ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶಗಳನ್ನು ಕಳಿಸುವವರ ವಿರುದ್ಧ ಕ್ರಮಕ್ಕೆ ಆಗ್ರಹ

ಬಳ್ಳಾರಿ, ಜು.17: ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶಗಳನ್ನು ಕಳಿಸುವವರ ವಿರುದ್ಧ ಕ್ರಮಕ್ಕೆ ಕರ್ನಾಟಕ ಯುವ ಜಾಗೃತಿ ವೇದಿಕೆ ಆಗ್ರಹಿಸಿದೆ.
ಬಳ್ಳಾರಿ ವಲಯದ ಐಜಿಪಿ ಮುರುಘನ್ ಅವರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ವೇದಿಕೆಯು ಮನವಿ ಪತ್ರವನ್ನು ಸಲ್ಲಿಸಿದೆ. ಮನವಿ ಪತ್ರದಲ್ಲಿ, ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ವಾಟ್ಸಪ್ ಹಾಗೂ ಟ್ವಿಟರ್ ಗಳ ಮೂಲಕ ಜನಸಾಮಾನ್ಯರು ಸೇರಿದಂತೆ ವಿವಿಧ ಕ್ಷೇತ್ರಗಳ ಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದು ತಮಗೆ ತಿಳಿದ ಸಂಗತಿ.

ಅದರಲ್ಲೂ ಫೇಸ್ ಬುಕ್ ನಲ್ಲಿ ಲಕ್ಷಾಂತರ ಜನ ರಾಜಕೀಯ, ಸಾಹಿತ್ಯ, ಮನರಂಜನೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಅಭಿಪ್ರಾಯ, ಬರಹಗಳನ್ನು ಬರೆಯುತ್ತಾರೆ ಮತ್ತು ಹಂಚುತ್ತಾರೆ. ಸಾಕಷ್ಟು ಸಲ ನಿರ್ದಿಷ್ಟ ವಿಷಯಗಳ ಮೇಲೆ ಪರ ವಿರೋಧ ಚರ್ಚೆಗಳು ನಡೆಯುತ್ತವೆ. ಆದರೆ ಮುಖಾಮುಖಿಯಾಗಲಿ ಅಥವಾ ಯಾವುದೇ ಇನ್ನಿತರ ಮಾಧ್ಯಮದ ಮೂಲಕ ನಡೆಯುವ ಚರ್ಚೆಯು ಆರೋಗ್ಯಕರವಾಗಿರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ರಾಜ್ಯದ ಜನಪ್ರತಿನಿಧಿಗಳು ಮತ್ತು ಜನನಾಯಕರು ಅದರಲ್ಲೂ ಮಹಿಳೆಯರ ವಿರುದ್ಧ ಅತ್ಯಂತ ಕೆಟ್ಟ ಹಾಗೂ ಅಸಹ್ಯಕರವಾದ ರೀತಿಯಲ್ಲಿ ಸಂದೇಶಗಳನ್ನು ಹಂಚುತ್ತಿದ್ದಾರೆ. ಒಂದು ಪಕ್ಷ ಅಥವಾ ವಿಷಯ, ಸಿದ್ಧಾಂತದ ಪರ ಇರುವವರನ್ನು ವ್ಯಕ್ತಿಗತವಾಗಿ ನಿಂದಿಸುವುದು, ಬೆದರಿಕೆ ಒಡ್ಡುವುದು, ಅಸಹ್ಯ ಸಂದೇಶ ಹಂಚಿಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ಮಾಡಲಾಗುತ್ತಿದೆ. ಈ ರೀತಿಯ ಬೆಳವಣಿಗೆಯು ಸಮಾಜದಲ್ಲಿ ಅಶಾಂತಿಯನ್ನು ಉಂಟು ಮಾಡುವ ರೀತಿಯಲ್ಲಿ ಹೆಚ್ಚುತ್ತಿರುವುದು ಆತಂಕಕಾರಿ ವಿಷಯ. ಆದ್ದರಿಂದ ಇಂತಹ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ.

ಮನವಿ ಪತ್ರ ಸಲ್ಲಿಸಿದ ಸಂದರ್ಭದಲ್ಲಿ ವೇದಿಕೆಯ ರಾಜ್ಯಾಧ್ಯಕ್ಷ ಯಾಳ್ಪಿ ವಲಿಬಾಷ, ಉಪಾಧ್ಯಕ್ಷ ರಾಣಿತೋಟ ಈ.ವೀರೇಶ್, ಜಿಲ್ಲಾಧ್ಯಕ್ಷರಾದ ಗಾದಿಲಿಂಗ, ನಗರಾಧ್ಯಕ್ಷೆ (ಮಹಿಳಾ ಘಟಕ) ಅನುರಾಧ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪದ್ಮಾ, ನಗರಾಧ್ಯಕ್ಷ ಅಬ್ದುಲ್ ರಜಾಕ್, ಜಿಲ್ಲಾ ಉಪಾಧ್ಯಕ್ಷ ವಿರೂಪಾಕ್ಷಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಗಮ್ ರಾವ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಫಕೃದ್ದೀನ್, ಜಿಲ್ಲಾ ಉಪಾಧ್ಯಕ್ಷ ಮಂಜುನಾಥ, ನಗರ ಘಟಕದ ಪ್ರಧಾನ ಕಾರ್ಯದರ್ಶಿ ಹಸೇನ್, ಸಂಚಾಲಕ ಶಂಕರ್, ಮುಖಂಡರಾದ ಪ್ರಸಾದ್, ರಾಜು, ಮತ್ತಿತರರು ಉಪಸ್ಥಿತರಿದ್ದರು.

Leave a Comment