ಸರ್ವಿಸ್ ರಸ್ತೆಯಲ್ಲಿ ಸಂಚಾರ ನಿರ್ಬಂಧ: ಸಭೆ ವಿಫಲ

ಮಂಗಳೂರು, ಮಾ.೧೫- ಬಿ.ಸಿ.ರೋಡ್‌ನ ಸರ್ವಿಸ್ ರಸ್ತೆಯಲ್ಲಿ ಖಾಸಗಿ, ಸರಕಾರಿ ಬಸ್‌ಗಳ ಸಂಚಾರವನ್ನು ಏಕಾಏಕಿಯಾಗಿ ನಿರ್ಬಂಧಿಸಿರುವುದರಿಂದ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಬಿ.ಸಿ.ರೋಡ್‌ನ ತಾಲೂಕು ಪಂಚಾಯತ್‌ನ ಸಭಾಂಗಣದಲ್ಲಿ ಗುರುವಾರ ಸಂಜೆ ನಡೆಷ ಸಾರ್ವಜನಿಕರ ಅಭಿಪ್ರಾಯ ಮಂಡನಾ ಸಭೆ ಯಲ್ಲಿ  ಸರಕಾರಿ,ಖಾಸಗಿ ಬಸ್ ಸಂಚಾರದ ಬಗ್ಗೆ   ಪೊಲೀಸ್ ಅಧಿಕಾರಿ ಸ್ಪಷ್ಟ ನಿರ್ಧಾರ ಪ್ರಕಟಿಸದಿರುವುರಿಂದ ಸಭೆ ಠುಸ್ಸಾಯಿತು.

ಸಭೆ ಆರಂಭವಾಗುತ್ತಿದ್ದಂತೆಯೇ ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ ಪ್ರಸ್ತಾಪಿಸಿ. ಬಿ.ಸಿ.ರೋಡ್‌ಪೇಟೆ ಬಂಟ್ವಾಳದ ಕೇಂದ್ರಸ್ಥಾನವಾಗಿದ್ದು, ಎಲ್ಲ ಕೆಲಸ ಕಾರ್ಯಗಳ ಮೂಲಸ್ಥಾನವಾಗಿದೆ. ಬಸ್ ಸಂಚಾರ ನಿಬಂಧದಿಂದ ಸಾರ್ವಜನಿಕರು ಗೊಂದಲಕ್ಕೀಡಾಗಿದ್ದಾರೆ. ಮಕ್ಕಳನ್ನು ಕಂಕಳಲ್ಲಿರಿಸಿಕೊಂಡು ಮಹಿಳೆಯರು, ವೃದ್ಧರು ಮೇಲ್ಸತುವೆಯ ತುದಿಯಿಂದ ವಿವಿಧ ಕಚೇರಿಗೆ ಸುಮಾರು ೨೦೦ ಮೀ. ನಷ್ಟು ನಡೆದುಕೊಂಡು ಬರಬೇಕಾದ ಪರಿಸ್ಥಿತಿ ಉಂಟಾಗಿದೆ. ಅಲ್ಲದೆ, ಈ ಸರ್ವಿಸ್ ರಸ್ತೆ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ. ಪಾದಚಾರಿಗಳಿಗೆ ನಡೆದಾಡಲು ಪುಟ್‌ಪಾತ್ ವ್ಯವಸ್ಥೆ ಇಲ್ಲ. ಸರ್ವಿಸ್ ರಸ್ತೆಯ ಪಕ್ಕದ ಜಾಗವನ್ನು ಅಂಗಡಿ ಮಾಲಕರು ಉದ್ದಕ್ಕೆ ಅಕ್ರಮವಾಗಿ ಶೀಟ್ ಅಳವಡಿಸಿ ವ್ಯಾಪಾರ ಮಾಡುತ್ತಿದ್ದಾರೆ. ಇದನ್ನು ಮೊದಲು ತೆರವುಗೊಳಿಸಬೇಕು. ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಅನಧೀಕೃತ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದು ಹೇಳಿದರು.

