ಸಹಾಯಾರ್ಥ ಸಂಗೀತ ಗೋಷ್ಠಿ

ಸಂಗೀತ ಪ್ರೇಮಿಗಳ ಮನತಣಿಸಲು ಧ್ವನಿ-ಬಿಕೆಎಫ್ ವತಿಯಿಂದ ನಡೆಸುವ ಪಂ. ಮಲ್ಲಿಕಾರ್ಜುನ ಮನ್ಸೂರ್ ಹಿಂದುಸ್ತಾನಿ ಸಂಗೀತೋತ್ಸವದ ೧೫ನೇ ಆವೃತ್ತಿಯನ್ನು ಈ ಬಾರಿ  ಸೆ ೧ ಮತ್ತು ೨ರಂದು ಬೆಂಗಳೂರಿನ ಜಯನಗರದ ೮ನೇ ಬ್ಲಾಕ್‌ನಲ್ಲಿರುವ ಜೆಎಸ್‌ಎಸ್ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ.

music-mutalik-desai-1

ಶ್ರೀ ದತ್ತಾತ್ರೇಯ ಮುತಾಲಿಕ್ ದೇಸಾಯಿ (ಕೊಳಲು), ಪಂ. ಸಂಜೀವ್ ಅಭ್ಯಂಕರ (ಗಾಯನ), ಪಂ. ಕೇದಾರ ನಾರಾಯಣ ಬೋಡಾಸ್ (ಗಾಯನ), ಕುಮಾರಿ ಅಂಕಿತಾ ಜೋಶಿ (ಗಾಯನ), ಪಂ. ಶುಭೇಂದ್ರ ರಾವ್ (ಸಿತಾರ್) ಹಾಗೂ ಶ್ರೀಮತಿ ಸಾಸ್ಕಿಯಾ ರಾವ್ (ಸೆಲ್ಲೋ) ಅವರು ಎರಡು ದಿನಗಳ ಸಂಗೀತ ಗೋಷ್ಠಿಯನ್ನು ನಡೆಸಿಕೊಡಲಿದ್ದಾರೆ. ಸಂಗೀತೋತ್ಸವದಲ್ಲಿ ಪಂ. ಕೇದಾರ ನಾರಾಯಣ ಬೋಡಾಸ್ ಅವರಿಗೆ ೨೦೧೮ನೇ ಸಾಲಿನ ಪ್ರತಿಷ್ಠಿತ “ಪಂ. ಮಲ್ಲಿಕಾರ್ಜುನ ಮನ್ಸೂರ್ ಪ್ರಶಸ್ತಿ” ಪ್ರಧಾನ ಮಾಡಿ ಗೌರವಿಸಲಾಗುತ್ತಿದೆ.

ಧ್ವನಿ – ಬಿಕೆಎಫ್ ಪಂ. ಮಲ್ಲಿಕಾರ್ಜುನ ಮನ್ಸೂರ್ ಹಿಂದುಸ್ತಾನಿ ಸಂಗೀತೋತ್ಸವವು ಹಿಂದುಸ್ತಾನಿ ಸಂಗೀತದ ಬಗ್ಗೆ ಯುವ ಸಮುದಾಯದಲ್ಲಿ ಆಸಕ್ತಿ ಬೆಳೆಸುವ ಹಾಗೂ ಬೆಂಗಳೂರಿನ ಸಂಗೀತ ಪ್ರೇಮಿಗಳಿಗೆ ಕೆಲ ಅಪರೂಪದ ಸಂಗೀತ ಸಾಧಕರನ್ನು ಆಲಿಸುವ ಅವಕಾಶವನ್ನು ಒದಗಿಸುವ ಪ್ರಯತ್ನವಾಗಿದೆ. ಅದರ ಜೊತೆಗೆ, ಬಿಕೆಎಫ್ ಡಯಾಲಿಸಿಸ್ ಯೋಜನೆಗೆ ನಿಧಿ ಸಂಗ್ರಹಿಸುವ ಉದ್ದೇಶವನ್ನೂ ಈ ಸಂಗೀತೋತ್ಸವ ಹೊಂದಿದೆ.

music-kedar-bodas1 ಸಂಗೀತೋತ್ಸವದ ೧೫ನೇ ಅವತರಣಿಕೆಯು ಸೆ ೧ರಂದು ಆರಂಭವಾಗಲಿದ್ದು, ಮೊದಲಿಗೆ ಅಂದು ಸಂಜೆ ೫ ಗಂಟೆಗೆ ಶ್ರೀ ದತ್ತಾತ್ರೇಯ ಮುತಾಲಿಕ್ ದೇಸಾಯಿ ಅವರಿಂದ ಕೊಳಲು ವಾದನ ಏರ್ಪಡಿಸಲಾಗಿದೆ. ನಂತರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಪಂ. ಕೇದಾರ ನಾರಾಯಣ ಬೋಡಾಸ್ ಅವರಿಗೆ ೨೦೧೮ನೇ ಸಾಲಿನ ಪ್ರತಿಷ್ಠಿತ“ಪಂ. ಮಲ್ಲಿಕಾರ್ಜುನ ಮನ್ಸೂರ್ ಪ್ರಶಸ್ತಿ” ಪ್ರದಾನ ಮಾಡಲಾಗುತ್ತದೆ. ನಂತರ ಪಂ. ಸಂಜೀವ ಅಭ್ಯಂಕರ್ ಅವರಿಂದ ಗಾಯನ ಗೋಷ್ಠಿ ನಡೆಯಲಿದೆ.

