ಸರ್ಕಾರ ರಚಿಸಲು ಬಿಜೆಪಿ ತೆರೆಮರೆ ಕಸರತ್ತು

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು, ಆ. ೧೦- ಆಷಾಢ ಕಳೆದು ಶ್ರಾವಣಮಾಸ ಆರಂಭವಾಗುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲೂ ಮಹತ್ತರ ಬದಲಾವಣೆಗಳಾಗುತ್ತವೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಬಲವಾಗಿ ಕೇಳಿ ಬರುತ್ತಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಅತೃಪ್ತ ಶಾಸಕರನ್ನು ಸೆಳೆದು ಸರ್ಕಾರ ರಚಿಸಲು ಬಿಜೆಪಿ ಮುಂದಾಗಿದೆ. ಈಗಾಗಲೇ ಬಿಜೆಪಿಯ ಉನ್ನತ ನಾಯಕರುಗಳು ಅತೃಪ್ತ ಶಾಸಕರ ಜತೆ ಮಾತುಕತೆಗಳನ್ನು ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರವನ್ನು ರಚಿಸಲು ಒಳಗೊಳಗೆ ಬಿಜೆಪಿ ನಾಯಕರು ಕಸರತ್ತು ನಡೆಸಿದ್ದು, ಸುಮಾರು ಒಂದು ಡಜನ್‌ಗೂ ಹೆಚ್ಚು ಅತೃಪ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಜತೆ ಬಿಜೆಪಿ ನಾಯಕರು ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿಯಿಂದ ಈಗಾಗಲೇ ಕಾಂಗ್ರೆಸ್‌ನ ಹಲವು ಶಾಸಕರು ಅಸಮಾಧಾನಗೊಂಡಿದ್ದು, ಅಧಿಕಾರಿಗಳ ವರ್ಗಾವಣೆ, ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯ ಮನವಿಗಳಿಗೆ ಕಿಂಚಿತ್ತೂ ಸ್ಪಂದನೆ ಸಿಗುತ್ತಿಲ್ಲ ಎಂಬುದು ಈ ಶಾಸಕರ ಅಳಲಾಗಿದೆ.

ಸಮ್ಮಿಶ್ರ ಸರ್ಕಾರದ ನಾಯಕರುಗಳ ನಡವಳಿಕೆಯಿಂದ ಅತೃಪ್ತಗೊಂಡಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೆ ಗಾಳ ಹಾಕಿರುವ ಬಿಜೆಪಿ ಒಬ್ಬೊಬ್ಬರೇ ಶಾಸಕರನ್ನು ಕರೆಸಿಕೊಂಡು ಗುಪ್ತವಾಗಿ ಮಾತುಕತೆ ನಡೆಸಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕಳೆದ ಒಂದು ವಾರದಿಂದ ಚಾಲ್ತಿಯಲ್ಲಿವೆ.

ಲೋಕಸಭಾ ಚುನಾವಣೆಗೂ ಮುನ್ನವೇ ಆಪರೇಷನ್ ಕಮಲದ ಮೂಲಕ ಬಿಜೆಪಿ ಸರ್ಕಾರವನ್ನು ಸ್ಥಾಪಿಸಲು ರಾಜ್ಯ ನಾಯಕರ ಕಸರತ್ತಿಗೆ ಬಿಜೆಪಿ ದೆಹಲಿ ನಾಯಕರು ಬೆಂಬಲ ನೀ‌ಡಿದ್ದಾರೆ.

ಸಭೆ, ಸಮಾಲೋಚನೆ

ಸಮ್ಮಿಶ್ರ ಸರ್ಕಾರದ ಬಗ್ಗೆ ಕಾಂಗ್ರೆಸ್ ಪಾಳೇಯದಲ್ಲಂತೂ ಕೆಲ ಶಾಸಕರ ಬೇಗುದಿ ಹೆಚ್ಚಿದ್ದು, ತಮ್ಮ ಮಾತುಗಳಿಗೆ ಕಿಮ್ಮತ್ತೂ ನೀಡದ ಸಮ್ಮಿಶ್ರ ಸರ್ಕಾರದ ನಾಯಕರ ವಿರುದ್ಧ ಕುದಿಯುತ್ತಿರುವ ಕೈಪಡೆಯ ಶಾಸಕರು ರಾತ್ರಿಯಾಗುತ್ತಿದ್ದಂತೆಯೇ ಪಂಚಾತಾರಾ ಹೋಟೆಲ್, ಖಾಸಗಿ ಗೆಸ್ಟ್ ಹೌಸ್‌ಗಳಲ್ಲಿ ಗುಂಪು ಸೇರಿ ಸರ್ಕಾರದ ಬಗ್ಗೆ ಚರ್ಚೆ ನಡೆಸಿರುವುದು ಗುಟ್ಟೇನಲ್ಲ.

