ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕತೆಗಳು

 

ಕಲಬುರಗಿ,ಆ.11-ಕತೆಗಾರರಾದ ಡಾ.ಬಸವರಾಜ ಡೋಣೂರ ಮತ್ತು ಮಹಾಂತೇಶ ನವಲಕಲ್ ಅವರ ಇದುವರೆಗೆ ರಚಿಸಿರುವ ಕತೆಗಳು ಸಾಮಾಜಿಕ ಸಮಸ್ಯೆಗಳ ಕುರಿತು ಗಂಭೀರವಾಗಿ ಯೋಚನೆಗೆ ಹಚ್ಚುವ ವಿಷಯ ವಸ್ತುಗಳನ್ನೊಳಗೊಂಡಿವೆ ಎಂದು ವಿಮರ್ಶಕ ಡಾ.ಅಪ್ಪಗೆರೆ ಸೋಮಶೇಖರ ಹೇಳಿದರು.

ಸಾಹಿತ್ಯ ಅಕಾದೆಮಿ ನವದೆಹಲಿ ಹಾಗೂ ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ನಗರದ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿಂದು ಹಮ್ಮಿಕೊಂಡಿದ್ದ ಸಾಹಿತ್ಯ ವೇದಿಕೆ ಕಾರ್ಯಕ್ರಮದಲ್ಲಿ ” ಸಮಕಾಲೀನ ಕನ್ನಡ ಸಣ್ಣ ಕತೆಗಳು” ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

ಬಸವರಾಜ ಡೋಣೂರ ಅವರು ಬರೆದ ಕತೆಗಳು ಗ್ರಾಮ ಭಾರತದ ತಲ್ಲಣಗಳ ಕುರಿತು ಬೆಳಕು ಚೆಲ್ಲಿದರೆ, ನವಲಕಲ್ ಅವರ ಕತೆಗಳು ಜಾಗತೀಕರಣ, ಬಹುರಾಷ್ಟ್ರೀಯ ಕಂಪನಿಗಳ ಕ್ರೌರ್ಯದ ಕರಾಳತೆಯನ್ನು ಬಯಲು ಮಾಡುತ್ತವೆ. ಈ ಇಬ್ಬರು ಕತೆಗಾರರ ಯಾವುದೇ ಕತೆಯನ್ನು ತೆಗೆದುಕೊಂಡರೂ ಅದರಲ್ಲಿನ ಕತೆಯಲ್ಲಿ ಕತೆಗಾರನ ಆತ್ಮಕತನ ಉಸಿರಾಡುವುದು ಕಂಡುಬರುತ್ತದೆ.

ಡೋಣೂರ ಮತ್ತು ನವಲಕಲ್ ಅವರು ಸಮಕಾಲೀನ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವ ಕತೆಗಳನ್ನು ಬರೆದರೂ ಉತ್ತರ ಕರ್ನಾಟಕ ಭಾಗದಲ್ಲಿ ಬಳಸುವ ಭಾಷೆಯ ನುಡಿಗಟ್ಟು ಡಾ.ಚೆನ್ನಣ್ಣಾ ವಾಲೀಕಾರ, ಡಾ.ಗೀತಾ ನಾಗಭೂಷಣ ಅವರ ಕತೆ, ಕಾದಂಬರಿಗಳಲ್ಲಿ ಕಂಡುಬರುವಂತೆ ಅಷ್ಟಾಗಿ ಕಂಡು ಬರುವುದಿಲ್ಲ ಎಂದರು.

