ಸಾಧಾರಣ ರನ್‍ಗೆ ಕುಸಿದ ಭಾರತ ವನಿತೆಯರು

ವಡೋದರ, ಅ 14 – ಮರಿಜಾನ್ನೆ ಕಪ್ (20 ಕ್ಕೆ 3) ಅವರ ಮಾರಕ ದಾಳಿಗೆ ನಲುಗಿದ ಭಾರತ ಮಹಿಳಾ ತಂಡ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಕ್ಕೆ ಸಾಧಾರಣ ಗುರಿ ನೀಡಿದೆ.

ಇಲ್ಲಿನ ರಿಲೆಯನ್ಸ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 45.5 ಓವರ್ ಗಳಲ್ಲಿ ತನ್ನೆಲ್ಲ ವಿಕೆಟ್‍ಗಳನ್ನು ಕಳೆದುಕೊಂಡು 146 ರನ್ ಗಳಿಸಿತು. ಆ ಮೂಲಕ ಪ್ರವಾಸಿ ತಂಡಕ್ಕೆ 147 ರನ್ ಗುರಿ ನೀಡಿತು.

ಬ್ಯಾಟಿಂಗ್ ಮಾಡಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಪ್ರಿಯಾ ಪೂನಿಯಾ(0) ಹಾಗೂ ಜೆಮಿಮಾ ರೋಡ್ರಿಗಸ್(3) ಅವರು ತಂಡದ ಮೊತ್ತ ಐದು ರನ್ ಆಗುವಷ್ಟರಲ್ಲಿ ವಿಕೆಟ್ ಒಪ್ಪಿಸಿದರು. ಪೂನಮ್ ರಾವತ್(15) ಹಾಗೂ ನಾಯಕಿ ಮಿಥಾಲಿ ರಾಜ್(11) ಬಹುಬೇಗ ಔಟ್ ಆದರು.

ಆದರೆ, ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡಿದ ಹರ್ಮನ್ ಪ್ರೀತ್ ಕೌರ್ ದಕ್ಷಿಣ ಆಫ್ರಿಕಾ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿದರು. ಒಂದು ತುದಿಯಲ್ಲಿ ವಿಕೆಟ್ ಉರುಳುತ್ತಿದ್ದರೂ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತ ಕೌರ್ ಅಮೋಘ ಬ್ಯಾಟಿಂಗ್ ಮಾಡಿದರು. 76 ಎಸೆತಗಳನ್ನು ಎದುರಿಸಿದ ಅವರು 38 ರನ್ ಗಳಿಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.

ಇವರನ್ನು ಬಿಟ್ಟರೆ, ಶಿಖಾ ಪಾಂಡೆ ಅವರು ಕೂಡ ಕೆಲಕಾಲ ಉತ್ತಮ ಬ್ಯಾಟಿಂಗ್ ಮಾಡಿದರು. 40 ಎಸೆತಗಳನ್ನು ಎದುರಿಸಿದ ಅವರು 35 ರನ್ ಗಳಿಸಿದರು. ಇನ್ನುಳಿದಂತೆ ಎಲ್ಲ ಬ್ಯಾಟ್ಸ್ ವುಮೆನ್‍ಗಳು ಹೆಚ್ಚು ಹೊತ್ತು ಕ್ರೀಸ್‍ನಲ್ಲಿ ಉಳಿಯಲಿಲ್ಲ.

ಆಫ್ರಿಕಾ ಪರ ಉತ್ತಮ ದಾಳಿ ನಡೆಸಿದ ಮರಿಜಾನ್ನೆ ಕಪ್ ಮೂರು ವಿಕೆಟ್ ಪಡೆದರು. ಶಬ್ನಿಮ್ ಉಸ್ಮಾಯಿಲ್ ಹಾಗೂ ಅಯಾಬೊಂಗ ಖಾಖ ತಲಾ ಎರಡು ವಿಕೆಟ್ ಪಡೆದರು.

ಭಾರತ (ಮ): 45.5 ಓವರ್ ಗಳಲ್ಲಿ 146/10 (ಹರ್ಮನ್ ಪ್ರೀತ್ ಕೌರ್ 38, ಶಿಖಾ ಪಾಂಡೆ 35; ಮರಿಜಾನ್ನೆ ಕಪ್ 20 ಕ್ಕೆ 3, ಶಬ್ನಿಮ್ ಇಸ್ಮಾಯಿಲ್ 18 ಕ್ಕೆ 2, ಖಾಖ 33 ಕ್ಕೆ 2)

Leave a Comment