ಸಲಿಂಗರತಿ, ಆರ್.ಎಸ್.ಎಸ್, ಶಿಯಾ ಮುಸ್ಲಿಂ ಸಾಮಾಜಿಕ ಚರ್ಚೆಗೆ ಆಗ್ರಹ

ನವದೆಹಲಿ, ಸೆ. ೭- ಸಲಿಂಗಕಾಮ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವ ಬೆನ್ನಲ್ಲೇ ಆರ್.ಎಸ್.ಎಸ್ ಹಾಗೂ ಶಿಯಾ ಕೇಂದ್ರೀಯ ವಕ್ಫ್ ಮಂಡಳಿ ಸಾರ್ವಜನಿಕ ಚರ್ಚೆಗೆ ಆಗ್ರಹಿಸಿದೆ.
ಸಲಿಂಗಕಾಮ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸಿದ್ದೇವೆ. ಸಲಿಂಗ ಸಂಬಂಧ ಸಹಜವೂ ಅಲ್ಲ, ನೈಸರ್ಗಿಕವೂ ಅಲ್ಲ. ಈ ವಿಷಯವಾಗಿ ಸಾಮಾಜಿಕ ಮತ್ತು ಮಾನಸಿಕವಾಗಿ ಇನ್ನಷ್ಟು ಚರ್ಚೆಗೆ ಒಳಪಡಿಸಬೇಕು ಎಂದು ಆರ್.ಎಸ್.ಎಸ್. ಪ್ರತಿಪಾದಿಸಿದೆ.
ಈ ಬೆನ್ನಲ್ಲೇ ಉತ್ತರ ಪ್ರದೇಶದ ವಕ್ಫ್ ಮಂಡಳಿ ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದಾಗಿ ಭಾರತೀಯ ಸಂಸ್ಕೃತಿಯೇ ಹಾಳಾಗುತ್ತಿದೆ. ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಪುನರ್ ಪರಿಶೀಲಿಸಬೇಕು ಎಂದು ಹೇಳಿದೆ.
ವಕ್ಫ್ ಮಂಡಳಿಯ ಮುಖ್ಯಸ್ಥ ವಾಸೀಂ ರಿಜ್ವಿ ನಾವು ಈ ತೀರ್ಪನ್ನು ಧಾರ್ಮಿಕ ದೃಷ್ಟಿಕೋನದಿಂದ ನೋಡುವುದಾದರೆ, ಯಾವ ಧರ್ಮದಲ್ಲೂ ಇಂತಹ ಸಂಬಂಧಕ್ಕೆ ಅವಕಾಶವಿಲ್ಲ. ಪಾಶ್ಚಾತ್ಯ ಸಂಸ್ಕೃತಿಯನ್ನು ನಾವು ಮಾನ್ಯ ಮಾಡಬಾರದು. ಹಾಗಾಗಿರುವುದು ಭಾರತೀಯ ಸಂಸ್ಕೃತಿ ಸಂಪ್ರದಾಯ ಮತ್ತು ಸಮಾಜಕ್ಕೆ ಕೆಟ್ಟ ಹೆಸರು ಮತ್ತು ಕಳಂಕ ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಈ ರೀತಿಯ ತೀರ್ಪು ನೀಡಿರುವುದು ತಪ್ಪು. ಇಂತಹ ತೀರ್ಪಿನಿಂದಾಗಿ ಸಂಭ್ರಮಿಸುತ್ತಿರುವವರು ನಾಚಿಕೆಗೆಟ್ಟವರು. ಇದರಿಂದಾಗಿ ದೇಶದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಲಿವೆ ಎಂದಿದ್ದಾರೆ.
ಆರ್.ಎಸ್.ಎಸ್. ನ ಮಾಧ್ಯಮ ಮುಖ್ಯಸ್ಥ ಅರುಣ್ ಕುಮಾರ್ ಈ ಸಂಬಂಧ ಪ್ರತಿಕ್ರಿಯಿಸಿ ಸಲಿಂಗ ವಿವಾಹ ಹಾಗೂ ಸಂಬಂಧ ನೈಸರ್ಗಿಕ ನಿಯಮಗಳಿಗೆ ವಿರುದ್ಧವಾದುದು. ಇಂತಹ ಸಂಬಂಧಗಳನ್ನು ಒಪ್ಪಲು ಸಾಧ್ಯವಿಲ್ಲ. ಭಾರತೀಯ ಸಾಂಪ್ರದಾಯಿಕ ಸಮಾಜ ವಿಕೃತ ಸಂಬಂಧಗಳಿಗೆ ಮಾನ್ಯತೆ ನೀಡುವುದಿಲ್ಲ. ಹೀಗಾಗಿ ಇಂತಹ ವಿಷಯಗಳ ಕುರಿತು ಹೆಚ್ಚಿನ ಚರ್ಚೆ ಆಗುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಪ್ರತಿಕ್ರಿಯಿಸಿ ಭಾರತೀಯ ದಂಡ ಸಂಹಿತೆಯ ಐಪಿಸಿ ಕಲಂ 377 ಅನ್ನು ರದ್ದುಗೊಳಿಸಬೇಕೆಂದು ಕೋರಿದ್ದ ಅರ್ಜಿಯನ್ನು ನಾವು ವಿರೋಧಿಸುವುದಿಲ್ಲ ಎಂದು ತಿಳಿಸಿದರು.
ಸಂವಿಧಾನ ತಜ್ಞ ಸುಭಾಷ್ ಕಶ್ಯಪ್, ಸುಪ್ರೀಂ ಕೋರ್ಟ್‌ನ ತೀರ್ಪು ಈ ನೆಲದ ತೀರ್ಪಿಗೆ ವಿರುದ್ಧವಾದುದು ಎಂದು ಹೇಳಿದ್ದಾರೆ.

Leave a Comment