ಸಾಮಾಜಿಕ ಅಂತರ ಮರೆ – ಕೊರೊನಾಕ್ಕೆ ಕರೆ

ರಾಯಚೂರು.ಮೇ.22- ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಪ್ರಕರಣ ಹೆಚ್ಚುತ್ತಿದ್ದರೇ, ಮತ್ತೊಂದೆಡೆ ಜನ ಕನಿಷ್ಟ ಸಾಮಾಜಿಕ ಅಂತರ ಮುನ್ನೆಚ್ಚರಿಕೆ ಕಾಯ್ದುಕೊಳ್ಳುವ ಜಾಗೃತಿಯೂ ಅನುಸರಿಸದೇ, ಕೊರೊನಾಕ್ಕೆ ಸ್ವಯಂ ಆಹ್ವಾನ ನೀಡುತ್ತಿದ್ದಾರೆ.
ಕಳೆದ ಒಂದು ವಾರದ ಹಿಂದೆ ಶೂನ್ಯ ಕೊರೊನಾ ಪ್ರದೇಶವೆಂದೇ ಗುರುತಿಸಿಕೊಂಡಿದ್ದ ಜಿಲ್ಲೆ ಈಗ 16 ಪ್ರಕರಣಗಳ ತವರಾಗಿದೆ.
ಮುಂಬೈಯಿಂದ ಬಂದ ಎಲ್ಲಾ 16 ಪ್ರಕರಣಗಳು ಜಿಲ್ಲೆಯಲ್ಲಿ ಕೊರೊನಾ ಆತಂಕ ತೀವ್ರಗೊಳಿಸಿದ್ದರೇ, ಇಂದು ನಗರ ಸೇರಿದಂತೆ ಅನೇಕ ಕಡೆ ಅಮಾವಾಸ್ಯೆಯ ಸಡಗರ ಕೊರೊನಾ ನಿಯಮಗಳನ್ನೆಲ್ಲಾ ಗಾಳಿಗೆದೂರುವಂತಿತ್ತು. ಅಮಾವಾಸ್ಯೆಯ ಪೂಜಾ ಕಾರ್ಯಕ್ರಮಕ್ಕೆ ಕಾಯಿ ಮತ್ತಿತರ ಸಲಕರಣೆ ಖರೀದಿಸುವ ಜನರು ಗುಂಪು ಗುಂಪಾಗಿ ಅಂಗಡಿಗಳಿಗೆ ಮುಗಿಬಿದ್ದು, ಖರೀದಿ ಪ್ರಕ್ರಿಯೆಯಲ್ಲಿ ತೊಡಗಿದ್ದರು.
ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ವ್ಯಾಪಾರ ವಹಿವಾಟುಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕೆಂಬ ನಿಯಮವನ್ನು ಸ್ವತಃ ವ್ಯಾಪಾರಿಗಳೇ ಪಾಲಿಸದಿರುವುದು ಕಂಡು ಬಂದಿತು. ಕೊರೊನಾ ದೇಶಾದ್ಯಂತ ತೀವ್ರಗತಿಯಲ್ಲಿ ವ್ಯಾಪಿಸುತ್ತಿದ್ದರೇ, ಜಿಲ್ಲೆಯ ಜನರಿಗೆ ಮಾತ್ರ ಕೊರೊನಾ ಬಗ್ಗೆ ಡೋಂಟ್ ಕೇರ್ ಎನ್ನುವಂತೆ ವರ್ತಿಸುತ್ತಿದ್ದಾರೆ. ಕೊರೊನಾ ಪ್ರಕರಣ ಇಲ್ಲದಿದ್ದಾಗ ಜಿಲ್ಲೆಯಲ್ಲಿ ಕೈಗೊಂಡ ಬಿಗಿ ಭದ್ರತೆ ಈಗ ಮಾಯವಾಗಿ ಬೇಕಾಬಿಟ್ಟಿ ವರ್ತಿಸುತ್ತಿದ್ದಾರೆ.
60 ದಿನಗಳ ಪೊಲೀಸರು ಮತ್ತು ಜಿಲ್ಲಾಡಳಿತದ ಶ್ರಮ ಈ ಒಂದು ವಾರದಲ್ಲಿ ಹೊಳೆಯಲ್ಲಿ ಹುಳಿ ಹಿಂಡಿದಂತಾಗಿದೆ. ನಗರದಲ್ಲಿದ್ದ ಎಲ್ಲಾ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. ಮಧ್ಯಾಹ್ನದ ನಂತರ ಅಂಗಡಿ ಮುಂಗಟ್ಟು ಬಂದ್ ಮಾಡಲು ಆದೇಶಿಸಲಾಗಿದೆ. ಆದರೆ, ಮುಂಜಾನೆ ಸಮಯದಲ್ಲಿ ಜನರ ಗುಂಪು ಗೂಡುವಿಕೆ ಸಂಜೆ ವೇಳೆಗೆ ಕೊರೊನಾ ಪಾಸಿಟಿವ್ ಫಲಿತಾಂಶಕ್ಕೆ ದಾರಿ ಮಾಡಿದಂತಾಗಿದೆ.

Share

Leave a Comment