ಮರುದಿನ ಬೆಳಿಗ್ಗೆ ೨ರಂದು ೧೦ ಗಂಟೆಯಿಂದ ೧೨ ಗಂಟೆಯವರೆಗೆ ಪಂ. ಕೇದಾರ ನಾರಾಯಣ ಬೋಡಾಸ್ ಅವರಿಂದ ಹಿಂದುಸ್ತಾನಿ ಗಾಯನ ಕಛೇರಿ ಏರ್ಪಡಿಸಲಾಗಿದೆ. ಅದೇ ದಿನ ಸಂಜೆ ೫.೧೫ರಿಂದ ೭.೧೫ರ ವರೆಗೆ ಕುಮಾರಿ ಅಂಕಿತಾ ಜೋಶಿ ಅವರಿಂದ ಹಿಂದುಸ್ತಾನಿ ಗಾಯನ ಗೋಷ್ಠಿಯಿದೆ. ನಂತರ ೭.೩೦ರಿಂದ ೯.೩೦ರ ವರೆಗೆ ಪಂ. ಶುಭೇಂದ್ರ ರಾವ್ ಹಾಗೂ ಶ್ರೀಮತಿ ಸಾಸ್ಕಿಯಾ ರಾವ್‌ಅವರಿಂದ ಸಿತಾರ್ ಮತ್ತು ಸೆಲ್ಲೋ ವಾದನ ನಡೆಯಲಿದೆ.

ಪಂ. ಕೇದಾರ ನಾರಾಯಣ ಬೋಡಾಸ್ ಅವರು ದೇಶದ ಪ್ರಸಿದ್ಧ ಹಿಂದುಸ್ತಾನಿ ಸಂಗೀತಗಾರರಾಗಿದ್ದು, ಗ್ವಾಲಿಯರ್ ಮತ್ತು ಆಗ್ರಾ ಘರಾಣೆಯ ಶಿಕ್ಷಕರಾಗಿದ್ದಾರೆ. ಅವರು ರಾಗ, ತಾಳ ಮತ್ತು ಬಂದಿಶ್‌ನಂತಹ ಮೂಲಭೂತ ಸಂಗತಿಗಳನ್ನು ಆಳವಾಗಿ ಅಭ್ಯಾಸ ಮಾಡಿರುವ ಗಂಭೀರ ಸಂಗೀತಜ್ಞರಾಗಿದ್ದಾರೆ. ಹಲವಾರು ಸಾಕ್ಷ್ಯಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಷ್ಟೇ ಅಲ್ಲ, ಅನೇಕ ರಷ್ಯನ್ ಶಾಸ್ತ್ರೀಯ ಸಂಗೀತ ಹಾಗೂ ಜಾನಪದ ಸಂಗೀತಗಳನ್ನು ಹಾಡಿದ್ದು, ರಷ್ಯನ್ ಏಕಾಂಕ ನಾಟಕಗಳಲ್ಲೂ ಅಭಿನಯಿಸಿದ್ದಾರೆ. ಪಂ. ಮಲ್ಲಿಕಾರ್ಜುನ ಮನ್ಸೂರ್ ಪ್ರಶಸ್ತಿಯು ಒಂದು ಲಕ್ಷ ರು. ನಗದು, ಬಿನ್ನವತ್ತಳೆ, ಶಾಲು ಹಾಗೂ ಪಂ. ಮಲ್ಲಿಕಾರ್ಜುನ ಮನ್ಸೂರ್ ಅವರ ಕಂಚಿನ ಪುತ್ಥಳಿಯ ಸ್ಮರಣಿಕೆಯನ್ನು ಒಳಗೊಂಡಿದೆ.
music-pt-sanjeev-abhyankar

