ಸಾಮೂಹಿಕ ವಿವಾಹದ ಮೇಲೆ ಕೊರೊನಾ ಕರಿನೆರಳು

ಬೆಂಗಳೂರು, ಏ.7 -ರಾಜ್ಯ ಸರ್ಕಾರದ ಮಹತ್ವದ ಸಪ್ತಪದಿ ಯೋಜನೆ ಮೇಲೆ ಕೊರೊನಾ ಕರಿನೆರಳು ಆವರಿಸಿದ್ದು, ಸಪ್ತಪದಿ ಯೋಜನೆ ವಿವಾಹ ಮುಂದೂಡಲಾಗಿದೆ.
ಏಪ್ರಿಲ್ 26 ರಂದು ನಿಗದಿಯಾಗಿದ್ದ ಪ್ರಥಮ ಹಂತದ ಸಪ್ತಪದಿ ಯೋಜನೆಯನ್ನು ಮುಂದೂಡಿರುವುದಾಗಿ ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 26 ರಂದು ಸಪ್ತಪದಿ ಯೋಜನೆಯಡಿ‌ 1.5 ಸಾವಿರ ವಧು ವರರು ವಿವಾಹಕ್ಕೆ ನೋಂದಣಿ ಮಾಡಿಕೊಂಡಿದ್ದರು. ಯೋಜನೆಯಡಿ ಬಡ ವಧು ವರರಿಗೆ ಸರ್ಕಾರದಿಂದ ಉಚಿತ ವಿವಾಹ ಭಾಗ್ಯ ನೀಡಲಾಗುತ್ತಿದ್ದು ಆದರೀಗ ಕೊರೋನಾದಿಂದ ಸಪ್ತಪದಿ ಯೋಜನೆ ಮುಂದೂಡಿಕೆಯಾಗಿದೆ ಎಂದು ತಿಳಿಸಿದರು.

ಮೇ 26 ರಂದು ಎರಡನೇ ಹಂತದ ಸಪ್ತಪದಿ ಯೋಜನೆಯಡಿ ಸಾಮೂಹಿಕ ವಿವಾಹ ಕಾರ್ಯಕ್ರಮ ಇದ್ದು ಅದೇ ದಿನ ಮೊದಲ ಮತ್ತು ಎರಡನೇ ಹಂತಗಳನ್ನು ಸೇರಿಸಿ ಒಂದೇ ಹಂತದಲ್ಲಿ ಸಾಮೂಹಿಕ ವಿವಾಹ‌ ಕಾರ್ಯಕ್ರಮ ನಡೆಸಲಾಗುವುದು. ಇದಕ್ಕೆ‌ ಮುಖ್ಯಮಂತ್ರಿಗಳು ಸಹ ಒಪ್ಪಿಗೆ ಸೂಚಿಸಿದ್ದಾರೆ ಎಂದರು ಅವರು ಸ್ಪಷ್ಟಪಡಿಸಿದರು.

ಲಾಕ್‌ಡೌನ್ ಪರಿಸ್ಥಿತಿಯಲ್ಲಿ ಎ ದರ್ಜೆಯ ಎಲ್ಲ ದೇವಸ್ಥಾನಗಳಲ್ಲಿ ಸಿಬ್ಬಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಮುಜರಾಯಿ ಇಲಾಖೆ ಅಡಿ ಸಂಬಳ ಪಡೆಯುತ್ತಿರುವ ಅರ್ಚಕರಿಗೆ, ಕಲಾವಿಕರಿಗೆ ಮತ್ತು ದೇವಾಲಯ ಸ್ವಚ್ಛ ಮಾಡುವ ಸಿಬ್ಬಂದಿಗೆ ಸಂಬಳ ನಿಲ್ಲಿಸದಂತೆ ಸೂಚನೆ ನೀಡಿದ್ದೇನೆ.
ಹಲವು ಕಡೆ ಮಂಗಳಾರತಿ ತಟ್ಟೆಗೆ ದಕ್ಷಿಣೆ ಇಲ್ಲದೆ ಹಲವು ಅರ್ಚಕರು ಸಂಕಷ್ಟದಲ್ಲಿ ಇದ್ದಾರೆ.
ಇವರಿಗೆ ಯಾವ ರೀತಿಯಲ್ಲಿ ನೆರವು ನೀಡಬಹುದು ಎಂಬ ಚಿಂತನೆ ನಡೆದಿದೆ. ಉಳಿದಂತೆ ರಾಜ್ಯದ ನಾನಾ ದೇವಸ್ಥಾನಗಳಲ್ಲಿ ಆಡಳಿತ ಮಂಡಳಿ‌ ವತಿಯಿಂದಲೇ ರಾಜ್ಯದ 37 ಸಾವಿರ ಮಂದಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Leave a Comment