ಸಾಮಾಜಿಕ ಅಂತರ ಪಾಲಿಸದ ಸಚಿವರು, ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲು ಆಗ್ರಹ

ಬಳ್ಳಾರಿ, ಏ.7: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದ್ದು, ಅಲ್ಲದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಪರಿಪರಿಯಿಂದ ಬೇಡುತ್ತಿದ್ದರೂ ಸಹ ಈ ವಿಷಯದಲ್ಲಿ ಪದೇ ಪದೇ ಕಾನೂನು ಉಲ್ಲಂಘನೆ ಮಾಡುವಂತಹ ಆರೋಗ್ಯ ಸಚಿವ ಬಿ.ಶ್ರೀರಾಮುಲು ಹಾಗೂ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರು ಕೂಡಲೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಸಾಮಾಜಿಕ ಹೋರಾಟಗಾರ ಮೇಕಲ ಈಶ್ವರರೆಡ್ಡಿ ಒತ್ತಾಯಿಸಿದ್ದಾರೆ.

ನಗರದ 21 ನೇ ವಾರ್ಡ್‍ನಲ್ಲಿ ನಿನ್ನೆ ಅಲ್ಲಿನ ಮುಖಂಡ ಅಜೀಜ್ ಅವರ ನೇತೃತ್ವದಲ್ಲಿ ಸುಮಾರು 1500 ಮಂದಿಗೆ ಆಹಾರದ ಕಿಟ್ ವಿತರಣೆ ಸಂದರ್ಭದಲ್ಲಿ ಆಗಮಿಸಿದ್ದ ಆರೋಗ್ಯ ಸಚಿವ ಶ್ರೀರಾಮುಲು ಮತ್ತು ಶಾಸಕ ಸೋಮಶೇಖರ ರೆಡ್ಡಿ ಅವರು ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಗುಂಪು ಗುಂಪಾಗಿ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ಕಾನೂನು ಉಲ್ಲಂಘನೆ ಮಾಡಿ ಆಹಾರದ ಕಿಟ್ ವಿತರಿಸುವಂತಹ ಅವಶ್ಯಕತೆ ಏನಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ರಾಜ್ಯದ ಆರೋಗ್ಯ ಸಚಿವರಾಗಿ ದಿನನಿತ್ಯ ಪ್ರವಚನ ಹೇಳುವ ರೀತಿಯಲ್ಲಿ ಕೊರೊನಾ ಬಗ್ಗೆ ಮಾಧ್ಯಮಗಳಲ್ಲಿ ಬುದ್ಧಿಮಾತು ಹೇಳುವ ಜನಪ್ರತಿನಿಧಿಗಳೇ ಕಾನೂನು ಪಾಲನೆ ಮಾಡುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗು ಮಹಾ ನಗರ ಪಾಲಿಕೆ ಆಯುಕ್ತರಿಗೆ ದೂರು ನೀಡಲಾಗಿದೆ ಎಂದು ತಿಳಿಸಿದ ಅವರು, ಅಲ್ಲದೆ, ಆಹಾರದ ಕಿಟ್ ವಿತರಣೆ ವೇಳೆ ಸಂಬಂಧಪಟ್ಟ ಇಲಾಖೆ ಹಾಗು ಪೊಲೀಸ್ ಇಲಾಖೆ ಸಹಕಾರ ಪಡೆಯದೇ ಗುಂಪು ಗುಂಪಾಗಿ ಬಂದು ವಿತರಣೆ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.

ರಾಷ್ಟ್ರ ಮಟ್ಟದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಕೂಗಿಗೆ ಇಡೀ ದೇಶದ ಜನತೆ ಬದ್ಧರಾಗಿ ಸರಕಾರದ ವ್ಯವಸ್ಥೆಯಲ್ಲಿ ಆರ್ಥಿಕ ನಷ್ಟ ಕಂಡು ಬಂದರೂ ಕೂಡ ಕಾನೂನುಬದ್ಧವಾಗಿ ಸಾಮಾಜಿಕ ಅಂತರವನ್ನು ಪಾಲನೆ ಮಾಡುತ್ತಾ ಪ್ರಧಾನಮಂತ್ರಿಗಳಿಗೆ ಗೌರವವನ್ನು ನೀಡುತ್ತಿದ್ದಾರೆ. ಆದರೆ, ಒರ್ವ ಸಚಿವರಾಗಿ, ಶಾಸಕರಾಗಿ ಪ್ರಧಾನ ಮಂತ್ರಿಗಳಿಗೆ ಗೌರವ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೂಡಲೇ ಅವರ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅಲ್ಲದೆ, ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Leave a Comment