ಸಾಫ್ಟ್ ದಂಪತಿಗೆ ಬೆದರಿಸಿ ಲೂಟಿ ಐದು ಮಂದಿ ಸೆರೆ

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಆ. ೪- ಕುಡಿಯಲು ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಸಾಫ್ಟ್‌ವೇರ್ ಇಂಜಿನಿಯರ್ ದಂಪತಿಗೆ ಚಾಕು ತೋರಿಸಿ, ಬೆದರಿಸಿ ನಗದು, ಚಿನ್ನಾಭರಣಗಳನ್ನು ದೋಚಿದ್ದ ಐವರನ್ನು ಭಾರತಿನಗರ ಪೊಲೀಸರು ಬಂಧಿಸಿದ್ದಾರೆ.
ಶಿವಾಜಿನಗರದ ಶಾಂತಿನಿ ಚೌಕ್ ರಸ್ತೆಯ ಫಾರುಕ್ (24), ಲಿಂಗರಾಜಪುರಂನ ನದೀಮ್ ಖಾನ್ (22), ಭಾರತಿನಗರದ ರತನ್ ಅಲಿಯಾಸ್ ಕಾಕಾ (20) ಹಾಗೂ ಸುಲ್ತಾನ್‌ನಗರದ ಜವಾದ್ ಅಲಿ (21) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ 2 ಚಿನ್ನದ ಚೈನ್‌ಗಳು, 14 ವಿವಿಧ ಕಂಪನಿ ಕೈಗಡಿಯಾರಗಳು, ಒಂದೂವರೆ ಸಾವಿರ ನಗದು ಸೇರಿ 4 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಕಳೆದ ಜೂ. 25 ರಂದು ಸಂಜೆ 5ರ ವೇಳೆ ಹೆಚ್‌ಬಿಆರ್‌ಲೇಔಟ್‌ನ 5ನೇ ಮುಖ್ಯರಸ್ತೆಯ ಸಾಯಿ ಸುಮಾ ಅಪಾರ್ಟ್‌ಮೆಂಟ್‌ನ ಮನೆಯೊಂದರಲ್ಲಿ ವಾಸವಾಗಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಜೋನಾಥನ್ ಥಾಮಸ್ ಅವರನ್ನು ಕುಡಿಯಲು ನೀರು ಕೇಳಿದ್ದಾರೆ.
ಥಾಮಸ್ ಅವರು ನೀರು ತರಲು ಒಳ ಹೋದ ಕೂಡಲೇ ಮನೆಯೊಳಗೆ ನುಗ್ಗಿ ಚಾಕು ತೋರಿಸಿ ಥಾಮಸ್ ದಂಪತಿಯನ್ನು ಬೆದರಿಸಿ ಚಿನ್ನಾಭರಣಗಳು, ಕೈಗಡಿಯಾರಗಳನ್ನು ದೋಚಿ ಪರಾರಿಯಾಗಿದ್ದರು.
ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಭಾರತಿನಗರ ಪೊಲೀಸ್ ಇನ್ಸ್‌ಪೆಕ್ಟರ್ ವೀರೇಂದ್ರಕುಮಾರ್ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ಆರೋಪಿಗಳು ಮೋಜಿನ ಜೀವನ ನಡೆಸಲು ಮನೆಗಳ್ಳತನಕ್ಕಿಳಿದಿರುವುದು ತನಿಖೆಯಲ್ಲಿ ಕಂಡು ಬಂದಿದೆ. ಆರೋಪಿಗಳು ಇನ್ನು ಕೆಲವು ಮನೆಗಳವು ಕೃತ್ಯಗಳಲ್ಲಿ ಭಾಗಿಯಾಗಿರುವ ಮಾಹಿತಿ ಇದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

Leave a Comment