ಸಹಕಾರ ಸಂಘಗಳ ಪ್ರಗತಿಗೆ ಸಲಹೆ

ತುಮಕೂರು, ಸೆ. ೧೦- ಸಹಕಾರ ಸಂಘವು ಇನ್ನಷ್ಟು ಅಭಿವೃದ್ಧಿ ಹೊಂದಿ ಸಮಾಜದ ಬಂಧುಗಳಿಗೆ ಹಾಗೂ ಸದಸ್ಯರಿಗೆ ಸಹಕಾರ ನೀಡಲಿ ಎಂದು ನಿವೃತ್ತ ನ್ಯಾಯಾಧೀಶರಾದ ನಾರಾಯಣಾಚಾರ್ಯ ಹೇಳಿದರು.

ನಗರದ ಸಿದ್ದಗಂಗಾ ಬಾಲಕರ ಕಾಲೇಜಿನ ಶ್ರೀ ಶಿವಕುಮಾರಸ್ವಾಮಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಶ್ರೀ ವಿಶ್ವಕರ್ಮ ಪತ್ತಿನ ಸಹಕಾರ ಸಂಘದ 8ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ವಾಸುದೇವಯ್ಯ ಮಾತನಾಡಿ, ಸದಸ್ಯರು ಸಂಘದಲ್ಲಿ ಹೆಚ್ಚು ಹೆಚ್ಚು ವ್ಯವಹರಿಸಬೇಕು. ಹಾಗೆಯೇ ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡುವ ಮುಖಾಂತರ ಸಂಘದ ಅಭಿವೃದ್ಧಿಗೆ ಕಾರಣಕರ್ತರಾಗಬೇಕು. ಈ ವರ್ಷವು ಸುಮಾರು 2.5 ಕೋಟಿ ರೂ. ವ್ಯವಹಾರ ನಡೆಸಿ ಸುಮಾರು 3.39 ಲಕ್ಷ ಲಾಭ ಗಳಿಸಿದೆ. ಹಾಗೆಯೇ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗಿ ಪ್ರಯೋಜನ ಪಡೆಯಬೇಕು ಎಂದರು.

ಉಪಾಧ್ಯಕ್ಷ ಊರ್ಡಿಗೆರೆ ಆರ್. ಚಂದ್ರಚಾರ್ ಮಾತನಾಡಿ, ಈ ವರ್ಷದಿಂದ ಸಂಘದ ಆಡಳಿತ ವ್ಯವಸ್ಥೆಯನ್ನು ಗಣಕೀಕರಣಗೊಳಿಸಲಾಗಿದೆ. ಸಂಘದ ಕಾರ್ಯ ವ್ಯಾಪ್ತಿಯನ್ನು ತಾಲ್ಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ವಿಸ್ತರಿಸಲಾಗಿದ್ದು, ಎಲ್ಲಾ ತಾಲ್ಲೂಕುಗಳಲ್ಲಿಯೂ ಒಂದೊಂದು ಶಾಖೆಯನ್ನು ತೆರೆಯುವ ಉದ್ದೇಶವಿದೆ.

ಆದ್ದರಿಂದ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಜನ ಸಂಘದ ಸದಸ್ಯರುಗಳಾಗಿ ಶಾಖೆ ತೆರೆಯಲು ಸಹಕರಿಸಬೇಕು. ಪ್ರತಿ ವರ್ಷ ಜಿಲ್ಲೆಯ ಯಾವುದಾದರೊಂದು ಪ್ರಾಥಮಿಕ ಶಾಲೆಯನ್ನು ಗುರುತಿಸಿ ಆ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಅಥವಾ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ಮೂಲಕ ದೇಶ ಪ್ರೇಮವನ್ನು ಸಾರೋಣ ಎಂದರು.

ಇದೇ ಸಂದರ್ಭದಲ್ಲಿ ಎಸ್ಎಸ್ಎಲ್‌ಸಿ. ಮತ್ತು ಪಿಯುಸಿ ಹಾಗೂ ಪದವಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪುರಸ್ಕರಿಸಲಾಯಿತು. ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.

ಸಭೆಯಲ್ಲಿ ಸಂಘದ ನಿರ್ದೇಶಕರಾದ ಎಲ್. ಚಂದ್ರಚಾರ್, ನಾಗರಾಜಚಾರ್, ಅನಂತಮೂರ್ತಿ, ವೆಂಕಟನರಸಪ್ಪಚಾರ್, ಕಾಂತರಾಜು, ದಯಾನಂದಮೂರ್ತಿ, ಸಿ.ಯು. ಶೈಲಜಾ, ಕೆ.ವಿ. ಶಶಿಕಲಾ, ನಾಗೇಶ್ ಹಾಗೂ ಕಾನೂನು ಸಲಹೆಗಾರರಾದ ಪೂರ್ಣಿಮಾ ಮತ್ತಿತರರು ಉಪಸ್ಥಿತರಿದ್ದರು

Leave a Comment