ಸಾಕಪ್ಪ….ಸಾಕು ಜೆಡಿಎಸ್ ಸಹವಾಸ: ಬಿಎಸ್‌ವೈ

ಬೆಂಗಳೂರು, ಜು. ೧೨- ಜೆಡಿಎಸ್‌ನೊಂದಿಗೆ ಕೈ ಜೋಡಿಸಿ ಸರ್ಕಾರ ರಚನೆಗೆ ತೆರೆಮರೆಯಲ್ಲಿ ಯತ್ನಗಳು ನಡೆದಿವೆ ಎಂಬುದು ಶುದ್ಧ ಸುಳ್ಳು ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರು, ಜೆಡಿಎಸ್ ಸಹವಾಸ ಸಾಕಾಗಿದೆ, ಯಾವುದೇ ಕಾರಣಕ್ಕೂ ಅವರೊಂದಿಗೆ ಕೈ ಜೋಡಿಸಿ ಸರ್ಕಾರ ರಚಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯುವುದು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಡೋಲಾಯಮಾನ ಪರಿಸ್ಥಿತಿಯಲ್ಲಿರುವ ಸಮ್ಮಿಶ್ರ ಸರ್ಕಾರ ಸದ್ಯದಲ್ಲಿಯೇ ಪತನವಾಗಲಿದೆ ಎಂದು ಹೇಳಿದರು.
ಜೆಡಿಎಸ್ ಜತೆ ಈ ಹಿಂದೆ ಸರ್ಕಾರ ರಚಿಸಿ ಆಗಿರುವ ಕಹಿ ಅನುಭವವನ್ನು ಮರೆಯುವಂತಿಲ್ಲ. ಜೆಡಿಎಸ್‌ಗೆ ರಾಜಕೀಯ ಸಹವಾಸ ಸಾಕಾಗಿದೆ ಎಂದು ಅವರು ತಮ್ಮ ನಿವಾಸದಲ್ಲಿ ವರದಿಗಾರರೊಂದಿಗೆ ಮಾತನಾಡಿ ತಿಳಿಸಿದರು.
ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಕಳೆದ ರಾತ್ರಿ ಸಚಿವ ಸಾ.ರಾ. ಮಹೇಶ್ ಅವರಿಗೆ ಕುಮಾರ ಕೃಪಾ ಅತಿಥಿ ಗೃಹದಲ್ಲಿ ಭೇಟಿ ಮಾಡಿರುವ ಬಗ್ಗೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ ಎಂದವರು ಹೇಳಿದರು.

Leave a Comment