ಸರ್ಕಾರ ಹೇಳೋದೊಂದು ಮಾಡೋದೊಂದು

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು, ಮಾ. ೨೦- ಸಾಮಾಜಿಕ ಕಳಕಳಿ, ಸರ್ವರ ಅಭಿವೃದ್ಧಿ ಕುರಿತು ಪದೇ ಪದೇ ಹೇಳುವ ಸರ್ಕಾರ ವಾಸ್ತವದಲ್ಲಿ ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿದೆ. ಸರ್ಕಾರದ ನೀತಿ ಹೇಳುವುದೊಂದು ಮಾಡುವುದೊಂದು ಎಂಬಂತಾಗಿದೆ ಎಂದು ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ವಿಧಾನಸಭೆಯಲ್ಲಿಂದು ತರಾಟೆಗೆ ತೆಗೆದುಕೊಂಡರು.

ಕಳೆದ ನಾಲ್ಕು ವರ್ಷಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜನಾಂಗದ ಏಳ್ಗೆಗಾಗಿ 60 ಸಾವಿರದ 350 ಕೋಟಿ ರೂ. ಮೀಸಲಿಟ್ಟಿದ್ದರೂ, ಇದುವರೆಗೂ ಕೇವಲ 47 ಸಾವಿರದ 186 ಕೋಟಿ ರೂ. ಮಾತ್ರ ಖರ್ಚು ಮಾಡಲಾಗಿದೆ. ಈ ಸರ್ಕಾರದ ಮಂತ್ರಿಗಳು ಭಾಷಣದಲ್ಲಿ ಹೇಳುವುದೊಂದು, ಮಾಡುವುದೊಂದು ಎಂದು ಅವರು ಹೇಳಿದರು.

ಬಜೆಟ್ ಮೇಲಿನ ಚರ್ಚೆ ಆರಂಭಿಸಿ ಮಾತನಾ‌ಡುತ್ತಿದ್ದ ಅವರು, ಇದುವರೆಗೂ ಖರ್ಚು ಮಾಡಿರುವ ಹಣ ಫಲಾನುಭವಿಗಳಿಗೆ ತಲುಪಿದೆ. ಅವರಲ್ಲಿ ಸಾಮಾಜಿಕ ಬದಲಾವಣೆ ಯಾವ ಮಟ್ಟದಲ್ಲಿ ಆಗಿದೆ ಎಂಬುದರ ಬಗ್ಗೆ ಸರ್ಕಾರ ಸಮೀಕ್ಷೆ ನಡೆಸಿಲ್ಲ. ಸಾಮಾಜಿಕ ಕಳಕಳಿ ಬಗ್ಗೆ ಮಾತನಾ‌ಡುವ ಮಂತ್ರಿಗಳು ಕೇವಲ ಹೇಳಿಕೆಗಳಿಗೆ ಸೀಮಿತವಾಗುತ್ತಿದ್ದಾರೆ ಎಂದು ಹೇಳಿದರು.

ಕೃಷಿಭಾಗ್ಯ ಯೋಜನೆಯಡಿ 2016-17ರಲ್ಲಿ ನಿಗದಿತ ಗುರಿ ತಲುಪುವಲ್ಲಿ ಸರ್ಕಾರ ವಿಫಲವಾಗಿದೆ. ಈ ಯೋಜನೆಗಾಗಿ 500 ಕೋಟಿ ರೂ. ಮೀಸಲಿಟ್ಟಿದ್ದರೂ, ಜನವರಿ ಅಂತ್ಯದವರೆಗೆ ಕೇವಲ 222 ಕೋಟಿ ರೂ. ಮಾತ್ರ ಖರ್ಚಾಗಿದೆ ಎಂದರು.

ಕೃಷಿಯಾಂತ್ರೀಕರಣ ಯೋಜನೆಯಡಿ ನಿರೀಕ್ಷಿತ ಗುರಿ ಸಾಧಿಸಿಲ್ಲ. ಈ ಸರ್ಕಾರ ಅಭಿವೃದ್ದಿ ವಿಚಾರದಲ್ಲಿ ಆಮೆ ವೇಗದಲ್ಲಿ ನ‌ಡೆಯುತ್ತಿದೆ ಎಂದು ಅವರು ಅಂಕಿ ಅಂಶಗಳ ಸಮೇತ ಹೇಳಿದರು.

ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದ್ದು, 165 ತಾಲ್ಲೂಕುಗಳಲ್ಲಿ ಕುಡಿಯುವ ನೀರು, ಮೇವು, ಮೇವಿಗಾಗಿ ಹಾಹಾಕಾರ ಉಂಟಾಗಿದೆ ಎಂದರು.

ರೈತರ ಖಾತೆಗೆ ತಲುಪಿಲ್ಲ

ರೈತರ ಬೆಳೆ ನಷ್ಟ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ 450 ಕೋಟಿ ರೂ.ವನ್ನು ಇನ್‌ಪುಟ್ ಸಬ್ಸಿ‌ಡಿಯಾಗಿ ರೈತರ ಖಾತೆಗಳಿಗೆ ವರ್ಗಾಯಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದರು.

ಕೇಂದ್ರ ಸರ್ಕಾರ 1782 ಕೋಟಿ ರೂ. ಮಂಜೂರು ಮಾಡುವುದಾಗಿ ಹೇಳಿ, 450 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದರೂ, ಈ ಹಣವನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು.

 

Leave a Comment