ಸಸ್ಪೆನ್ಸ್ ಚಿತ್ರ ಕಾರ್ನಿ ಸೆ.14 ಕ್ಕೆ ಬಿಡುಗಡೆ

ದಾವಣಗೆರೆ, ಸೆ. 11 – ಸಸ್ಪೆನ್ಸ್ ಹಾಗೂ ಥ್ರಿಲರ್ ಕಥಾಹಂದರ ಹೊಂದಿರುವ ಚಿತ್ರ ಕಾರ್ನಿ ಸೆ.14 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಗೋವಿಂದರಾಜು ಹೇಳಿದರು.
ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ದುನಿಯಾ ರಶ್ಮಿ ಹಾಗೂ ನಿರಂತ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಗೋಕುಲ್ ಎಂಟರ್ ಟೈನ್ಮೆಂಟ್ ಹಾಗೂ ವಿವಿ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣಗೊಂಡಿದೆ. ಕಾರ್ನಿ ಎಂಬುದು ದುರ್ಗಾದೇವಿಯ ಅಸ್ತ್ರ. ಈ ಅಸ್ತ್ರ ಯಾರ ಸಂಹಾರಕ್ಕಾಗಿ ಎಂಬುದು ಕುತೂಹಲ ಹುಟ್ಟಿಸುವ ವಿಷಯ. ಬಹುತೇಕ ರಾತ್ರಿಯ ವೇಳೆಯಲ್ಲೇ ಚಿತ್ರೀಕರಣ ಮಾಡಲಾಗಿದೆ. ಶಕ್ತಿ ಹಾಗೂ ಯುಕ್ತಿ ನಡುವಿನ ಹೋರಾಟದ ಕಥೆ ಚಿತ್ರದಲ್ಲಿದೆ. ಅಲೋಕ್ ಕುಮಾರ್ ಚಿತ್ರದ ಸಹನಿರ್ಮಾಪಕರಾಗಿದ್ದಾರೆ. ಚಿತ್ರಕ್ಕೆ ಕಥೆ ಬರೆದಿರುವ ವಿನೋದ್ ಕುಮಾರ್ ನಿರ್ದೇಶಿಸಿದ್ದಾರೆ. ಯುಎ ಪ್ರಮಾಣ ಪತ್ರ ದೊರೆತಿದ್ದು, ಐದಾರು ಪಾತ್ರಗಳ ನಡುವೆ ನಡೆಯುವ ಕಥಾನಕ ಇದಾಗಿದೆ. ರಾಜೇಶ್ ರಾಮಕೃಷ್ಣ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದಾರೆ. ಹರಿಬ್ರಹ್ಮ್ ಗೌಸ್ವಾಮಿ ಸಂಗೀತ ನೀಡಿದ್ದಾರೆಂದರು. ನಾಯಕಿ ದುನಿಯಾ ರಶ್ಮಿಮಾತನಾಡಿ, ಬಹಳ ದಿನಗಳ ನಂತರ ಕಮ್ ಬ್ಯಾಕ್ ಮಾಡಿದ್ದೇನೆ. ಈ ಚಿತ್ರದಲ್ಲಿ ಮೂಗಿಯ ಪಾತ್ರ ಮಾಡಿದ್ದೇನೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಇದಕ್ಕೆ ಎಲ್ಲರ ಸಹಕಾರ ಬೇಕಿದೆ ಎಂದರು.
ನಾಯಕ ನಿರಂತ್ ಮಾತನಾಡಿ, ನನ್ನದು ನೆಗಟಿವ್ ಶೇಡ್ ಇರುವ ಪಾತ್ರ. ಹೀರೋ ಹಾಗೂ ಖಳನಟ ಎರಡು ಪಾತ್ರದಲ್ಲಿ ಅಭಿನಯಿಸಿದ್ದೇನೆ. ವಿಭಿನ್ನ ಚಿತ್ರ ಇದಾಗಿದ್ದು, ಬೆಂಗಳೂರು, ಚಿಕ್ಕಮಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ ಎಂದು ತಿಳಿಸಿದರು.

Leave a Comment