ಸಾಮಾಜಿಕ, ಆರ್ಥಿಕ ಭದ್ರತೆಗೆ ಜಲಾಶಯಗಳೇ ಬುನಾದಿ

ಬಳ್ಳಾರಿ, ಏ.25: ಸಾಮಾಜಿಕ ಮತ್ತು ಆರ್ಥಿಕ ಭದ್ರತೆಗೆ ಬುನಾದಿ ಜಲಾಶಯಗಳು. ಇಂತಹ ಜಲಾಶಯಗಳನ್ನು ಉಳಿಸಿ, ಸಂರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಬಿಐಟಿಎಂ ಕಾಲೇಜಿನ ಪ್ರೊ. ಡಾ.ಹೆಚ್. ಮಹಾಬಲೇಶ್ವರ ಹೇಳಿದರು.

ನಗರದ ಬಿಡಿಎಎ ಸಭಾಂಗಣದಲ್ಲಿಂದು ತುಂಗಭದ್ರ ರೈತ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ತುಂಗಭದ್ರ ಜಲಾಶಯದ 75 ನೇ ವರ್ಷದ ಅಮೃತ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತುಂಗಭದ್ರ ಜಲಾಶಯದಲ್ಲಿ ತುಂಬಿರುವ 33 ಟಿಎಂಸಿ ಹೂಳು ಎತ್ತಲು ಆಗದವರು ಇನ್ನೂ ಮತ್ತೊಂದು ಜಲಾಶಯ ನಿರ್ಮಾಣ ಮಾಡಲು ಸಾಧ್ಯವೆ. ಈ ನಿಟ್ಟಿನಲ್ಲಿ ಜಲಾಶಯದ ವ್ಯಾಪ್ತಿಯಲ್ಲಿ ಬರುವ ಕರ್ನಾಟಕದ ಮೂರು ಜಿಲ್ಲೆ ಮತ್ತು ಆಂಧ್ರಪ್ರದೇಶದ 4 ಜಿಲ್ಲೆಗಳ ಜನ ಇದರ ಸಂರಕ್ಷಣೆ ಮುಂದಾರಬೇಕು ಎಂದರು.

ಆಗಿನ ಕಾಲದ ಮದ್ರಾಸ್ ಸಂಸ್ಥಾನ, ಹೈದ್ರಾಬಾದ್ ಸಂಸ್ಥಾನ, ಮೈಸೂರು ಸಂಸ್ಥಾನ ಮತ್ತು ಮುಂಬೈ ಸಂಸ್ಥಾನ ಈ ನಾಲ್ಕು ಸಂಸ್ಥಾನಗಳಲ್ಲಿ ತುಂಗಭದ್ರಾ ಜಲಾಶಯ ನಿರ್ಮಿಸುವ ಬಗ್ಗೆ ಉಂಟಾದ ಹಲವು ಎಡರು ತೊಡರುಗಳ ಮಧ್ಯೆ ಸತತ 85 ವರ್ಷಗಳ ಪ್ರಯತ್ನದ ನಂತರ ಜಲಾಶಯಕ್ಕೆ ಅಡಿಗಲ್ಲು ಹಾಕಲಾಯಿತು. ಈ ಜಲಾಶಯ ನಿರ್ಮಾಣಕ್ಕೆ ಹಲವಾರು ರೈತರು, ಕೂಲಿಕಾರರು, ಅಧಿಕಾರಿಗಳು ಶ್ರಮವಹಿಸಿದ್ದಾರೆ. ಅವರ ಪರಿಶ್ರಮದಿಂದಲೇ ಇಂದು ಜಲಾಶಯವ ವ್ಯಾಪ್ತಿಯ ಜನ ಸುಖವಾಗಿ ಜೀವನ ಸಾಗಿಸುತ್ತಿದ್ದಾರೆ. ಜಲಾಶಯದ ಇತಿಹಾಸವನ್ನು ಯಾರೂ ಮರೆಬರದು ಎಂದು ತಿಳಿಸಿದರು.

ಕಾರ್ಖಾನೆ ವ್ಯಾಪ್ತಿಯಲ್ಲಿ ಒಟ್ಟು 21 ಕಾರ್ಖಾನೆಗಳು ತುಂಗಭದ್ರಾ ಜಲಾಶಯದ ನೀರನ್ನು ಬಳಕೆ ಮಾಡಿಕೊಳ್ಳುತ್ತಿವೆ. ಇವುಗಳಿಂದಲೂ ಸಹ ಕಾರ್ಖಾನೆಗಳ ಸುತ್ತಮುತ್ತಲಿನ ಗ್ರಾಮಗಳ ಜನತೆಗೆ ಉದ್ಯೋಗ ಸೃಷ್ಠಿ ಮಾಡಲಾಗಿದೆ. ಜಲಾಶಯದಿಂದ ಹಲವಾರು ಯುವಕರಿಗೆ ಮತ್ತು ರೈತರಿಗೆ ಉದ್ಯೋಗ ನೀಡಲಾಗಿದೆ ಎಂದು ಹೇಳಿದರು.

ನಾಡಿನ ಜನತೆಗೆ ಅನ್ನ ನೀಡುವ ತುಂಗಭದ್ರೆ ತಾಯಿಯನ್ನು ಯಾರೂ ಮರೆಯಬಾರದು. ಜಲಾಶಯದ ಉಳಿವಿಗೆ ಮತ್ತು ಅದರ ಸಂರಕ್ಷಣೆಗೆ ಇಂದು ಹೋರಾಟ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ನಾವು ಮುದಾಗಬೇಕಿದೆ ಎಂದು ಕರೆ ನೀಡಿದರು.

ಸಮಾರಂಭವನ್ನು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಶ್ರೀ ಜಗದ್ಗುರು ಸಂಗನಬಸವ ಮಹಾ ಸ್ವಾಮಿಗಳು ಉದ್ಘಾಟಿಸಿದರು. ಹಗರಿಬೊಮ್ಮನಹಳ್ಳಿಯ ನಂದಿಪುರದ ಮಹೇಶ್ವರ ಮಹಾ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಜಿಲ್ಲಾಧಿಕಾರಿ ಡಾ. ರಾಮ್ ಪ್ರಸಾತ್ ಮನೋಹರ್ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ತುಂಗಭದ್ರಾ ಜಲಾಶಯದ ನಿವೃತ್ತ ಅಧಿಕಾರಿಗಳಾದ ವಿ.ಪಿ ಉದ್ದಿಹಾಳ್, ಕೆ. ಗೋವಿಂದುಲು, ವಿ. ವೀರೇಶಯ್ಯ, ಜಿ. ಚೆನ್ನಬಸಪ್ಪ, ರಾಮರಾವ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇದೇ ವೇಳೆ ತುಂಗಭದ್ರಾ ಜಲಾಶಯದ ನಿವೃತ್ತ ಅಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಅಧ್ಯಕ್ಷ ದರೂರು ಪುರುಷೋತ್ತಮ ಗೌಡ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Leave a Comment