ಕತೆಗಾರ ಬಸವರಾಜ ಡೋಣೂರ ಅವರು “ಅಲ್ಲಾಭಕ್ಷ” ಕತೆ ಓದಿದರೆ, ಮಹಾಂತೇಶ ನವಲಕಲ್ ಅವರು “ಅಶ್ವಗಂಧದ ಹಾದಿ” ಕತೆ ಓದಿದರು. ಸಾಹಿತ್ಯ ಅಕಾದೆಮಿ ಕನ್ನಡ ಸಲಹಾ ಸಮಿತಿ ಸದಸ್ಯ ಡಾ.ಬಾಳಾಸಾಹೇಬ ಲೋಕಾಪುರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಾಹಿತ್ಯ ಅಕಾದೆಮಿ ಕಲಬುರಗಿಯಲ್ಲಿ ಹಮ್ಮಿಕೊಳ್ಳುತ್ತಿರುವ ಎರಡನೇ ಕಾರ್ಯಕ್ರಮ ಇದಾಗಿದ್ದು, ಈ ಹಿಂದೆ ಕತಾ ಕಮ್ಮಟ ಆಯೋಜಿಸಲಾಗಿತ್ತು. ಇದೀಗ ಸಾಹಿತ್ಯ ವೇದಿಕೆ ಕಾರ್ಯಕ್ರಮ ಹಮ್ಮಿಕೊಂಡಿದೆ. ನಾರಿಚೇತನ, ಗ್ರಾಮ ಭಾರತದ ಜನಪದ ಕತೆಗಳ ಕುರಿತ ಲೋಕಾ, ಮೀಟ್ ದ ಆಥರ್, ಯುವ ಚೇತನ, ಗ್ರಾಮ ಚೇತನ, ಕತಾ ಸಂಧಿ, ಕವಿ ಸಂಧಿ ಅಕಾದೆಮಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳಲ್ಲಿ ಪ್ರಮುಖವಾದವುಗಳು ಎಂದು ತಿಳಿಸಿದರು.

ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಬಿ.ಎಚ್.ನೀರಗುಡಿ ಸ್ವಾಗತಿಸಿದರು. ಖ್ಯಾತ ಲೇಖಕ ಪ್ರಭಾಕರ ನಿಂಬರ್ಗಿ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ ಕಾರ್ಯಕ್ರಮ ನಿರೂಪಿಸಿದರು.

@12bc = ಸಂವಾದ

ನಂತರ ಕತೆಗಾರರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕತೆಗಾರರಾದ ಜ್ಯೋತಿ ಕುಲಕರ್ಣಿ, ಸಂಧ್ಯಾ ಹೊನಗುಂಟಿಕರ್, ಡಾ.ಗಣೇಶ ಪವಾರ ಮತ್ತು ಮಹೇಂದ್ರ ಎಂ.ಪಾಲ್ಗೊಂಡಿದ್ದರು.

ಡಾ.ಹೆಚ್.ಟಿ.ಪೋತೆ, ಡಾ.ವಿಕ್ರಮ ವಿಸಾಜಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಚಂದ್ರಕಾಂತ ಕರದಳ್ಳಿ, ಹಿರಿಯ ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ, ಹಿರಿಯ ಕತೆಗಾರರಾದ ಶಂಕ್ರಯ್ಯ ಘಂಟಿ, ಸಿದ್ದರಾಮ ಹೊನ್ಕಲ್, ಚಿತ್ರಶೇಖರ ಕಂಠಿ ಸೇರಿದಂತೆ ಕರ್ನಾಟಕ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ಮತ್ತು ಕತೆಗಾರರು, ಕವಿಗಳು ಹಾಗೂ ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಿವಿಗಳಲ್ಲಿ ರಾಜಕೀಯ: ಡೋಣೂರ ವಿಷಾದ

ವಿಶ್ವವಿದ್ಯಾಲಯಗಳಲ್ಲಿ ನಡೆಯುವ ರಾಜಕೀಯ ಅಸೆಂಬ್ಲಿಯಲ್ಲಿಯೂ ನಡೆಯುವುದಿಲ್ಲ. ಪಾಪಿಗಳು ಮಾತ್ರ ವಿಶ್ವವಿದ್ಯಾಲಯದ ಕುಲಪತಿಗಳಾಗಬೇಕು. ಅಂತಹ ಪರಿಸ್ಥಿತಿ ಈಗ ವಿಶ್ವವಿದ್ಯಾಲಗಳಲ್ಲಿ ನಿರ್ಮಾಣವಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಬಸವರಾಜ ಡೋಣೂರ ವಿಷಾದ ವ್ಯಕ್ತಪಡಿಸಿದರು.

ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿಂದು ನಡೆದ ಸಮಕಾಲೀನ ಕನ್ನಡ ಸಣ್ಣ ಕತೆಗಳು ಕುರಿತ ಕತೆಗಾರರೊಂದಿಗೆ ಸಂವಾದ ಕುರಿತ ಕಾರ್ಯಕ್ರಮದಲ್ಲಿ ಕಥಾ ಓದು ಕಾರ್ಯಕ್ರಮದಲ್ಲಿ ಅವರು ತಮ್ಮ ಮನದ ಅಳಲನ್ನು ತೋಡಿಕೊಂಡರು.

Leave a Comment