ಸಾಯಿ ಪಲ್ಲವಿಗೆ ಪೈಪೋಟಿ ರಶ್ಮಿಕಾ

ಬೆಂಗಳೂರು, ಆ ೩೦- ಕನ್ನಡದ ಚೆಲುವೆ ರಶ್ಮಿಕಾ ಮಂದಣ್ಣ ಸದ್ಯ ಟಾಲಿವುಡ್‌ನಲ್ಲಿ ಭರ್ಜರಿಯಾಗಿ ಸದ್ದು ಮಾಡುತ್ತಿದ್ದಾರೆ. ಹೌದು ದಕ್ಷಿಣ ಭಾರತದ ಟಾಪ್ ನಟಿ ಸಾಯಿ ಪಲ್ಲವಿಗೆ ಟಾಂಗ್ ಕೊಡುವಷ್ಟು ರಶ್ಮಿಕಾ ಬೆಳೆದಿದ್ದಾರೆ ಎಂಬುದು ಅಭಿಮಾನಿಗಳಲ್ಲಿ ಭಾರಿ ಸಂತಸ ಮೂಡಿಸುವ ವಿಚಾರವಾಗಿದೆ.

ಸದ್ಯ ಟಾಲಿವುಡ್‌ನಲ್ಲಿ ರಶ್ಮಿಕಾ ಹಾಟ್ ಟಾಪಿಕ್ ಆಗಿದ್ದು, ದಿನದಿಂದ ದಿನಕ್ಕೆ ತೆಲುಗು ಚಿತ್ರರಂಗದಲ್ಲಿ ಅವರ ಬೇಡಿಕೆ ಹೆಚ್ಚುತ್ತಿದೆ ಎಂಬುದನ್ನು ಯಾರು ಅಲ್ಲಗೆಳೆಯುವಂತಿಲ್ಲ.

ತೆಲುಗಿನ ಚಲೋ ಹಾಗೂ ಗೀತ ಗೋವಿಂದಂ ಚಿತ್ರಗಳು ಯಶಸ್ವಿ ಆಗಿದ್ದೇ ತಡ, ಕಿರಿಕ್ ಬೆಡಗಿ ರಶ್ಮಿಕಾ ಟಾಪ್ ನಟಿಯಾಗಿಬಿಟ್ಟಿದ್ದಾರೆ. ಇದರ ಜತೆಗೆ ಅವರ ಸಂಭಾವನೆಯೂ ಹೆಚ್ಚಾಯಿತು. ಸಾಕಷ್ಟು ಚಿತ್ರಗಳು ಇವರನ್ನು ಹುಡುಕಿಕೊಂಡು ಬರುತ್ತಿವೆ. ಅವರ ಈ ಬೆಳವಣೆಗೆ ಟಾಲಿವುಟ್‌ನಲ್ಲಿ ಗಟ್ಟಿ ನೆಲೆ ಹೊಂದಿರುವ ನಟಿ ಸಾಯಿ ಪಲ್ಲವಿಗೆ ಪೈಪೋಟಿ ನೀಡುತ್ತಿದೆ ಎನ್ನುವ ಮಾತು ಟಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ.

ಫಿದಾ ಹಾಗೂ ಎಂಸಿಎ ಚಿತ್ರಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದ ಸಾಯಿ, ಟಾಪ್ ನಟಿಯರ ಸಾಲಿನಲ್ಲಿದ್ದಾರೆ. ಸದ್ಯ ಅವರೂ ಕೂಡ ಕೆಲ ತಮಿಳು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇವರಿಗೆ ಹೋಲಿಸಿದ್ದರೇ ರಶ್ಮಿಕಾ ಮಂದಣ್ಣ ಅವರಿಗೆ ಅವಕಾಶಗಳು ಜಾಸ್ತಿ ಸಿಗುತ್ತಿವೆಯಂತೆ.

ಕಥೆ ಇಷ್ಟವಾದರೆ ಸಾಕು, ಯಾವುದೇ ನಟನ ಜತೆ ನಟಿಸಲು ರಶ್ಮಿಕಾ ಒಪ್ಪಿಕೊಳ್ಳುತ್ತಾರಂತೆ. ಇದು ಅವರಿಗೆ ಆಫರ್‌ಗಳನ್ನು ತಂದುಕೊಡುವಲ್ಲಿ ಸಾಕಷ್ಟು ಸಹಾಯಕಾರಿಯಾಗುತ್ತಿದೆಯಂತೆ. ಇದರಿಂದ ಈ ನಟಿಯರ ನಡುವೆ ಪೈಪೋಟಿ ಶುರುವಾಗಿದೆ ಎನ್ನಲಾಗುತ್ತಿದೆ. ಇನ್ನು ಸಾಮಾಜಿಕ ಜಾಲತಾಣದಲ್ಲೂ ಟಾಲಿವುಡ್ ಸೂಪರ್ ಸ್ಟಾರ್‌ಗಳು ಹಾಗೂ ತೆಲುಗು ಅಭಿಮಾನಿಗಳು ರಶ್ಮಿಕಾ ನಟಿಗೆ ಮೆಚ್ಚುಗೆ ವ್ಯಕ್ತಪಡಿಸಿ ತಮ್ಮ ನೆಚ್ಚಿನ ನಟಿ ಎಂದು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಇಷ್ಟು ದಿನ ಗೂಗಲ್‌ನಲ್ಲಿ ಸಾಯಿ ಪಲ್ಲವಿಗೆ ಹುಡುಕಾಟ ನಡೆಸುತ್ತಿದ್ದ ಪಡ್ಡೆ ಹೈಕ್ಲು ಕೂಡ ರಶ್ಮಿಕಾಳ ಹುಡುಕಾಟ ಆರಂಭಿಸಿದ್ದಾರೆ. ಕನ್ನಡತಿಗೆ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ.

Leave a Comment