ಸಹಜ ಸ್ಥಿತಿಗೆ ಮರಳುತ್ತಿರುವ ಮೈಸೂರು ಜಿಲ್ಲೆ

ಮೈಸೂರು. ಆ.13: ಕಳೆದ ಒಂದು ವಾರದಿಂದ ಧಾರಾಕಾರ ಮಳೆ ಮತ್ತು ಪ್ರವಾಹದಿಂದ ನಲುಗಿದ್ದ ಮೈಸೂರು ಜಿಲ್ಲೆ ಇದೀಗ ಸಹಜ ಸ್ಥಿತಿಯತ್ತ ಮರಳಿದೆ. ಜಿಲ್ಲೆಯ ನಂಜನಗೂಡು ಹೆಚ್,ಡಿ ಕೋಟೆ, ಪಿರಿಯಾಪಟ್ಟಣ, ಹುಣಸೂರು, ಟಿ.ನರಸೀಪುರ ಸೇರಿ ವಿವಿಧ ತಾಲೂಕುಗಳಲ್ಲಿ ಅಬ್ಬರಿಸಿದ್ದ ಪ್ರವಾಹ ಈಗ ತಣ್ಣಗಾಗಿದೆ.
ನಂಜನಗೂಡಿನಲ್ಲಿ ಪ್ರವಾಹ ತಗ್ಗಿದ್ದು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಸಾವಿರಾರು ಸಂತ್ರಸ್ತರು ಈಗ ಮರಳಿ ಮನೆಗಳತ್ತ ತೆರಳುತ್ತಿದ್ದಾರೆ. ನಂಜನಗೂಡು ತಾಲೂಕಿನ ಹತ್ತು ಪರಿಹಾರ ಕೇಂದ್ರಗಳಿಂದಲೂ ಸಂತ್ರಸ್ತರು ನಿನ್ನೆ ರಾತ್ರಿಯಿಂದಲೇ ಹೋಗುತ್ತಿದ್ದಾರೆ.
ಮನೆಗಳು ಸಂಪೂರ್ಣ ಮುಳುಗಡೆಯಾಗಿರುವ ಕುಟುಂಬ ಮಾತ್ರ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಹತ್ತು ಪರಿಹಾರ ಕೇಂದ್ರಗಳಲ್ಲಿ 2 ಸಾವಿರ ಮಂದಿ ಸಂತ್ರಸ್ತರು ಆಶ್ರಯ ಪಡೆದಿದ್ದರು. ನಂಜನಗೂಡು ಪ್ರವಾಹಕ್ಕೂ ಸರಿ ಸುಮಾರು ಐನೂರಕ್ಕೂ ಮನೆಗಳು ಮುಳುಗಡೆಯಾಗಿದ್ದವು. ಐವತ್ತಕ್ಕೂ ಹೆಚ್ಚು ಮನೆಗಳು ಕುಸಿದಿದ್ದವು. ಈಹ ಪ್ರವಾಹದಲ್ಲಿ ಸಿಲುಕಿರುವ ಮನೆಗಳ ಸ್ಥಿತಿ ನೋಡಲು ಸಂತ್ರಸ್ಥರು ಮರಳಿ ಮನೆಗಳತ್ತ ಧಾವಿಸುತ್ತಿದ್ದಾರೆ.
ಹೆಚ್.ಡಿ ಕೋಟೆಯಲ್ಲಿನ ಕಬಿನಿ ಡ್ಯಾಂಗೆ 40ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು ಜಲಾಶಯದಿಂದ 22ಸಾವಿರ ಕ್ಯೂಸೆಕ್ಸ್ ನೀರು ನದಿಗೆ ಹರಿಯ ಬಿಡಲಾಗುತ್ತಿದೆ. ಕೇರಳದ ವೈನಾಡಿನಲ್ಲಿ ಮಳೆಯ ಪ್ರಮಾಣ ತಗ್ಗಿದ್ದು, ಮೈಸೂರಿನಾದ್ಯಂತ ಕಪಿಲಾ, ಕಾವೇರಿ, ಲಕ್ಷ್ಮಣ ತೀರ್ಥ ನದಿಗಳು ಶಾಂತವಾಗಿವೆ.
