ಸಾಮಾಜಿಕ ಕಾರ್ಯಕರ್ತ ಹನುಮಂತ ಬಂಗಿ ಮೇಲೆ ದೌರ್ಜನ್ಯ

ಶ್ರೀನಿವಾಸ ನಾಯಕ ವಿಡಿಯೋ ವೈರಲ್
ರಾಯಚೂರು.ಜು.11- ಮಾಜಿ ಸಂಸದ ಬಿ.ವಿ.ನಾಯಕ ಅವರ ಅಳಿಯ ಶ್ರೀನಿವಾಸ ನಾಯಕ ಅವರು, ಸಾಮಾಜಿಕ ಕಾರ್ಯಕರ್ತ ಹನುಮಂತ ಬಂಗಿ ಅವರನ್ನು ಕೋಣೆಯಲ್ಲಿ ಕೂಡಿಹಾಕಿ ಹಲ್ಲೆ ಮಾಡಿದ ವಿಡಿಯೋ ಈಗ ವೈರಲಾಗಿ ಮಾರ್ಪಟ್ಟಿದೆ.
ಜು.5 ರಂದು ಬಾಗೂರು ಕೃಷ್ಣಾ ನದಿಯ ದಡದಲ್ಲಿ ಮರಳು ಸಂಗ್ರಹ ಮೂಲಕ ನಿಯಮ ಉಲ್ಲಂಘಿಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿ ಮಾಡುತ್ತಿರುವ ಸಂದರ್ಭದಲ್ಲಿ ಐದಾರು ಜನ ಹನುಮಂತ ಬಂಗಿ ಅವರನ್ನು ಅಪಹರಿಸಿ, ಮರಳು ಕೇಂದ್ರದಲ್ಲಿ ಕೂಡಿ ಹಾಕಿದ್ದರು. ಈ ಸ್ಥಳಕ್ಕೆ ಆಗಮಿಸಿದ ಶ್ರೀನಿವಾಸ ನಾಯಕ ಅವರು, ಹನುಮಂತ ಬಂಗಿ ಅವರ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋ ಈಗ ವಾಟ್ಸಾಪ್‌ಗಳಲ್ಲಿ ವೈರಲ್ ಆಗಿದೆ.
ಹನುಮಂತಪ್ಪ ಬಂಗಿ ಅವರು ನೆಲದ ಮೇಲೆ ಕುಳಿತುಕೊಂಡು `ಅಣ್ಣಾ` ಎಂದು ಸಂಬೋಧಿಸುತ್ತಾ, ಕೈ ಮುಗಿದು ತನ್ನನ್ನು ಬಿಡುವಂತೆ ಬೇಡಿಕೊಳ್ಳುವ ಚಿತ್ರದಲ್ಲಿ ಪಕ್ಕದಲ್ಲಿರುವ ಮಂಚದ ಮೇಲೆ ಕುಳಿತ ಶ್ರೀನಿವಾಸ ನಾಯಕ ಅವರು, ಬಂಗಿ ಅವರನ್ನು ಬೆದರಿಸುತ್ತಾ, ಶ್ರೀನಿವಾಸ ನಾಯಕ ಅವರು, ಉದಯ ಎನ್ನುವ ಹೆಸರಿನ ಬಗ್ಗೆ ಪ್ರಸ್ತಾಪಿಸುತ್ತಿರುವುದು ಈ ವಿಡಿಯೋದಲ್ಲಿ ದಾಖಲಾಗಿದೆ.
