ಸಾಗರ ಮಾಲಾ ಕಾಮಗಾರಿಗೆ ವಿರೋಧ ಮೀನುಗಾರರ ಬಂಧನ

ಕಾರವಾರ, ಜ ೧೩- ಸಾಗರ ಮಾಲಾ ಯೋಜನೆಯ ಮೊದಲನೇ ಹಂತದ ಕಾಮಗಾರಿಯನ್ನು ಆರಂಭಿಸಿರುವುದನ್ನು ವಿರೋಧಿಸಿ ಮೀನುಗಾರರು ಇಂದು ದಿಢೀರ್ ಪ್ರತಿಭಟನೆ ನಡೆಸಿದರು. ಗೊಂದಲದ ವಾತಾವರಣ ನಿರ್ಮಾಣ ವಾಗುತ್ತಿದ್ದಂತೆ ನೂರಕ್ಕೂ ಹೆಚ್ಚು ಮೀನುಗಾರರನ್ನು ಪೊಲೀಸರು ಬಂಧಿಸಿದರು. ಇದರಿಂದ ಆಕ್ರೋಶಗೊಂಡ ಪ್ರತಿಭಟನಾ ನಿರತರು ಕಾರವಾರ ನಗರದಲ್ಲಿ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾನಿರತ ಮೀನುಗಾರರನ್ನು ಬಂಧಿಸುತ್ತಿದ್ದಂತೆ ನೂರಾರು ಮಹಿಳಾ ಮೀನುಗಾರರು ಕಾರವಾರ ವಾಣಿಜ್ಯ ಬಂದರಿನ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದಾಗ ಎಲ್ಲ ಮಹಿಳಾ ಮೀನುಗಾರರನ್ನು ಪೊಲೀಸರು ಬಂಧಿಸಿದಾಗ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.
ವಿರೋಧದ ನಡುವೆಯೂ 126 ಕೋಟಿ ರೂ.ವೆಚ್ಚದಲ್ಲಿ ಜಟ್ಟಿ ನಿರ್ಮಾಣದ ಕಾಮಗಾರಿಯನ್ನು ಆರಂಭಿಸಲಾಗಿದೆ. ಈ ಕಾಮಗಾರಿಗೆ ಮೀನುಗಾರರು ಅಡ್ಡಿಪಡಿಸಿದ ಕಾರಣ ಸ್ಥಳದಲ್ಲಿ 400 ಕ್ಕೂ ಹೆಚ್ಚು ಜನರನ್ನು ನಿಯೋಜಿಸಿ ಕಾಮಗಾರಿ ಮುಂದುವರೆಸಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
ಕಳೆದ 4 ತಿಂಗಳಿಂದ ಮೀನುಗಾರರು, ಸಾಗರ ಮಾಲಾ ಯೋಜನೆಗೆ ಪ್ರಬಲ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಯೋಜನೆ ಜಾರಿಗೆ ಬಂದರೆ ಮೀನುಗಾರರು ತಮ್ಮ ಸ್ಥಳ ಕಳೆದುಕೊಳ್ಳುವುದರ ಜೊತೆಗೆ ಸಾಂಪ್ರಾದಾಯಿಕ ಮೀನುಗಾರಿಕೆಗೆ ಹಿನ್ನೆಡೆಯಾಗಲಿದೆ. ಇದರಿಂದಾಗಿ ಕಾರವಾರದ ಕಡಲತೀರ ಸಂಪೂರ್ಣವಾಗಿ ಬದಲಾವಣೆಯಾಗಿ ತನ್ನ ಮೂಲ ರೂಪ ಕಳೆದುಕೊಳ್ಳುವ ಭೀತಿಯಿದೆ. ಅಲ್ಲದೇ ಈ ಯೋಜನೆಯಿಂದ ಪರಿಸರಕ್ಕೆ ಹಾನಿ ಹಾಗೂ ಮೀನುಗಾರರು, ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ ಎಂಬುದು ಮೀನುಗಾರರ ಆತಂಕಕ್ಕೆ ಕಾರಣವಾಗಿದೆ.
ಕಾಮಗಾರಿ ಕೈಗೆತ್ತಿಕೊಳ್ಳದಂತೆ ಬಂದರು ಇಲಾಖೆ ಹಾಗೂ ಸಂಬಂಧಪಟ್ಟ ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಈ ಕಾಮಗಾರಿಗೆ ಹಣ ಮಂಜೂರಾಗಿದ್ದು ಕೆಲಸ ಪ್ರಾರಂಭವಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಕಾಮಗಾರಿ ನಡೆಯುತ್ತಿದೆ.

Leave a Comment