ಸಾಂಸ್ಕೃತಿಕ ನಗರಿಯಲ್ಲಿ ಲಾಕ್‌ಡೌನ್ ಯಶಸ್ವಿ

ಮೈಸೂರು, ಮೇ ೨೪- ಕೊರೊನಾ ವೈರಸ್ ಮಹಾಮಾರಿ ಪಿಡುಗನ್ನು ತಡೆಗಟ್ಟುವ ದಿಸೆಯಲ್ಲಿ ದೇಶಾದ್ಯಂತ 4ನೇ ಹಂತದ ಲಾಕ್‌ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಇಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಧಿಸಲಾಗಿದ್ದ ಲಾಕ್‌ಡೌನ್ ಯಶಸ್ವಿಯಾಗಿದೆ.
ನಗರಾದ್ಯಂತ ಇಂದು ಸಂಪೂರ್ಣ ಜನತಾ ಕರ್ಫ್ಯೂವನ್ನು ಘೋಷಿಸಿರುವುದರಿಂದ ಬಹುತೇಕ ಎಲ್ಲ ರಸ್ತೆಗಳಲ್ಲೂ ವಾಹನ ಸಂಚಾರ ಬಹಳ ವಿರಳವಾಗಿದೆ.
ಸಾರ್ವಜನಿಕರು ತಮಗೆ ಅವಶ್ಯವಿರುವ ಹಾಲು, ತರಕಾರಿ, ದಿನಸಿ, ಹಣ್ಣು, ಔಷಧಿಗಳನ್ನು ಖರೀದಿಸಲು ಯಾವುದೇ ನಿರ್ಬಂಧ ಹೇರಿಲ್ಲವಾದ್ದರಿಂದ ಸಾರ್ವಜನಿಕರಲ್ಲಿ ಕೊಂಚ ಸಮಾಧಾನ ಕಂಡು ಬಂದಿದೆ.
ಉಳಿದಂತೆ ಮನೆಗಳಲ್ಲಿರುವ 60 ವರ್ಷ ಮೇಲ್ಪಟ್ಟರು, ಮಕ್ಕಳು ತಮ್ಮ ಮನೆಗಳಲ್ಲೇ ಇದ್ದಾರೆ.
ಒಂದು ವೇಳೆ ಅನಾವಶ್ಯಕವಾಗಿ ರಸ್ತೆಗಳಲ್ಲಿ ಯಾರಾದರೂ ತಿರುಗಾಡುತ್ತಿರುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.
@12bc = ಬಾಡೂಟಕ್ಕೆ ಯಾವುದೇ ತೊಂದರೆ ಇಲ್ಲ
ನಾಳೆ ಬೆಳಿಗ್ಗೆ 7 ಗಂಟೆಯವರೆಗೆ ಸಂಪೂರ್ಣ ಲಾಕ್‌ಡೌನ್ ಇರುವುದರಿಂದ ಇಂದು ಬೆಳಿಗ್ಗೆಯಿಂದ ಸಂಜೆವರೆಗೆ ನಗರದಲ್ಲಿನ ಮಾಂಸ ಮಾರಾಟ ಅಂಗಡಿಗಳು ತೆರೆದಿದ್ದು, ಮಾಂಸಹಾರಿಗಳಿಗೆ ಬಾಡೂಟ ಮಾಡಲು ಯಾವುದೇ ತೊಂದರೆಯಾಗಿಲ್ಲ. ಸಾರ್ವಜನಿಕರು ತಮಗೆ ಸಮೀಪವಿರುವ ಮಾಂಸದಂಗಡಿಗಳಲ್ಲಿ ಮಾಂಸ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಕೋಳಿ ಮತ್ತು ಮೀನಿಗೆ ಬೇಡಿಕೆ ಕಡಿಮೆ ಇರುವುದು ಕಂಡು ಬಂತು.
ನಾಳೆ ಬೆಳಿಗ್ಗೆ 7 ಗಂಟೆಯವರೆಗೆ ಲಾಕ್‌ಡೌನ್ ಇರುವ ಹಿನ್ನೆಲೆಯಲ್ಲಿ ನಗರಾದ್ಯಂತ ಅಂಗಡಿ-ಮುಂಗಟ್ಟು, ವಾಣಿಜ್ಯ ವಹಿವಾಟುಗಳು ಸ್ಥಗಿತಗೊಂಡಿದ್ದು, ಬಸ್, ಟ್ಯಾಕ್ಸಿ, ಆಟೋ ರಿಕ್ಷಾಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಇಂದು ರಸ್ತೆ ಸುರಕ್ಷತೆಯಲ್ಲಿದ್ದ ಪೊಲೀಸರು ಸಾರ್ವಜನಿಕರಿಗೆ ಮಾಸ್ಕ್ ಹಾಕಿಕೊಂಡು ತಿರುಗಾಡುವಂತೆ ಬುದ್ಧಿವಾದ ಹೇಳಿದ್ದರಿಂದ ಓರ್ವ ಸೈಕಲ್ ಸವಾರ ಪೊಲೀಸರ ವಿರುದ್ದವೇ ತಿರುಗಿ ಬಿದ್ದು ಮಾತಿನ ಚಕಮಕಿ ನಡೆದ ಘಟನೆ ನಗರದ ಆಯುರ್ವೇದ ಆಸ್ಪತ್ರೆಯ ವೃತ್ತದಲ್ಲಿ ಸಂಭವಿಸಿದೆ.
ಇದನ್ನು ಗಮನಿಸಿದ ಇತರೆ ಸಾರ್ವಜನಿಕರು ಪೊಲೀಸರಿಗೆ ಬೆಂಬಲ ವ್ಯಕ್ತಪಡಿಸಿದ ಕಾರಣ ಸೈಕಲ್ ಸವಾರ ಹೆಚ್ಚು ವಾಗ್ವಾದಕ್ಕೆ ಇಳಿಯದೆ ಜಾಗ ಖಾಲಿ ಮಾಡಿದ್ದಾನೆ. ನಗರದ ಕೆ.ಆರ್. ವೃತ್ತದಲ್ಲಿ ಸುರಕ್ಷತೆಗಾಗಿ ನಿಯೋಜನೆಗೊಂಡಿದ್ದ ಪೊಲೀಸರು ಅನಗತ್ಯವಾಗಿ ತಿರುಗಾಡುತ್ತಿದ್ದ ಸಾರ್ವಜನಿಕರನ್ನು ವಾಪಸ್ ಕಳುಹಿಸುತ್ತಿದ್ದ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು.
ಒಟ್ಟಾರೆ ಮೈಸೂರು ನಗರದ ಜನತೆ ರಾಜ್ಯ ಸರ್ಕಾರ ಘೋಷಿಸಿರುವ 36 ಗಂಟೆಗಳ ಕರ್ಫ್ಯೂಗೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸುವ ಮೂಲಕ ನಗರದಲ್ಲಿ ಕರ್ಫ್ಯೂ ಸಂಪೂರ್ಣ ಯಶಸ್ವಿಯಾಗಿದೆ.

Share

Leave a Comment