ಮಳೆಯ ಪ್ರವಾಹಕ್ಕೆ ಕಾವೇರಿ ನದಿ ಪಾತ್ರದಲ್ಲಿ ನೂರಾರು ಕುಟುಂಬಕ್ಕೆ ಅಪಾರ ಪ್ರಮಾಣದ ನಷ್ಟವಾಗಿದೆ. ನೂರಾರು ಮಂದಿ ಪರಿಹಾರ ಕೇಂದ್ರ ಸೇರಿದ್ದಾರೆ. ಬೆಳೆ, ಆಸ್ತಿ- ಪಾಸ್ತಿ ಹಾನಿಯಿಂದ ಕಂಗಾಲಾಗಿರುವ ನಿರಾಶ್ರಿತರು, ಮುಂದೇನೂ ತಿಳಿಯದ ಸ್ಥಿತಿಯಲ್ಲಿ ದಿನ ದೂಡುವಂತಾಗಿದೆ. ಪ್ರವಾಹದಿಂದ ತತ್ತರಿಸಿದ ಬೆಳೆಗಾರರು ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ. ನೂರಾರು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ದಿನಬಳಕೆ ವಸ್ತುಗಳು ನೀರು ಪಾಲಾಗಿವೆ. ಮರು ಬಳಕೆಗೂ ಉಪಯೋಗವಿಲ್ಲದ ಸ್ಥಿತಿಯಲ್ಲಿರುವ ಸಾಮಗ್ರಿಗಳು ನೀರಲ್ಲಿ ತೇಲಾಡುತ್ತಿವೆ.
ರೈತರ ಹೊಲಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಪಾಡಂತೂ ಹೇಳ ತೀರದಾಗಿದೆ. ನೀರಿನ ರಭಸಕ್ಕೆ ಮಣ್ಣಿನ ಮೇಲ್ಪದರ ಹಾಗೂ ಡಾಂಬರು ರಸ್ತೆ, ಕಾಂಕ್ರೀಟ್ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ದುರಸ್ತಿಯಾಗಲು ತಿಂಗಳುಗಳೇ ಬೇಕಿವೆ. ಪ್ರವಾಹದಲ್ಲಿ ಹಂದಿ, ಆಡು, ಹಸು ಸೇರಿದಂತೆ ನೂರಾರು ಪ್ರಾಣಿಗಳು ಮೃತಪಟ್ಟಿವೆ. ರಸ್ತೆಯಲ್ಲಿಯೇ ಕೆಸರು ಮತ್ತು ತ್ಯಾಜ್ಯದ ರಾಶಿ ಬಿದ್ದಿದ್ದು, ಜನರಿಗೆ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ. ರೋಗಗಳು ಹರಡುವುದನ್ನು ತಡೆಗಟ್ಟಲು ಈಗಾಗಲೇ ಆರೋಗ್ಯ ಇಲಾಖೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಜಲಾಶಯಗಳ ಇಂದಿನ ನೀರಿನ ಮಟ್ಟ
ಕಳೆದ ಹಲವಾರು ದಿನಗಳಿಂದ ಸುರಿಯುತ್ತಿದ್ದ ಭಾರೀ ಮಳೆಯ ಈಗ ಕೆಲವೆಡೆ ವಿಶ್ರಾಂತಿ ಪಡೆದಿದೆ. ಇನ್ಕೆಲವು ಕಡೆ ಸುರಿಯುತ್ತಲೇ ಇದೆ. ಭಾರೀ ಪ್ರವಾಹ ತಂದೊಡ್ಡಿದ್ದ ಮಳೆಯೀಗ ಸ್ವಲ್ಪ ಕ್ಷೀಣವಾಗಿದೆ.
ಭಾರೀ ಮಳೆಯಿಂದ ಹಲವು ಜಲಾಶಯಗಳು ತುಂಬಿಕೊಂಡು ನೀರನ್ನು ಹೊರಗೆ ಬಿಡಲಾಗಿತ್ತು. ಜಲಾಶಯದಲ್ಲಿರುವ ಇಂದಿನ ನೀರಿನ ವಿವರ ಹೀಗಿದೆ.
