂಗವಾಗಿ ನಗರದ ರಾಮಕೃಷ್ಣ ನಗರದಲ್ಲಿರುವ ಶ್ರೀ ಸಾಯಿನಾಥ ದೇವಾಲಯ, ಚೈತನ್ಯ ಟೆಕ್ನೋ ಸ್ಕೂಲ್ ಸಮೀಪವಿರುವ ಶಿರಡಿ ಸಾಯಿಬಾಬಾ ದೇವಾಲಯ, ಟೂಡಾ ಕಚೇರಿ ಸಮೀಪ ಶಿರಡಿ ಸಾಯಿಬಾಬಾ ನಗರದಲ್ಲಿರುವ ಶ್ರೀ ಸಾಯಿಬಾಬಾ ಮಂದಿರಗಳು ವಿವಿಧ ಪುಷ್ಪಾಲಂಕಾರ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದವು.

ಗುರುಪೂರ್ಣಿಮೆ ಪ್ರಯುಕ್ತ ಈ ಎಲ್ಲ ಸಾಯಿಮಂದಿರಗಳಲ್ಲಿ ಮುಂಜಾನೆಯಿಂದಲೇ ಕಾಕಡ ಆರತಿ, ಮಹಾಮಂಗಳಾರತಿ, ಭಕ್ತರಿಂದ ಕ್ಷೀರಾಭಿಷೇಕ, ವ್ಯಾಸ ಪೂಜೆ, ಮಧ್ಯಾಹ್ನ ಆರತಿ ಮತ್ತು ಪ್ರಸಾದ ವಿನಿಯೋಗ ನೆರವೇರಿತು.

ಬೆಳಿಗ್ಗೆಯಿಂದಲೇ ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿ ಸಾಯಿ ಮಂದಿರಗಳಿಗೆ ಎಡತಾಕತ್ತಿದ್ದು, ಸಾಯಿಬಾಬನ ದರ್ಶನಾಶೀರ್ವಾದ ಪಡೆದು ಪ್ರಸಾದ ಸ್ವೀಕರಿಸಿ ತೆರಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿವೆ.

ನಗರದ ರಾಮಕೃಷ್ಣ ನಗರದಲ್ಲಿರುವ ಶ್ರೀ ಸಾಯಿಬಾಬಾ ದೇವಾಲಯಕ್ಕೆ ಭಕ್ತಾದಿಗಳಿಗಾಗಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರಿಂದ ಪ್ರವಚನ ಕಾರ್ಯಕ್ರಮ ಸಹ ಏರ್ಪಡಿಸಲಾಗಿತ್ತು.

ಸದರಿ ಸಾಯಿ ಮಂದಿರದಲ್ಲಿ ಗುರುಪೂರ್ಣಿಮೆ ಪ್ರಯುಕ್ತ ಮಂಜುಶ್ರೀ ಪ್ಲವರ್ ಡೆಕೋರೇಷನ್ ವತಿಯಿಂದ ಸಾಯಿಬಾಬಾ ವಿಗ್ರಹ ಮೂರ್ತಿ ಸೇರಿದಂತೆ ಇಡೀ ಮಂದಿರವನ್ನು ಆಕರ್ಷಕವಾಗಿ ವಿವಿಧ ಪುಷ್ಪಾಲಂಕೃತಗೊಳಿಸಲಾಗಿತ್ತು.
ನಗರದ ವಿವಿಧೆಡೆ ಇರುವ ಸಾಯಿ ಮಂದಿರಗಳಿಗೆ ಬೆಳಿಗ್ಗೆಯಿಂದಲೇ ಭಕ್ತ ಸಮೂಹ ಹರಿದು ಬರುತ್ತಿದ್ದು, ಸಾಯಿ ಪ್ರಸಾದವನ್ನು ಸ್ವೀಕರಿಸುತ್ತಾ, ಸಾಯಿಬಾಬಾನ ಸ್ಮರಿಸಿ ಮಂದಿರಗಳಿಂದ ಹೊರ ಬರುತ್ತಿದ್ದ ದೃಶ್ಯಗಳು ಕಂಡು ಬಂದವು.

ಸಾಯಿಮಂದಿರಗಳಿಗೆ ಹರಿದು ಬಂದ ಭಕ್ತಾದಿಗಳ ವಾಹನ ನಿಲುಗಡೆಗೆ ಯಾವುದೇ ತೊಂದೆಯಾಗದಂತೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು.

Leave a Comment