ಕಳೆದ ಎರಡು ದಿನಗಳ ಹಿಂದೆಯಷ್ಟೇ ಬೆಂಗಳೂರು ನಗರದ ಮೂವರು ಮಾಜಿ ಸಚಿವರುಗಳು ಹಾಗೂ ಕೆಲ ಕಾಂಗ್ರೆಸ್ ಶಾಸಕರುಗಳು ಸಭೆ ಸೇರಿ ಸಮ್ಮಿಶ್ರ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನವನ್ನು ಹೊರ ಹಾಕಿರುವುದು ಗುಟ್ಟೇನಲ್ಲ. ಸಮ್ಮಿಶ್ರ ಸರ್ಕಾರದ ನಾಯಕರ ನಿರ್ಲಕ್ಷ್ಯದ ವಿರುದ್ಧ ಪಕ್ಷದ ಹೈಕಮಾಂಡ್‌ಗೆ ದೂರು ನೀಡಿದ್ದರೂ, ಲೋಕಸಭಾ ಚುನಾವಣೆವರೆಗೂ ಎಲ್ಲವನ್ನು ಸಹಿಸಿಕೊಂಡು ಹೋಗಿ ಎಂಬ ವರಿಷ್ಠರ ಸೂಚನೆ ಈ ಅತೃಪ್ತ ಶಾಸಕರುಗಳ ಬೇಗುದಿಯನ್ನು ಮತ್ತಷ್ಟು ಹೆಚ್ಚಿಸಿದೆ.

ಕಾಂಗ್ರೆಸ್ ಪಾಳೇಯದಲ್ಲಿ ಈಗಿರುವ ಪರಿಸ್ಥಿತಿಯನ್ನು ಅವಲೋಕಿಸಿದರೆ ಬಿಜೆಪಿಯ ಆಪರೇಷನ್ ಕಮಲ ಯಶಸ್ವಿಯಾಗುವ ಲಕ್ಷಣಗಳು ಹೆಚ್ಚಾಗಿವೆ.
ಪಕ್ಷ ರಾಜಕಾರಣಕ್ಕಿಂತ ತಮ್ಮ ಕ್ಷೇತ್ರ ಹಾಗೂ ಕ್ಷೇತ್ರದ ಜನರ ಅಭಿವೃದ್ಧಿಯೇ ಮುಖ್ಯ ಎಂದು ಭಾವಿಸಿರುವ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಕೆಲ ಶಾಸಕರು ಶ್ರಾವಣಮಾಸದಲ್ಲಿ ಬಿಜೆಪಿಯತ್ತ ಮುಖ ಮಾಡಿದರೆ ಅದು ಅಚ್ಚರಿಯೇನಲ್ಲ. ಅಷ್ಟರ ಮಟ್ಟಿಗೆ ಬಿಜೆಪಿ ಅತೃಪ್ತ ಶಾಸಕರ ಸಂಪರ್ಕದಲ್ಲಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕೆಲ ಹಿರಿಯ ನಾಯಕರುಗಳು ಶಾಸಕರನ್ನು ಸೆಳೆಯುವ ಪ್ರಯತ್ನ ನಡೆಸಿದ್ದು, ಉತ್ತರ ಕರ್ನಾಟಕ ಭಾಗದ ಕಾಂಗ್ರೆಸ್‌ನ ಕೆಲ ಶಾಸಕರುಗಳಿಗೆ ಈಗಾಗಲೇ ಗಾಳ ಹಾಕಲಾಗಿದ್ದು, ಸೂಕ್ತ ಸಂದರ್ಭ ನೋಡಿಕೊಂಡು ಈ ಎಲ್ಲ ಶಾಸಕರು ಬಿಜೆಪಿಯತ್ತ ಮುಖ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಶ್ರಾವಣ ಮಾಸದಲ್ಲಿ ಏನು ಬೇಕಾದರೂ ಆಗಬಹುದು, ಕಾದು ನೋಡಿ ಎಂದು ಕೆಲ ಶಾಸಕರು ತಮ್ಮ ಆಪ್ತ ವಲಯದಲ್ಲಿ ಹೇಳಿರುವುದು ಸಮ್ಮಿಶ್ರ ಸರ್ಕಾರದ ಭವಿಷ್ಯಕ್ಕೆ ಮಾರಕವಾಗುವ ಸಾಧ್ಯತೆಗಳು ಹೆಚ್ಚಿವೆ.

ತಲೆ ನೋವು

ಅತೃಪ್ತ ಶಾಸಕರಿಗೆ ಬಿಜೆಪಿ ಗಾಳ ಹಾಕಿರುವ ಮಾಹಿತಿ ಪಕ್ಷದ ಹೈಕಮಾಂಡ್‌ಗೂ ತಲುಪಿದ್ದು, ವರಿಷ್ಠ ನಾಯಕರ ತಲೆಬೇನೆ ಮತ್ತಷ್ಟು ಹೆಚ್ಚಿದೆ.

ಬಿಜೆಪಿ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಪ್ರಯತ್ನ ನಡೆಸಿದೆ ಎಂಬುದಕ್ಕೆ ಪುಷ್ಠಿ ನೀಡುವಂತೆ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್‌ಗುಂಡೂರಾವ್ ಬಿಜೆಪಿ ವಿರುದ್ಧ ಹರಿಹಾಯ್ದಿದ್ದರು.

ನಿನ್ನೆಯಷ್ಟೇ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಿಜೆಪಿ ಆಪರೇಷನ್ ಕಮಲಕ್ಕೆ ಕೈ ಹಾಕಿದರೆ ಕಾಂಗ್ರೆಸ್ ಸಹ ಬಿಜೆಪಿ ಶಾಸಕರನ್ನು ಸೆಳೆಯಲಿದೆ ಎಂಬ ಸೂಚನೆಯನ್ನೂ ನೀಡಿರುವುದು ರಾಜ್ಯ ರಾಜಕೀಯದಲ್ಲಿ ಎಲ್ಲವೂ ಸರಿ ಇಲ್ಲ. ಮುಂದೆ ಯಾವ ಬದಲಾವಣೆ ಬೇಕಾದರೂ ಆಗಬಹುದು ಎಂಬುದನ್ನು ಖಚಿತಪಡಿಸಿದೆ.

Leave a Comment