ಬೆಂಗಳೂರು ಕಿಡ್ನಿ ಫೌಂಡೇಶನ್ (ಬಿಕೆಎಫ್) ೨೦೦೪ರಿಂದ ಹಿಂದುಸ್ತಾನಿ ಸಂಗೀತ ಕ್ಷೇತ್ರದ ದಿಗ್ಗಜ ಪಂ. ಮಲ್ಲಿಕಾರ್ಜುನ ಮನ್ಸೂರ್ ಅವರ ಸ್ಮರಣಾರ್ಥ ಈ ಸಂಗೀತೋತ್ಸವವನ್ನು ಆಯೋಜಿಸುತ್ತ ಬಂದಿದೆ. ಇದು ಈಗ ಬೆಂಗಳೂರಿನ ವಾರ್ಷಿಕ ಸಂಗೀತ ವೇಳಾಪಟ್ಟಿಯಲ್ಲಿ ನಿಶ್ಚಿತ ಕಾರ್ಯಕ್ರಮವಾಗಿ ಮನೆಮಾತಾಗಿದೆ. ಯುವಕರಲ್ಲಿ ಹಿಂದುಸ್ತಾನಿ ಸಂಗೀತದ ಬಗ್ಗೆ ಆಸಕ್ತಿ ಮೂಡಿಸುವುದಷ್ಟೇ ಅಲ್ಲದೆ, ಈ ಕಾರ್ಯಕ್ರಮದಿಂದ ಸಂಗ್ರಹವಾಗುವ ನಿಧಿಯನ್ನು ಬಿಕೆಎಫ್‌ನ “ದಿನಕ್ಕೊಂದು ಉಚಿತ ಡಯಾಲಿಸಿಸ್” ಯೋಜನೆಗೆ ಬಳಸುವುದರಿಂದ ಸಾಮಾಜಿಕ ಕಾಳಜಿಯನ್ನೂ ಇದು ಹರಡುತ್ತಿದೆ.

೨೦೦೭ರಿಂದ ಇಲ್ಲಿಯವರೆಗೆ ಬಿಕೆಎಫ್ ಬೆಂಗಳೂರಿನ ವಿವಿಧ ಡಯಾಲಿಸಿಸ್ ಕೇಂದ್ರಗಳಲ್ಲಿ ೩೮,೩೭೩ ಉಚಿತ ಡಯಾಲಿಸಿಸ್‌ಗೆ ಪ್ರಾಯೋಜಕತ್ವ ನೀಡಿದೆ. ಜೊತೆಗೆ ರಂಗದೊರೆ ಸ್ಮಾರಕ ಆಸ್ಪತ್ರೆಯಲ್ಲಿ ೨,೧೮,೫೨೦ ರಿಯಾಯ್ತಿ ದರದ ಡಯಾಲಿಸ್‌ಗೆ ನೆರವು ನೀಡಿದೆ. ಶ್ರೀ ಶೃಂಗೇರಿ ಮಠದ ರಂಗದೊರೆ ಮೆಮೋರಿಯಲ್ ಹಾಸ್ಪಿಟಲ್‌ನ ಡಯಾಲಿಸಿಸ್ ಕೇಂದ್ರದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರಿಗಾಗಿ ಬಿಕೆಎಫ್ ಪ್ರತಿ ತಿಂಗಳು ಸುಮಾರು ೨೫೦೦ ಡಯಾಲಿಸಿಸ್ ನಡೆಸುತ್ತದೆ.

music-ankita-joshi1ಇದರ ಜೊತೆಗೆ, ೧೨ರಿಂದ ೧೬ ವಯಸ್ಸಿನ ಶಾಲಾ ಮಕ್ಕಳಲ್ಲಿ ಮೂತ್ರಪಿಂಡ ಸಂಬಂಧಿ ರೋಗಗಳನ್ನು ಪತ್ತೆಹಚ್ಚಲು ಬಿಕೆಫ್ “ಪ್ರಿವೆನ್ಷನ್ ಈಸ್ ಕ್ಯೂರ್” ಎಂಬ ಕಾರ್ಯಕ್ರಮ ನಡೆಸುತ್ತಿದೆ. ಈ ಯೋಜನೆಯಡಿ ಕಳೆದ ೧೮ ತಿಂಗಳಲ್ಲಿ ಒಟ್ಟು ೧೬ ಶಾಲೆಗಳ ಸುಮಾರು ೪೦೦೦ ವಿದ್ಯಾರ್ಥಿಗಳನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಗಣನೀಯ ಪ್ರಮಾಣದ ವಿದ್ಯಾರ್ಥಿಗಳಲ್ಲಿ ಮೊದಲ ಹಂತದ ತೀವ್ರತರ ಕಿಡ್ನಿ ರೋಗವಾದ ಪ್ರೊಟೀನ್ ಯೂರಿಯಾ ಸಮಸ್ಯೆ ಪತ್ತೆಯಾಗಿದೆ. ದೇಣಿಗೆ ಪಾಸ್‌ಗಳನ್ನು  ೨೬೬೧೪೮೪೮ / ೨೬೯೮೧೦೮೬/ ೮೯೭೧೭ ೮೯೧೬೯ರಲ್ಲಿ ಸಂಪರ್ಕಿಸಬಹುದು.

Leave a Comment