ಸರ್ವೋಚ್ಛ ನ್ಯಾಯಾಲಯದ ತೀರ್ಪು ಹಿನ್ನೆಲೆ; ಸಂಯಮ ಕಾಪಾಡಲು ಮನವಿ

ದಾವಣಗೆರೆ.ನ.8; ಭಾರತೀಯರಾದ ನಾವು ಪ್ರಪಂಚದಲ್ಲಿಯೇ ಶ್ರೇಷ್ಠವಾದ ಸಂವಿಧಾನದ ಆಶಯದಂತೆ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಬದುಕುತ್ತಿದ್ದೇವೆ.  ನಮ್ಮ ದೇಶದ ಏಕತೆ, ಭ್ರಾತೃತ್ವ, ಸ್ವಾಯತ್ತತೆ, ಅಖಂಡತೆಯನ್ನು ಕಾಪಾಡಬೇಕಾಗಿದೆ ಎಂದು ಹಿರಿಯ ವಕೀಲರಾದ ಅನೀಸ್ ಪಾಶ ಹೇಳಿದ್ದಾರೆ. ಪ್ರಕಟಣೆ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು ಸಂವಿಧಾನಾತ್ಮಕವಾಗಿ ನ್ಯಾಯಾಂಗ ವ್ಯವಸ್ಥೆಯನ್ನು  ಒಪ್ಪಿಕೊಂಡಿದ್ದೇವೆ.  ನ್ಯಾಯಾಂಗವನ್ನು ಗೌರವಿಸುತ್ತ ಅದರ ನಿರ್ದೇಶನದಂತೆ ಪಾಲನೆ ಮಾಡುತ್ತಾ ಬಂದಿದ್ದೇವೆ. ಇಡೀ ಭಾರತ ದೇಶದ ಜನತೆ ಈಗಲೂ ನ್ಯಾಯಾಲಯಗಳ ಮೇಲೆ ಅಪಾರವಾದ ನಂಬಿಕೆ, ವಿಶ್ವಾಸವನ್ನು ಇಟ್ಟಿದ್ದಾರೆ.  ಒತ್ತಡಗಳ ಮೇಲೂ ನ್ಯಾಯಾಲಯಗಳು ಹೆಚ್ಚಿನ ಮಟ್ಟಿಗೆ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಬಂದಿದೆ.  ಹೀಗಿದ್ದಲ್ಲಿ ಭಾರತ ದೇಶವಷ್ಟೇ ಅಲ್ಲ ಇಡೀ ಜಗತ್ತು ಸರ್ವೋಚ್ಛ ನ್ಯಾಯಾಲಯದ ಕಡೆ ದೃಷ್ಠಿಯನ್ನು ನೆಟ್ಟಿದೆ.  ಏಕೆಂದರೆ ಸರ್ವೋಚ್ಛ ನ್ಯಾಯಾಲಯವು ಇಷ್ಟರಲ್ಲೇ ಬಾಬರಿ ಮಸೀದಿ ಪ್ರಕರಣದಲ್ಲಿ ಅಂತಿಮ ತೀರ್ಪು ನೀಡಲಿದೆ.  ಈ ಬಗ್ಗೆ ಬಹಳಷ್ಟು ಜನರಲ್ಲಿ ಕುತೂಹಲ, ಆತಂಕ ಮನೆ ಮಾಡಿದೆ. ದೇಶದ ಎಲ್ಲಾ ಜನತೆ ಸರ್ವೋಚ್ಛ ನ್ಯಾಯಾಲಯ ನೀಡುವ ತೀರ್ಪನ್ನು ಒಪ್ಪಿಕೊಳ್ಳುತ್ತಾರೆ.  ಹೆಚ್ಚಿನ ಜನರು ಶಾಂತಿ, ಸೌಹಾರ್ದತೆ ಮತ್ತು ಭ್ರಾತೃತ್ವವನ್ನು ಬಯಸುತ್ತಾರೆ.  ಅಧಿಕಾರದ ಚುಕ್ಕಾಣಿ ಹಿಡಿಯುವ ಸಲುವಾಗಿ ಎಷ್ಟೇ ವಿಷ ಬೀಜ ಬಿತ್ತಲು ಪ್ರಯತ್ನಿಸಿದರೂ ಎಲ್ಲೋ ಕೆಲವು ದುರ್ಘಟನೆಗಳು ನಡೆದಿವೆ.  ಇದೇ ನವೆಂಬರ್ 10 ರಂದು ಈದ್‍ಮೀಲಾದ್ ಹಬ್ಬವಿದ್ದು, ಪ್ರವಾದಿ ಮಹಮ್ಮದ್ (ಸ್ವ.ಅ) ರವರು ಹುಟ್ಟಿ ಇಡೀ ಪ್ರಪಂಚಕ್ಕೆ ಶಾಂತಿಯ ಸಂದೇಶವನ್ನು ಸಾರಿದ್ದಾರೆ.  ಅಮಾಯಕರ ಹತ್ಯೆಯನ್ನು ಖಂಡಿಸಿದ್ದಾರೆ.  ನೆರೆ-ಹೊರೆಯವರೊಂದಿಗೆ ಪ್ರೀತಿ-ವಾತ್ಸಲ್ಯದಿಂದಿರಲು ಮಾರ್ಗದರ್ಶನ ನೀಡಿದ್ದಾರೆ.  