ಹನುಮಂತ ಬಂಗಿ ಅವರನ್ನು ಬೆದರಿಸುತ್ತಾ, ಅವರ ಕೆನ್ನೆಗೆ ಬಲವಾಗಿ ಹೊಡೆಯುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಈ ಘಟನೆಗೆ ಸಂಬಂಧಿಸಿ ದೇವದುರ್ಗ ಠಾಣೆಯಲ್ಲಿ ಪ್ರಕರಣವೂ ದಾಖಲಿಸಲಾಗಿದೆ. ಹಲ್ಲೆ ನಂತರ ಹನುಮಂತ ಬಂಗಿಯನ್ನು ಸೈದಾಪೂರು ಹತ್ತಿರದ ರೈಲ್ವೆ ಹಳಿಗೆ ಹಾಕಲು ಯತ್ನಿಸಿದರು ಎಂದು ದೂರಲಾಗಿತ್ತು. ನಂತರ ಶಕ್ತಿನಗರದ ಲಾಡ್ಜ್‌ಗೆ ಕರೆತಂದು ಹಲ್ಲೆ ಮಾ‌ಡಿದ್ದರು.
ಹಲ್ಲೆ ಮಾಡಿರುವುದಕ್ಕೆ ಸಂಬಂಧಿಸಿ ಹನುಮಂತ ಬಂಗಿ ಅವರು ನೀಡಿದ ದೂರಿನ ಮೇರೆಗೆ ರವಿ, ಅಶೋಕ, ಶ್ರೀನಿವಾಸ ನಾಯಕ ಸೇರಿ ಇತರೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಘಟನೆಗೆ ಸಂಬಂಧಿಸಿ, ಇಲ್ಲಿವರೆಗೂ ವಿಡಿಯೋ ಚಿತ್ರೀಕರಣ ಬಹಿರಂಗಗೊಂಡಿರಲಿಲ್ಲ. ಆದರೆ, ಈಗ ವಾಟ್ಸಾಪ್‌ಗಳಲ್ಲಿ ಶ್ರೀನಿವಾಸ ನಾಯಕ ಅವರು, ಹನುಮಂತ ಬಂಗಿ ಅವರ ಮೇಲೆ ಹಲ್ಲೆ ಮಾಡುತ್ತಿರುವ ಚಿತ್ರ ಬಹಿರಂಗಗೊಳ್ಳುತ್ತಿರುವುದು ದೇವದುರ್ಗ ದಂಧೆ ವಿರುದ್ಧ ಧ್ವನಿಯೆತ್ತಿದವರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎನ್ನುವುದಕ್ಕೆ ನಿದರ್ಶನವಾಗಿದೆ.
ಶ್ರೀನಿವಾಸ ನಾಯಕ ಅವರ ಮರಳು ಸಂಗ್ರಹ ಕೇಂದ್ರದಲ್ಲಿ ಕೂಡಿ ಹಾಕಿ ಹಲ್ಲೆ ಮಾಡುತ್ತಿರುವ ಈ ಘಟನೆಯ ಚಿತ್ರೀಕರಣ ಮಾಡಿರುವುದು ಯಾರು ಎನ್ನುವುದೇ ಈಗ ಗಮನಾರ್ಹವಾಗಿದೆ. ಅಕ್ರಮ ಮರಳು ದಂಧೆ ಪ್ರಕರಣದಲ್ಲಿ ಶ್ರೀನಿವಾಸ ನಾಯಕ ಅವರು ಭಾಗೀಯಾಗಿದ್ದಾರೆ ಎನ್ನುವುದು ಇಲ್ಲಿವರೆಗೂ ಆರೋಪ ಮಾಡಲಾಗುತ್ತಿತ್ತು. ಈಗ ಈ ದಂಧೆಯಲ್ಲಿ ಅವರು ಪ್ರಮುಖರಾಗಿದ್ದಾರೆ ಎನ್ನುವುದು ಮತ್ತು ಅವರ ವಿರುದ್ಧ ಯಾರಾದರೂ ಧ್ವನಿಯೆತ್ತಿದ್ದರೇ, ಅವರ ವಿರುದ್ಧ ದೌರ್ಜನ್ಯ ಮಾಡಲಾಗುತ್ತದೆ ಎನ್ನುವುದಕ್ಕೆ ಈ ವಿಡಿಯೋ ವೈರಲ್ ಸಾಕ್ಷಿಯಾಗಿದೆ.

Leave a Comment