ಕಬಿನಿ ಜಲಾಶಯ
ಜಲಾಶಯದ ಇಂದಿನ ಒಳಹರಿವು 39.900 ಕ್ಯೂಸೆಕ್. ಜಲಾಶಯದ ಇಂದಿನ ಹೊರಹರಿವು 30.000 ಕ್ಯೂಸೆಕ್, ಜಲಾಶಯದ ಇಂದಿನ ನೀರಿನ ಮಟ್ಟ 228.10 ಅಡಿ, ಜಲಾಶಯದ ಗರಿಷ್ಠ ನೀರಿನ ಮಟ್ಟ 2284 ಅಡಿ, ಜಲಾಶಯದ ಒಟ್ಟು ನೀರಿನ ಸಂಗ್ರಹ ಸಾರ್ಮಥ್ಯ 19.52 ಟಿಎಂಸಿ, ಜಲಾಶಯದಲ್ಲಿ ಇಂದು ಇರುವ ನೀರಿನ ಸಂಗ್ರಹ 18.01 ಟಿಎಂಸಿ
ಕೆ.ಆರ್.ಎಸ್ ಜಲಾಶಯ
ಗರಿಷ್ಟ ಮಟ್ಟ: 124.80, ಪ್ರಸ್ತುತ ಮಟ್ಟ:123.70, ಒಳಹರಿವು: 90,318, ಹೊರ ಹರಿವು: 2,208, ಪ್ರಸ್ತುತ ಸಂಗ್ರಹ. 47.926 ಟಿಎಂಸಿ
ಹಾರಂಗಿ ಜಲಾಶಯ
ಹಾರಂಗಿ ಜಲಾಶಯದ ಇಂದಿನ ನೀರಿನ ಮಟ್ಟ 2,855.74, ಕಳೆದ ವರ್ಷ ಇದೇ ದಿನ ನೀರಿನ ಮಟ್ಟ 2,857.10, ಹಾರಂಗಿ ಜಲಾಶಯದ ನೀರಿನ ಒಳಹರಿವು 8,746, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 24,127, ಹಾರಂಗಿ ಜಲಾಶಯದ ನೀರಿನ ಹೊರ ಹರಿವು ನದಿಗೆ 2,609, ನಾಲೆಗೆ 850 ಕ್ಯೂಸೆಕ್, ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 19,002, ನಾಲೆಗೆ 1000 ಕ್ಯೂಸೆಕ್, ಜಲಾಶಯದ ಗರಿಷ್ಠ ಮಟ್ಟ 2,859 ಅಡಿ, ಜಲಾಶಯದಲ್ಲಿ ಇದುವರೆಗೆ ಸಂಗ್ರಹವಾದ ನೀರು 7,396,81 ಟಿಎಂಸಿ ಇದೆ.
ಕಾಡೆಮ್ಮೆ ಬಲಿ
ಧಾರಾಕಾರ ಮಳೆಗೆ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದ್ದು ಸಾಕಷ್ಟು ಅವಾಂತರ ಸೃಷ್ಟಿಸಿವೆ. ಈ ನಡುವೆ ವರುಣನ ಆರ್ಭಟಕ್ಕೆ ಕಾಡೆಮ್ಮೆಯೊಂದು ಬಲಿಯಾಗಿರುವ ಘಟನೆ ಹುಣಸೂರಿನ ವೀರನಹೊಸಹಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.
ಭಾರೀ ಮಳೆ ಹಿನ್ನೆಲೆ ಲಕ್ಷ್ಮಣ ತೀರ್ಥ ನದಿಯಲ್ಲಿ ಕಾಡೆಮ್ಮೆ ಮೃತಪಟ್ಟು ನೀರಿನಲ್ಲಿ ತೇಲಿ ಬಂದಿದೆ ಎಂದು ಹೇಳಲಾಗುತ್ತಿದೆ. ರಾಷ್ಟ್ರೀಯ ಉದ್ಯಾನವನ ನಾಗರಹೊಳೆಯ ನೀರಿನಲ್ಲಿ ಕಾಡೆಮ್ಮೆ ಶವ ತೇಲಿ ಬಂದಿದ್ದು, ಇದನ್ನು ಕಂಡ ಕೆಲ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕಾಡೆಮ್ಮೆ ಸಾವಿನ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Leave a Comment