ಇದೇ ರೀತಿ ಪ್ರತಿಯೊಂದು ಧರ್ಮ ಗ್ರಂಥಗಳು ಶಾಂತಿ ಮತ್ತು ಪ್ರೀತಿಯನ್ನು ಬೋಧಿಸುತ್ತವೆ ಹೊರತು ಹಿಂಸೆಯನ್ನಲ್ಲ.  ಹೀಗಿದ್ದಾಗ ಎಲ್ಲಾ ತಿಳಿದರೂ ಕೆಲವೊಮ್ಮೆ ಮೂಲಭೂತವಾದಿಗಳು ದೇವರ ಹೆಸರುಗಳಲ್ಲಿ ಹಿಂಸೆ ನಡೆಸುವುದು ತಪ್ಪು. ಸರ್ವೋಚ್ಛ ನ್ಯಾಯಾಲಯದ ತೀರ್ಪು ಯಾರ ಪರ ಅಥವಾ ಯಾರ ವಿರುದ್ಧವಾದರೂ ನೀಡಲಿ ಅದನ್ನು ಸಮಾಧಾನದಿಂದ ಸ್ವೀಕರಿಸುವ ವಿಶಾಲ ಮನೋಭಾವ ಬೆಳೆಸಬೇಕು.  ಅದೇ ರೀತಿ ಯಾರ ಪರವಾಗಿ ತೀರ್ಪು ಬರುತ್ತೋ ಅವರು ಆ ತೀರ್ಪನ್ನು ವಿಜೃಂಭಿಸಿ ಮತ್ತೊಬ್ಬರಿಗೆ ನೋವಾಗದಂತೆ ಬದುಕುವುದೇ ಧರ್ಮ.  ನಮ್ಮ ದೇಶವನ್ನು ಉನ್ನತ ಸ್ಥಾನಕ್ಕೆ ಒಯ್ಯಬೇಕಾಗಿದೆ.  ಪ್ರಪಂಚದಲ್ಲಿಯೇ ಸೌಹಾರ್ದಯುತ ದೇಶವಾಗಿ ನಮ್ಮ ಭಾರತ ದೇಶ ಮೊದಲನೆಯ ಸ್ಥಾನವನ್ನು ಅಲಂಕರಿಸಬೇಕಾಗಿದೆ.  ನಮ್ಮ ದೇಶದ ಬಡತನವನ್ನು ಸಂಪೂರ್ಣವಾಗಿ ಹೋಗಲಾಡಿಸಲು, ಮಕ್ಕಳಲ್ಲಿ ಪೌಷ್ಠಿಕಾಂಶದ ಕೊರತೆಯನ್ನು ನೀಗಿಸಲು, ನಿರುದ್ಯೋಗ ಸಮಸ್ಯೆ ಬಗೆಹರಿಸಲು, ಎಲ್ಲಾ ಕಾರ್ಮಿಕ ವರ್ಗದವರ ಹಕ್ಕುಗಳನ್ನು ಕಾಪಾಡಲು, ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ನಿರಾಶ್ರಿತರ ಸಮಸ್ಯೆಯನ್ನು ಹೋಗಲಾಡಿಸಲು, ಹೀಗೆ ಹಲವು ಹತ್ತಾರು ಸಮಸ್ಯೆ ಸರಿಪಡಿಸಲು ನಾವೆಲ್ಲಾ ಒಂದಾಗಿ ಹೋರಾಟ ಮಾಡುವುದರೊಂದಿಗೆ ಸರ್ಕಾರದ ಗಮನಕ್ಕೆ ತಂದು ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ.  ನಮ್ಮ ದೇಶದ ಆಂತರಿಕ ಭದ್ರತೆಯನ್ನು ಕಾಪಾಡಬೇಕಾಗಿದೆ. ನಮ್ಮ ದೇಶದ ಯುವಕರು ಆದಷ್ಟು ಮಟ್ಟಿಗೆ ಫೇಸ್‍ಬುಕ್, ವಾಟ್ಸ್‍ಅಪ್‍ಗಳಲ್ಲಿ ಬರುವಂತಹ ವೀಡಿಯೋ ಮತ್ತು ಮೆಸೇಜ್‍ಗಳ ಬಗ್ಗೆ ಪ್ರಚೋದಿತರಾಗಿ ಕಾನೂನನ್ನು ಕೈಗೆತ್ತಿಕೊಂಡು ಜೀವನ ಹಾಳು ಮಾಡಿಕೊಳ್ಳದೆ ಶಾಂತಿಯನ್ನು ಕಾಪಾಡಲು ಸಂಯಮದಿಂದ ಇರಬೇಕು.  ಈ ಮೂಲಕ ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬ ನಾಗರೀಕರನು ಶ್ರಮಿಸಬೇಕು ನಮ್ಮ ದೇಶದ ಏಕತೆ, ಅಖಂಡತೆ ಮತ್ತು ಭ್ರಾತೃತ್ವ ಹಾಳಾಗದಂತೆ ಸ್ವಾಸ್ಥ್ಯ ಕಾಪಾಡುವುದು ನಮ್ಮ-ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
.

Leave a Comment