ಸಾಧನೆಗೆ ಸತ್ಯಪಾಲನೆ ಮೂಲಮಂತ್ರವಾಗಲಿ – ವಾಲಾ

ಬೆಂಗಳೂರು, ಸೆ. ೧- ಬಂದೂಕಿನ ಮೂಲಕ ಏನನ್ನೂ ಸಾಧನೆ ಮಾಡಲು ಸಾಧ್ಯವಿಲ್ಲ ಎಂದಿರುವ ರಾಜ್ಯಪಾಲ ವಜುಬಾಯಿ ವಾಲಾ, ಜೀವನದ ಸಾಧನೆಗೆ ಸತ್ಯ ಪಾಲನೆ ಅಹಿಂಸೆಯೇ ಮೂಲಮಂತ್ರ ಅದನ್ನು ಎಲ್ಲರೂ ಪಾಲಿಸುವಂತೆ ಇಂದಿಲ್ಲಿ ಕರೆ ನೀಡಿದ್ದಾರೆ.

ಮಹಾತ್ಮ ಗಾಂಧೀಜಿ ಅವರು ಬೋಧಿಸಿದ ಅಹಿಂಸಾ ತತ್ವದಲ್ಲಿ ನಂಬಿಕೆ ಇಟ್ಟು ಜೀವನ ಸಾಗಿಸುವುದರಿಂದ ಯಶಸ್ಸು ಗಳಿಸಲು ಸಾಧ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಅಹಿಂಸಾ ಮಾರ್ಗವನ್ನು ಅಳವಡಿಸಿಕೊಳ್ಳುವುದು ಒಳಿತು ಎಂದು ಹೇಳಿದರು.

ಗಾಂಧಿನಗರದ ಭಾರತೀಯ ಶಿಕ್ಷಣ ಸಮಿತಿಯ ಹಿರಿಯ ಪ್ರಾಥಮಿಕ ಪಾಠಶಾಲೆಯ ವಜ್ರ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗೆ ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳನ್ನು ಅಂಕಗಳಿಸಲೆಂದೇ ತಯಾರು ಮಾಡುತ್ತಿದ್ದಾರೆ ಇದು ಸರಿಯಲ್ಲ. ಶಿಕ್ಷಣ, ಸಂಸ್ಕೃತಿಯನ್ನು ಕಲಿಸುವಂತಾಗಬೇಕು ಎಂದರು.

ಮಕ್ಕಳು ಶಾಲೆಗೆ ಚಿನ್ನವಾಗಿ ಬರುತ್ತಾರೆ. ಅವರನ್ನು ಶಾಲೆಯಿಂದ ಹೊರಹೋಗುವಾಗ ಚಿನ್ನದ ಗಟ್ಟಿಗಳನ್ನಾಗಿ ಮಾರ್ಪಾಡು ಮಾಡುವಂತಹ ಕೆಲಸಗಳನ್ನು ಶಿಕ್ಷಣ ಸಂಸ್ಥೆ ಮಾಡಬೇಕೆ ವಿನಹ ಬರೀ ಅಂಕಪಟ್ಟಿಗೆ ಸೀಮಿತಗೊಳಿಸುತ್ತಿರುವುದು ವಿಷಾದದ ಸಂಗತಿ ಎಂದು ಹೇಳಿದರು.

ಶಿಕ್ಷಣ ಪಡೆಯುವುದರಿಂದ ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆಯಲು ಸಹಕಾರಿಯಾಗಲಿದೆ. ಜೊತೆಗೆ ಜೀವನದ ಅಂಧಕಾರವನ್ನು ತೊಡೆದು ಬದುಕಿನಲ್ಲಿ ಹೊಸದಿಕ್ಕು ದೆಸೆಯತ್ತ ಹೋಗಲು ನೆರವಾಗಲಿದೆ ಎಂದರು.

ಶಿಕ್ಷಣ ಪಡೆಯುವುದರಿಂದ ಬರೀ ವೈಯಕ್ತಿಕವಾಗಿ ಅಷ್ಟೇಅಲ್ಲ, ರಾಷ್ಟ್ರದ ಅಭಿವೃದ್ಧಿಗೂ ಮಹತ್ವದ ಪಾತ್ರ ವಹಿಸಲು ನೆರವಾಗಲಿದೆ. ಮಕ್ಕಳಿಗೆ ಸಂಸ್ಕಾರ, ಮೌಲ್ಯಗಳನ್ನು ಹೇಳಿಕೊಡುವಂತಹ ಶಿಕ್ಷಣದ ಅಗತ್ಯವಿದೆ ಎಂದು ಹೇಳಿದರು.

ಅಮೆರಿಕದ ವಿಜ್ಞಾನ ಕ್ಷೇತ್ರದಲ್ಲಿ ಭಾರತೀಯರೇ ಮೇಲುಗೈ ಸಾಧಿಸಿದ್ದಾರೆ ಎಂದು ಹೇಳಿದ ಅವರು, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡುವುದರಿಂದ ಜಗತ್ತಿನ ಯಾವುದೇ ಮೂಲೆಗಳಲ್ಲೂ ಕೆಲಸ ಮಾಡುವ ಮತ್ತು ಸಾಧನೆ ಮಾಡುವಂತಹ ಅವಕಾಶ ಸಿಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷ ಪ್ರೊ. ಬಿ.ಆರ್. ಶೇಷಾದ್ರಿ ಅಯ್ಯಂಗಾರ್, ಮುಖ್ಯೋಪಾಧ್ಯಾಯಿನಿ ಆರ್. ಹೇಮಲತ, ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಚಾರ್ಲ್ಸ್ ಲೋಬೋ, ಮತ್ತಿತರರು ಉಪಸ್ಥಿತರಿದ್ದರು.

Leave a Comment