ಸರ್ವಪಕ್ಷಗಳ ಸಭೆಗೆ ಕಾಂಗ್ರೆಸ್ ಆಗ್ರಹ

ಬೆಂಗಳೂರು, ಮಾ. ೨೭- ರಾಜ್ಯವನ್ನು ಕಾಡಿರುವ ಕೊರೊನಾ ವೈರಸ್ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಲು ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವ ಸರ್ಕಾರದ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ಪಕ್ಷ ತಕ್ಷಣವೇ ಸರ್ವಪಕ್ಷಗಳ ನಿಯೋಗದ ಸಭೆಯನ್ನು ಕರೆಯಬೇಕೆಂದು ಆಗ್ರಹಪಡಿಸಿದೆ.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮವನ್ನು ಈಗಾಗಲೇ ಕಾಂಗ್ರೆಸ್ ಪಕ್ಷ ಈಗಾಗಲೇ ಸ್ವಾಗತಿಸಿದೆ. ಎಲ್ಲಾ ಸಹಕಾರ ಮತ್ತು ನೆರವನ್ನು ನೀಡಿದೆ. ಆದರೂ ಕೂಡ ಕೊರೊನಾ ಕುರಿತಂತೆ, ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಇನ್ನಷ್ಟು ಸಲಹೆ, ಸಹಕಾರಗಳನ್ನು ನೀಡಲು ಸರ್ಕಾರ, ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆರೋಪಿಸಿದರು.
ಒಂದು ವೇಳೆ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದಲ್ಲಿ ಸದ್ಯದಲ್ಲೇ ರಾಜ್ಯಪಾಲರನ್ನು ಭೇಟಿಮಾಡಿ ಸರ್ಕಾರದ ಕ್ರಮದ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಅವರು ತಿಳಿಸಿದರು.
ಕೆಪಿಸಿಸಿ ಕೂಡ ಕೊರೊನಾ ವೈರಸ್ ಅನ್ನು ಗಂಭೀರವಾಗಿ ಪರಿಗಣಿಸಿದೆ. ಇದಕ್ಕಾಗಿ ಪಕ್ಷಬೇಧ ಮರೆತು ವೈರಸ್ ಎದುರಿಸಲು ಸಿದ್ಧವಾಗಿದ್ದೇವೆ. ಮಾಜಿ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ಅನ್ನು ಕೂಡ ರಚಿಸಲಾಗಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಅವರು, ಸಂಚಾಲಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ಕೆಪಿಸಿಸಿ ಟಾಸ್ಕ್ ಫೋರ್ಸ್ ಕೊರೊನಾ ವೈರಸ್ ನಿಯಂತ್ರಣಕ್ಕೆ ಪಕ್ಷದ ಕಾರ್ಯಕರ್ತರು ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂಬುದರ ಬಗ್ಗೆ ಗಮನ ಹರಿಸಲಿದ್ದಾರೆ ಎಂದವರು ತಿಳಿಸಿದರು.
ಪಕ್ಷದ ಎಲ್ಲಾ ಶಾಸಕರು, ಕೆಪಿಸಿಸಿ ಪರಿಹಾರ ನಿಧಿಗೆ ಒಂದು ಲಕ್ಷ ರೂ. ಗಳ ದೇಣಿಗೆಯನ್ನು ಕಡ್ಡಾಯವಾಗಿ ನೀಡಲೇಬೇಕು. ಸ್ಥಳೀಯ ಜಿಲ್ಲಾ, ತಾಲ್ಲೂಕು, ಬ್ಲಾಕ್ ಮಟ್ಟದಲ್ಲಿ ಕೂಡ ಕಾರ್ಯಕರ್ತರು ದೇಣಿಗೆಗಳನ್ನು ನೀಡಬೇಕು ಎಂದು ಹೇಳಿದ ಡಿಕೆಶಿ ಅವರು, ಆರ್‌ಎಸ್‌ಎಸ್ ಮತ್ತು ಬಿಜೆಪಿ ಪಕ್ಷದಲ್ಲಿ ಒತ್ತಡ ಹೇರುವ ರೀತಿ ಸಾರ್ವಜನಿಕರಿಂದ ವಸೂಲು ಮಾಡುವುದಕ್ಕೆ ಅವಕಾಶವಿಲ್ಲ ಎಂದು ಹೇಳಿದರು.
