ಸಾಧನೆ ಮಾಡಿದ ಯುವಕರಿಗೆ ವಿವೇಕಾನಂದ ಪ್ರಶಸ್ತಿ ನೀಡಿ

ಚಿತ್ರದುರ್ಗ, ಜ. 12 – ವಿವೇಕಾನಂದ ಜಯಂತಿಯಂದು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಂತ ಯುವಕರನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಶಸ್ತಿಗಳನ್ನು ನೀಡಿ ಗೌರವಿಸಬೇಕೆಂದು ಜಿಲ್ಲಾಡಳಿತಕ್ಕೆ ಶಾರದ ರಾಮಕೃಷ್ಣಾಶ್ರಮದ ಶ್ರೀ ಸ್ವಾಮಿ ಬ್ರಹ್ಮಾನಿಷ್ಟಾನಂದಜಿ ಸಲಹೆ ನೀಡಿದರು.
ನಗರದ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ 155ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಯುವ ಜನತೆಗೆ ಸ್ಪೂರ್ತಿ ವಿವೇಕಾನಂದರು. ಅಂತವರ ಆದರ್ಶಗಳನ್ನು ಇಂದಿನ ಯುವಜನತೆ ತೊಡಗಿಸಿಕೊಂಡು ಸಾಕಷ್ಟು ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಂತವರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದಲ್ಲಿ ಇನ್ನು ಹೆಚ್ಚಿನ ಯುವ ಜನತೆ ಸಮಾಜ ಸೇವೆಗಳಲ್ಲಿ ತೊಡಗುತ್ತಾರೆ ಎಂದರು.
ಯುವಜನತೆಯ ಶಕ್ತಿ ಏನೆಂಬುದನ್ನು ಸ್ವಾಮಿ ವಿವೇಕಾನಂದರು ತೋರಿಸಿಕೊಟ್ಟಂತಹ ಮಹಾನ್ ಚೇತನ ಎಂದ ಅವರು ನನ್ನಿಂದ ಏನು ಆಗುವುದಿಲ್ಲ ಎಂದು ಪರಿಶ್ರಮ ವಹಿಸದೆ ಸುಮ್ಮನೆ ಕುಳಿದಂತ ವ್ಯಕ್ತಿ ಇದ್ದು ಸತ್ತ ಹಾಗೆ ನನ್ನಿಂದ ಸಾಧ್ಯ ಎಂದು ಹೆಚ್ಚಿನ ಶ್ರಮವಹಿಸಿದ್ದಲ್ಲಿ ಸಾಧನೆ ಆ ವ್ಯಕ್ತಿಗೆ ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.
ಅಬ್ದುಲ್ ಕಲಾಂ, ಅಣ್ಣಾ ಹಜಾರೆ ಸೇರಿದಂತೆ ಇನ್ನು ಹಲವಾರು ಮಹಾನ್ ನಾಯಕರುಗಳು ತಮ್ಮಲ್ಲಿರುವ ಶಕ್ತಿಯನ್ನು ಅರಿತು ಮುನ್ನುಗ್ಗಿದರ ಫಲವಾಗಿ ಇಂದು ಬಹುದೊಡ್ಡ ಸ್ಥಾನಗಳನ್ನು ಅಲಂಕರಿಸಲು ಸಾಧ್ಯವಾಗಿದೆ. ಅವರಂತೆಯೇ ಯುವ ಜನತೆ ಮುನ್ನಡೆಯಬೇಕು. ಪರೀಕ್ಷೆಗಳಲ್ಲಿ ಅನುತ್ತೀರ್ಣರಾದೆ ಎಂದು ಆತ್ಮಹತ್ಯೆಗೆ ಶರಣಾಗುವುದು ಹೇಡಿತನ ಮತ್ತೊಮ್ಮೆ ಪರೀಕ್ಷೆ ಬರುತ್ತದೆ ಹೆಚ್ಚಿನ ಆಸಕ್ತಿ ವಹಿಸಿ ಅಭ್ಯಾಸ ಮಾಡುವುದರ ಮೂಲಕ ಉತ್ತಮ ಅಂಕಗಳಿಸುವುದರಲ್ಲಿ ಪರೀಕ್ಷೆಯನ್ನು ಬರೆಯುತ್ತೇನೆ ಎಂದು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಸೌಭಾಗ್ಯ ಬಸವರಾಜನ್ ಉದ್ಘಾಟಿಸಿದರು. ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ, ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎನ್.ರವೀಂದ್ರ, ವೆಂಕಟಶಿವರೆಡ್ಡಿ, ಡಿಡಿಪಿಐ ರೇವಣಸಿದ್ದಪ್ಪ, ಟಿ.ವಿ.ಸಣ್ಣಮ್ಮ, ಚಂದ್ರಪ್ಪ, ನಾಗರಾಜಪ್ಪ, ನಿಜಲಿಂಗಪ್ಪ ಸೇರಿದಂತೆ ಇತರರಿದ್ದರು.

Leave a Comment