ಆಟೋ ಚಾಲಕರ ಯೂನಿಯನ್‌ನ ಉಪಾಧ್ಯಕ್ಷ ಸಂಶುದ್ದೀನ್ ಪಲ್ಲಮಜಲು ಅಭಿಪ್ರಾಯ ಮಂಡಿಸಿ, ಸರ್ವಿಸ್ ರಸ್ತೆಯಲ್ಲಿ ಬಸ್ ಸಂಚಾರದಿಂದ ಯಾವುದೇ ಟ್ರಾಫಿಕ್ ಸಮಸ್ಯೆ ಉಂಟಾಗದು. ಬಂದ ಬಸ್‌ಗಳು ಪ್ರಯಾಣಿಕರನ್ನು ಹತ್ತಿಸಿ, ಇಳಿಸಲು ಕೇವಲ ೨ ನಿಮಿಷ ಅವಕಾಶ ಮಾಡಬೇಕು. ಬಿ.ಸಿ.ರೋಡ್‌ನಲ್ಲಿ ಗ್ರಾಮಾಂತರ ಆಟೊಗಳನ್ನು ನಿಲ್ಲಿಸಲು ಅವಕಾಶ ನೀಡಬಾರದು. ನಗರ ಮತ್ತು ಗ್ರಾಮಾಂತರ ಆಟೋ ಚಾಲಕರನ್ನು ವಿಂಗಡಿಸಿ, ಗುರುತಿಸುವ ಕಾರ್ಯ ಮಾಡಬೇಕು. ಆಟೊ ಚಾಲಕರಿಗೆ ಪರ್ಮಿಟ್ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಬಿ.ಸಿ.ರೋಡ್ ನಿವಾಸಿ ಲೋಕೇಶ್ ಸುವರ್ಣ ಮಾತನಾಡಿ, ಬಿ.ಸಿ.ರೋಡ್‌ನಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುವ ಆಯಕಟ್ಟಿನ ಸ್ಥಳಗಳಲ್ಲಿ ಟ್ರಾಫಿಕ್ ಸಿಬ್ಬಂದಿಯನ್ನು ನೇಮಿಸದೇ ಮೂರ್ನಾಲ್ಕು ಹೋಂಗಾರ್ಡ್ಗಳನ್ನು ನಿಲ್ಲಿಸಲಾಗುತ್ತದೆ. ಇವರನ್ನು ಯಾವದೇ ವಾಹನ ಚಾಲಕರು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಹೋಂಗಾರ್ಡ್ ಎಷ್ಟೇ ವಿಸಿಲ್ ಒಡೆದರೂ ಬಸ್ ಚಾಲಕರು ಕ್ಯಾರೇ ಮಾಡುತ್ತಿಲ್ಲ ಎಂದು ದೂರಿದರು.

ಸಾಮಾಜಿಕ ಹೋರಾಟಗಾರ ಪ್ರಭಾಕರ್   ದೈವಗುಡ್ಡೆ  ಮಾತನಾಡಿ, ಸರ್ವೀಸ್ ರಸ್ತೆಯಲ್ಲಿ ಸುಮಾರು ೨೦ರಿಂದ ೩೦ ನಿಮಿಷಗಳ ಕಾಲ ಬಸ್ ನಿಲ್ಲಿಸುವುದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನೆವಾಗಿಲ್ಲ ಎಂದು ದೂರಿದರು. ಆಟೊ ಚಾಲಕ ಯಾಕೂಬ್ ಮಾತನಾಡಿ, ಎಲ್ಲಾ ಬಸ್‌ಗಳು ಮೇಲ್ಸತುವೆಯಲ್ಲಿ ನಿಲುಗಡೆಯಾಗುವುದರಿಂದ ಪ್ರಯಾಣಿಕರು ಅತ್ತ-ಇತ್ತ ಹೋಗಲು ಸಾಧ್ಯವಾಗದೇ ಉರಿ ಬಿಸಿಲಿಗೆ ಮೈಯೊಡ್ಡಿ ರಸ್ತೆ ಮಧ್ಯೆ ನಿಲ್ಲಬೇಕಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಶರಣ್ ಗೌಡ, ಬಂಟ್ವಾಳ ಅಪರಾಧ ವಿಭಾಗದ ಎಸ್ಸೈ ಸುಧಾಕರ್ ಜಿ.ತೋನ್ಸೆ, ಬಂಟ್ವಾಲ ಗ್ರಾಮಾಂತರ ಎಸ್ಸೈ ಪ್ರಸನ್ನ, ಟ್ರಾಫಿಕ್ ಪೊಲೀಸರು ಹಾಜರಿದ್ದರು.

Leave a Comment