ಟಾಸ್ಕ್ ಫೋರ್ಸ್ ಆಗ್ಗಾಗ್ಗೆ ಸಭೆ ಸೇರಲಿದ್ದು, ದೇಣಿಗೆ ರೂಪದಲ್ಲಿ ಬಂದ ಹಣವನ್ನು ಹೇಗೆ ಖರ್ಚುಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಸಲಿದೆ ಎಂದು ತಿಳಿಸಿದರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಪ್ರಕಟಿಸಿರುವ ಯೋಜನೆಗಳು ಸ್ವಾಗತಾರ್ಹ. ಕಿಸಾನ್ ಸಮ್ಮಾನ್ ಯೋಜನೆಯಡಿ ನೀಡಲಾಗುವ 6 ಸಾವಿರ ರೂ. ಗಳನ್ನು 12 ಸಾವಿರ ರೂ. ಗೆ ಹೆಚ್ಚಳ ಮಾಡಬೇಕು. ಜನಧನ್ ಮೂಲಕ ಮಹಿಳೆಯರಿಗೆ ನೀಡುವ 500 ರೂ. ಹಣವನ್ನು 1 ಸಾವಿರ ರೂ. ಗೆ ಹೆಚ್ಚಳ ಮಾಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.
ಇಂದಿರಾ ಕ್ಯಾಂಟೀನ್‌ ಅನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು. ರಾಜ್ಯ ಸರ್ಕಾರ ನೀಡುತ್ತಿರುವ 7 ಕೆಜಿ ಅಕ್ಕಿ, ಕೇಂದ್ರ ಸರ್ಕಾರ ಪ್ರಕಟಿಸಿರುವ 5 ಕೆಜಿ ಉಚಿತ ಅಕ್ಕಿ ಸೇರಿದಂತೆ, 12 ಕೆಜಿ ಅಕ್ಕಿ ಹಾಗೂ ದವಸ ಧಾನ್ಯಗಳನ್ನು ಏಪ್ರಿಲ್ ತಿಂಗಳಿನಿಂದಲೇ ವಿತರಿಸಬೇಕು. ಸಾಧ್ಯವಾದಲ್ಲಿ ಫಲಾನುಭವಿಗಳ ಮನೆಬಾಗಿಲಿಗೆ ತಲುಪಿಸಬೇಕು ಎಂದು ಅವರು ಹೇಳಿದರು.
ಕೊರೊನಾ ರೋಗ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ವೈದ್ಯರು, ನರ್ಸ್ ಮತ್ತು ಇತರ ಆರೋಗ್ಯ ಸಿಬ್ಬಂದಿಗಳಿಗೆ ಸುರಕ್ಷಿತ ಸಾಧನಗಳನ್ನು ವಿತರಿಸಬೇಕು. ಅವರ ಆರೋಗ್ಯದ ಕಡೆಗೂ ಗಮನ ಕೊಡಬೇಕು ಎಂದು ಅವರು ತಿಳಿಸಿದರು.
ರಸ್ತೆಯಲ್ಲಿ ಬರುವ ಸಾರ್ವಜನಿಕರ ಮೇಲೆ ಪೊಲೀಸರು ಮಾನವೀಯತೆ ಮರೆತು ಹಲ್ಲೆ ನಡೆಸುತ್ತಿರುವುದನ್ನು ನಿಲ್ಲಿಸಬೇಕೆಂದು ಡಿಕೆಶಿ ಅವರು ಒತ್ತಾಯಿಸಿದರು.

Leave a Comment